ಹುಬ್ಬಳ್ಳಿ: ಒಂದೆಡೆ ನೆರೆಯಿಂದ ತತ್ತರಿಸಿರುವ ಜನರು, ಮತ್ತೂಂದೆಡೆ ಇದೀಗ ಮತ್ತೆ ಸುರಿಯುತ್ತಿರುವ ಮಳೆ. ಇವೆರಡೂ ಗಣೇಶೋತ್ಸವ ಉತ್ಸಾಹಕ್ಕೆ ಅಡ್ಡಿಯಾಗತೊಡಗಿದೆ.
ಭಾರೀ ಮಳೆ, ಪ್ರವಾಹ ಸಂಕಷ್ಟ ನಡುವೆಯೇ ಆಗಮಿಸಿದ್ದ ಗಜಮುಖನನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ನಗರದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಗಣೇಶೋತ್ಸವ ಆಚರಣೆ ಉತ್ಸಾಹ ಕುಂದುವಂತೆ ಮಾಡಿದೆ.
ಜನರ ಕೊರತೆ: ನಗರದಲ್ಲಿ ವಿವಿಧ ಮಂಡಳಗಳಿಂದ ಪ್ರತಿಷ್ಠಾಪನೆ ಮಾಡಲಾಗುವ ಗಣೇಶನ ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಿದ್ದರು. ಆದರೆ ಗಣೇಶ ಪ್ರತಿಷ್ಠಾಪನೆ ಮಾಡಿ ಐದು ದಿನ ಕಳೆದರೂ ಜನರ ಕೊರತೆ ಎದ್ದು ಕಾಣುತ್ತಿದೆ. ನಗರ ಪ್ರದೇಶದ ಜನರು ಐದನೇ ದಿನದ ಗಣೇಶ ವಿಸರ್ಜನೆ ನಂತರ ಹೆಚ್ಚಾಗಿ ಗಣೇಶ ವೀಕ್ಷಣೆಗೆ ಆಗಮಿಸುತ್ತಾರೆ. ಆದರೆ ಇದೀಗ ಮಳೆಯ ಪರಿಣಾಮದಿಂದ ಗಣೇಶ ವೀಕ್ಷಣೆಗೆ ಜನರೇ ಬರುತ್ತಿಲ್ಲ. ರವಿವಾರವಾದರೂ ಗಣೇಶ ಮೂರ್ತಿಗಳ ವೀಕ್ಷಣೆಗೆ ಜನರ ಸಂಖ್ಯೆ ಹೆಚ್ಚುವುದೇ ಕಾದು ನೋಡಬೇಕಾಗಿದೆ.
ಗ್ರಾಮೀಣ ಜನರೂ ಇಲ್ಲ: ಈ ಹಿಂದೆ ಗಣೇಶೋತ್ಸವಕ್ಕೆ ಗ್ರಾಮೀಣ ಜನರು ಟ್ರ್ಯಾಕ್ಟರ್, ಬಂಡಿ ಇನ್ನಿತರ ಮೂಲಕ ತಂಡೋಪ ತಂಡವಾಗಿ ಆಗಮಿಸಿ ತಡರಾತ್ರಿವರೆಗೂ ಗಣೇಶಮೂರ್ತಿಗಳ ಹಾಗೂ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಗ್ರಾಮೀಣ ಜನರ ಆಗಮಿಸುವಿಕೆಯೂ ಕಡಿಮೆಯಾಗಿದೆ. ಜನರ ಆಗಮನ ಇಲ್ಲದೆ ಗಣೇಶಮೂರ್ತಿಗಳ ಪ್ರತಿಷ್ಠಾನ ಸ್ಥಾನಗಳು ಖಾಲಿ ಎನ್ನುವಂತಿವೆ. ಮಳೆಯ ಕಾರಣದಿಂದಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಕಳೆಗುಂದಿದಂತಾಗಿವೆ.
ಶನಿವಾರ ರಾತ್ರಿ ಜನಾಗಮನ: ರವಿವಾರ ರಜಾ ದಿನವಾಗಿರುವುದರಿಂದ ಶನಿವಾರ ರಾತ್ರಿ ಜನರು ಗಣೇಶ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಕಳೆದ ಐದು ದಿನಗಳಿಂದ ಹೊರಬರದ ಜನರು 6 ದಿನ ಕಳೆದ ನಂತರ ಗಣೇಶ ವೀಕ್ಷಣೆಗೆ ಆಗಮಿಸಿರುವುದು ಕಂಡು ಬಂದಿತು.
ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ರಸ್ತೆಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಗ್ರಾಮೀಣ ಭಾಗದ ಜನರು ಸ್ಥಿತಿ ತುಂಬಾ ಕೆಟ್ಟಿದೆ, ಜೊತೆಯಲ್ಲಿಯೇ ನಗರ ಪ್ರದೇಶದ ಜನರ ಸ್ಥಿತಿ ಹೇಳತೀರದಾಗಿದೆ. ಇಂತಹ ಸ್ಥಿತಿಯಲ್ಲಿರುವ ಜನರು ನಗರದತ್ತ ಹಬ್ಬದ ಆಚರಣೆಗೆ ಹೇಗೆ ಬರುತ್ತಾರೆ. ಇದರಿಂದ ಈ ವರ್ಷದ ಗಣೇಶೋತ್ಸವ ಆಚರಣೆ ನಿರಾಯಾಸವಾಗಿದೆ. ಹಬ್ಬದ ಉತ್ಸಾಹ ಯಾರಲ್ಲೂ ಇಲ್ಲವಾಗಿದೆ.
•ಧರ್ಮರಾಜ ಟೀಕಣ್ಣವರ,ಮಂಡಳದ ಪದಾಧಿಕಾರಿ
•ಬಸವರಾಜ ಹೂಗಾರ