ಹುಬ್ಬಳ್ಳಿ: ಪ್ಲಾಸ್ಟಿಕ್ ನಿಷೇಧ ಕೇವಲ ಕಾನೂನು ಜಾರಿಯಿಂದ ಸಾಧ್ಯವಿಲ್ಲ. ಇದರ ಬಗ್ಗೆ ಜನರಲ್ಲಿ ಚಿಂತನಾ ಲಹರಿ ಬದಲಾಗಿ ಜಾಗೃತಿ ಮೂಡಬೇಕು. ಸಾಮಾಜಿಕ ಬದಲಾವಣೆ ಆಗಬೇಕಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.
ಅದಮ್ಯ ಚೇತನದ ಪ್ಲೇಟ್ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇಂತಹ ವಿಷಯಗಳು ಕಾನೂನು ಮೂಲಕ ಅನುಷ್ಠಾನ ಸಾಧ್ಯವಾಗುವುದಿಲ್ಲ. ಜನರಲ್ಲಿ ಬದಲಾವಣೆ ಬಂದಾಗ ಮಾತ್ರ ಸಾಧ್ಯ.
ಅದೇ ರೀತಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಆದರೆ, ಜನರು ಈ ಬಗ್ಗೆ ಸ್ಪಂದನೆ ತೋರದಿದ್ದರೆ ಅದು ಸಾಧ್ಯವಾಗದು ಎಂದರು. ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯಗಳ ಕುರಿತಾಗಿ ಜನಪ್ರತಿನಿಧಿಗಳಾಗಿ ನಮಗೇ ಅನೇಕ ವಿಷಯಗಳು ತಿಳಿದಿಲ್ಲವಾಗಿವೆ.
ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆಯ ಅಪಾಯಗಳು, ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲಾಗುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು. ಅದಮ್ಯ ಚೇತನ ಸಂಸ್ಥೆ ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಹತ್ವದ ಕಾರ್ಯ ಮಾಡುತ್ತಿದೆ. ಕೇಂದ್ರ ಸಚಿವರ ಅನಂತಕುಮಾರ ಅವರ ವ್ಯಾಪ್ತಿಗೆ ಪ್ಲಾಸ್ಟಿಕ್ ವಿಷಯ ಬರುತ್ತದೆ.
ಅವರು ಪ್ಲಾಸ್ಟಿಕ್ ಬಳಕೆಯಿಂದ ಸಮಾಜವನ್ನು ಮುಕ್ತ ಮಾಡುವ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. ಅದಮ್ಯ ಚೇತನ ಪ್ಲಾಸ್ಟಿಕ್ ಬಳಕೆಯಿಂದ ಜನರನ್ನು ದೂರವಾಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಪ್ಲೇಟ್ ಬ್ಯಾಂಕ್ ಆರಂಭಿಸಿ ವಿವಿಧ ಸಭೆ-ಸಮಾರಂಭಗಳಿಗೆ ಉಚಿತವಾಗಿ ಸ್ಟೀಲ್ ತಟ್ಟೆ, ಲೋಟ ನೀಡಿಕೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು