Advertisement
ಶನಿವಾರ ಮತ್ತು ರವಿವಾರ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು, ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ವಿವಿಧ ದೇಗುಲಗಳಿಗೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ.
ಸುಬ್ರಹ್ಮಣ್ಯ: ದೂರದ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರಲ್ಲದೇ ವಿವಿಧ ಸೇವೆಗಳನ್ನು ನೆರವೇರಿಸಿದರು. ಸುಬ್ರಹ್ಮಣ್ಯ ಪೇಟೆಯಲ್ಲೂ ಅಧಿಕ ವಾಹನ ಸಂಚಾರ ಹಾಗೂ ಜನ ದಟ್ಟನೆ ಕಂಡುಬಂದಿದೆ. ಶ್ರೀಕೃಷ್ಣ ಮಠ
ಉಡುಪಿ: ಶ್ರೀಕೃಷ್ಣ ಮಠಕ್ಕೆ ರವಿವಾರ ಸುಮಾರು 5,000 ಭಕ್ತರು ಭೇಟಿ ನೀಡಿದರು. ಸುಮಾರು 3,000 ಭಕ್ತರು ಭೋಜನ ಸ್ವೀಕರಿಸಿದರು. ಲಾಕ್‌ಡೌನ್ ತೆರವಾದ ಬಳಿಕ ಭಕ್ತರ ಸಂಖ್ಯೆ ಏರುಗತಿಯಲ್ಲಿದೆ.
Related Articles
ಕಳೆದ ಎರಡು ದಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. ದೇವಿಯ ದರ್ಶನಕ್ಕೆ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗಿತ್ತು.
Advertisement
ಇದನ್ನೂ ಓದಿ:ಮಕ್ಕಳಿಗೆ ಕೆರೆಯಿಂದ ಶಾಲೆಗೆ ನೀರು ತರುವ ಕಾಯಕ
ಧರ್ಮಸ್ಥಳ: 1,050 ಕೆ.ಜಿ. ತೂಕದ ಘಂಟೆ ಕೊಡುಗೆಬೆಳ್ತಂಗಡಿ: ನಾಡಿನ ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನೇತ್ರಾವತಿ ಸ್ನಾನಘಟ್ಟ, ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿದ್ದವು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮುಂಬಯಿಯ ದಾನಿಯೊಬ್ಬರು ಗಾಂಧಿ ಜಯಂತಿ ಪ್ರಯುಕ್ತ 1,050 ಕೆ.ಜಿ. ತೂಕದ ಕಂಚಿನ ಘಂಟೆಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಉಳಿದಂತೆ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ, ಸುರ್ಯ ಸದಾಶಿವರುದ್ರ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಸಮರ್ಪಿಸಿದರು. ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇಗುಲಕ್ಕೆ ಸಾಧಾರಣ ಸಂಖ್ಯೆಯ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಮಲ್ಪೆ /ಪಣಂಬೂರು: ಕೋವಿಡ್ ಮತ್ತು ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ವಿರಳವಾಗಿದ್ದ ಬೀಚ್‌ಗಳಲ್ಲಿ ಈಗ ವಾರಾಂತ್ಯದಲ್ಲಿ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಮಲ್ಪೆ ಬೀಚ್‌ಗೆ ಎರಡು ವಾರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಗಾಂಧಿ ಜಯಂತಿಯ ರಜೆಯ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಬೆಳಗ್ಗಿನಿಂದಲೇ ಬೀಚ್ ಕಿಕ್ಕಿರಿದು ತುಂಬಿತ್ತು. ಸಂಜೆಯಾಗುತ್ತಲೇ ಸ್ಥಳೀಯರೂ ಸೇರಿ ಜನ ಜಂಗುಳಿಯಾಗುತ್ತಿದೆ. ಸಂಚಾರ ದಟ್ಟಣೆ ಸಮಸ್ಯೆ, ಬೀಚ್‌ನ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಆರಂಭವಾಗಿದೆ. ಸೈಂಟ್‌ಮೇರೀಸ್‌ನಲ್ಲಿ ವಿರಳ
ಸೈಂಟ್‌ಮೇರೀಸ್ ದ್ವೀಪಕ್ಕೆ ಪ್ರವಾಸಿ ಬೋಟುಗಳ ಸಂಚಾರ 10 ದಿನಗಳ ಹಿಂದೆ ಆರಂಭಗೊಂಡಿದೆ. ಆದರೆ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ಶನಿವಾರ ಮತ್ತು ರವಿವಾರ 6 ಟ್ರಿಪ್ ಮಾಡಲಾಗಿದೆ. ಉಳಿದ ದಿನದಲ್ಲಿ ಎರಡು ಟ್ರಿಪ್‌ಗ್ಳನ್ನಷ್ಟೇ ಮಾಡಲಾಗಿತ್ತು ಎಂದು ಪ್ರವಾಸಿ ಬೋಟ್ ಸಂಚಾರದ ವ್ಯವಸ್ಥಾಪಕರು ತಿಳಿಸಿದ್ದಾರೆ. ಸುರತ್ಕಲ್, ಪಣಂಬೂರು ಬೀಚ್
ವಾರದ ರಜಾ ದಿನಗಳಲ್ಲಿ ಪಣಂಬೂರು, ಸುರತ್ಕಲ್, ತಣ್ಣೀರುಬಾವಿ ಬೀಚ್‌ನತ್ತಾ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಜೀವ ರಕ್ಷಕರನ್ನು ನೇಮಿಸಬೇಕಿದೆ. ಮಡಿಕೇರಿ: ಪ್ರವಾಸಿಗರಿಗೆ ನಿರ್ಬಂಧ
ಮಡಿಕೇರಿ: ನಗರದ ಪ್ರವಾಸಿ ತಾಣ ಗಳಾದ ರಾಜಾಸೀಟ್ ಉದ್ಯಾನವನ, ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾ ಲಯ, ಕೋಟೆ, ಗದ್ದಿಗೆ ಮತ್ತು ನೆಹರೂ ಮಂಟಪಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅ. 7ರಿಂದ 17ರ ವರೆಗೆ ಪ್ರವಾಸಿಗರು ಈ ಪ್ರವಾಸಿತಾಣಗಳಿಗೆ ಬರುವಂತಿಲ್ಲ ಎಂದು ಕೊಡಗು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ ಉಳಿದ ಪ್ರವಾಸಿತಾಣಗಳಲ್ಲಿ ಕೋವಿಡ್ ನಿಯಮವನ್ನು ಕಡ್ಡಾಯ ವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಮನವಿ ಮಾಡಿದ್ದಾರೆ. ಮೂವರ ರಕ್ಷಣೆ
ಪ್ರವಾಸಿಗರ ಅಜಾಗ್ರತೆಯಿಂದ ಅಪಾಯಕ್ಕೆ ಸಿಲುಕುತ್ತಿರುವ ಘಟನೆಗಳು ಬೀಚ್‌ಗಳಲ್ಲಿ ಮರುಕಳಿಸುತ್ತಿವೆ. ರವಿವಾರ ಮಧ್ಯಾಹ್ನ ಬೀಚ್‌ನಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಜೀವರಕ್ಷಕ ತಂಡದವರು ರಕ್ಷಿಸಿದ ಎರಡು ಪ್ರತ್ಯೇಕ ಘಟನೆಗಳು ಮಲ್ಪೆಯಲ್ಲಿ ನಡೆದಿದೆ. ವಾರದ ಹಿಂದೆಯೂ ಎರಡು ಸಲ ನಡೆದ ಇಂತಹ ಘಟನೆಯಲ್ಲಿ 6 ಮಂದಿಯನ್ನು ರಕ್ಷಿಸಲಾಗಿತ್ತು.