Advertisement

ಮಳೆಗೆ ಹರಿಯಿತು ಜನತೆ ಕಣ್ಣೀರು

09:49 AM Oct 15, 2017 | Team Udayavani |

ಬೆಂಗಳೂರು: ತಂದೆ-ತಾಯಿ ನೀರಿನಲ್ಲಿ ಮುಳುಗುತ್ತಿದ್ದರೂ ನೆರವಿಗೆ ಧಾವಿಸಲಾಗದ ದುಸ್ಥಿತಿ. ಕಣ್ಣಮುಂದೆಯೇ ತಮ್ಮವರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಕಾಪಾಡಿಕೊಳ್ಳಲಾಗದ ಅಸಹಾಯಕತೆ. ಮೋಡ ಮುಸುಕಿದ ವಾತಾವರಣ ಕಂಡು ಆತಂಕಕ್ಕೆ ಒಳಗಾಗಿ ರಸ್ತೆಗೆ ಬಂದ ನಿವಾಸಿಗಳು.  ಹೌದು, ನಗರದಲ್ಲಿ ಶುಕ್ರವಾರ ಮಳೆರಾಯನ ಆರ್ಭಟಕ್ಕೆ ಕುರುಬರಹಳ್ಳಿಯಲ್ಲಿ 5 ಮಂದಿ ಅಮಾಯಕರು ಬಲಿಯಾಗಿದ್ದು, ತಮ್ಮವರನ್ನು ಕಣ್ಣೆದುರು ಕಳೆದುಕೊಳ್ಳುತ್ತಿದ್ದರೂ ಏನು ಮಾಡಲಾಗಲಿಲ್ಲ ಎಂದು ಕುಟುಂಬ ಸದಸ್ಯರು ಶನಿವಾರ ಸಂಕಟ ವ್ಯಕ್ತಪಡಿಸಿದ ದೃಶ್ಯ ಮನಕಲುಕುವಂತಿತ್ತು.

Advertisement

ಶುಕ್ರವಾರ ಕುರುಬರಹಳ್ಳಿ ಭಾಗದಲ್ಲಿ ಮಳೆರಾಯನ ಅಬ್ಬರಕ್ಕೆ 3 ಕುಟುಂಬಗಳ ಜೀವನ ಮೂರಾ ಬಟ್ಟೆಯಾಗಿದೆ. ನಿತ್ಯ ಮನೆಯಿಂದ ಹರಿಯುವ ರಾಜಕಾಲುವೆ ನೀರು ಶುಕ್ರವಾರ ಮೃತ್ಯುವಾಗಿ 5 ಅಮಾಯಕ ಜೀವಗಳನ್ನು ಬಲಿ ಪಡೆದಿದ್ದು, ಕೇವಲ ಒಂದು ಗಂಟೆ ಸುರಿದ ಮಳೆ ನೂರಾರು ಕುಟುಂಬಗಳ ಬದುಕುಗಳನ್ನು ಬೀದಿಗೆತಳ್ಳಿದೆ. ಈ ಹಿಂದೆ ಸುರಿದ ಭಾರಿ ಮಳೆಗೆ ರಾಜಕಾಲುವೆ ಉಕ್ಕಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಶುಕ್ರವಾರ ಸುರಿದ ಭಾರಿ ಮಳೆಗೆ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಗೋಡೆಕುಸಿದು ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.

ಮದುವೆ ಮನೆಯೀಗ, ಸಾವಿನ ಮನೆ: ಇನ್ನೊಂದು ತಿಂಗಳಲ್ಲಿ ಮದುವೆ ಮನೆಯಾಗಿ ಸಿಂಗಾರಗೊಳ್ಳ ಬೇಕಿದ್ದ ಮನೆ, ಮಳೆಯಿಂದಾಗಿ ಸಾವಿನ ಮನೆಯಾಗಿದೆ. ಮಳೆಯಿಂದಾಗಿ ಮನೆ ಕಾಂಪೌಂಡ್‌ ಕುಸಿದು ಮೃತಪಟ್ಟ ಶಂಕರಪ್ಪ, ಕಮಲಮ್ಮ ಅವರ 2ನೇ ಪುತ್ರಿ ವಾಣಿಯರಿಗೆ ಕಾಮಾಕ್ಷಿಪಾಳ್ಯದ ಪ್ರಭಾಕರ್‌ ಅವರೊಂದಿಗೆ ವಾರದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡು ನ.10ರಂದು ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಭಾರಿ ಮಳೆಯಿಂದಾಗಿ ಮನೆಯಲ್ಲಿದ್ದ ಶಂಕರಪ್ಪ, ಕಮಲಮ್ಮ ಹಾಗೂ ಮಕ್ಕಳಾದ ಗಿರೀಶ್‌, ವಾಣಿ ವಸ್ತುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿದ್ದರು. ಈ ವೇಳೆ ನೀರಿನ ಮಟ್ಟ ಹೆಚ್ಚಾದಂತೆ ರಕ್ಷಣೆಗೆ ಮನೆ ಮೇಲೆ ಹೋಗಲು ಮುಂದಾದಾಗ ಕಾಂಪೌಂಡ್‌ ಕುಸಿದು ದಂಪತಿ ಮೇಲೆ ಕಲ್ಲುಗಳು ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದರು. ಈ ವೇಳೆ ಮಗ ಗಿರೀಶ್‌ರನ್ನು ರಕ್ಷಿಸಲು ಯತ್ನಿಸಿದಾದರೂ ನೀರಿನ ಹರಿವು ಹೆಚ್ಚಾದ ಪರಿಣಾಮ ನೀರಿನ ಮುಳುಗಲಾರಂಭಿಸಿದಾಗ ಮನೆಯಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.

ಮೂಲತಃ ಮುಳಬಾಗಿಲು ತಾಲೂಕಿನ ವಿರುಪಾಕ್ಷಿ ಗ್ರಾಮದವರಾಗಿದ್ದಾರೆ. ಇವರ ಮಕ್ಕಳ ಪೈಕಿ ದೊಡ್ಡ ಮಗಳಾದ ಭಾವನಿ ಎಂಬುವರಿಗೆ ಮದುವೆಯಾಗಿದ್ದು, ವಾಣಿ ಎಂಬುವರಿಗೆ ಮದುವೆ ನಿಶ್ಚಯವಾಗಿತ್ತು. ದಂಪತಿ ಮೃತದೇಹಗಳನ್ನು ಶನಿವಾರ ಮಧ್ಯಾಹ್ನ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು.

ಕ್ಷಣಮಾತ್ರದಲ್ಲಿ ಕೊಚ್ಚಿ ಹೋದರು: ಕುರುಬರಹಳ್ಳಿ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಹೊರಬಂದ ನಿಂಗಮ್ಮ, ಪುಷ್ಪ ಎಂಬುವವರು ಕೊಚ್ಚಿ ಹೋಗಿದ್ದು, ಈವರೆಗೆ ಶವ ಪತ್ತೆಯಾಗಿಲ್ಲ. ಮನೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಶಿವದೊಡ್ಡಯ್ಯ ಅವರು 2ನೇ ಮಗಳಾದ ಮೀನಾಕ್ಷಿ ಮತ್ತು ಮೊಮ್ಮೊಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಬಂದಿದ್ದರು. ಅವರ ಹಿಂದೆ ತಾಯಿ ನಿಂಗಮ್ಮ ಹಾಗೂ ಮಗಳು ಪುಷ್ಪ ಅವರ ಹಿಂದೆ ಬರುವ ವೇಳೆ ನೀರಿನ ರಭಸ ಹೆಚ್ಚಾಗಿದ್ದು, ಶಿವದೊಡ್ಡಯ್ಯ ಹಾಗೂ ಮೀನಾಕ್ಷಿ ಮನೆ ಬಳಿಯಿಂದ ಬಟ್ಟೆ ಒಣಗಿಸುವ ಕಂಬಿ ಹಿಡಿದಾಗ ತಾಯಿ ಮಗಳು ಕ್ಷಣಮಾತ್ರದಲ್ಲಿ ಕೊಚ್ಚಿ ಹೋಗಿದ್ದಾರೆ.

Advertisement

3 ತಿಂಗಳ ಹಿಂದೆಯೇ ಮನೆ ಖಾಲಿ ಮಾಡುವುದಾಗಿ ಮುಂಗಡ ಹಣ ಹಿಂತಿರುಗಿಸುವಂತೆ ಮನೆಯ ಮಾಲಿಕರಿಗೆ ಮನವಿ ಮಾಡಿದ್ದು, ಮಾಲಿಕರು ಹಣ ನೀಡಿದೆ ಸತಾಯಿಸಿದ್ದಾರೆ. ಒಂದೊಮ್ಮೆ ಅವರು ಹಣ ನೀಡಿದ್ದರೆ ತಾಯಿ-ತಂಗಿ ನಮ್ಮಿಂದ ದೂರವಾಗುತ್ತಿರಲಿಲ್ಲ ಎಂದು ಶೋಭಾ ನೋವು ತೋಡಿಕೊಂಡರು.  

ಅರ್ಚಕರು ದೊಡ್ಡಬಳ್ಳಾಪುರದವರು 
ಶುಕ್ರವಾರ ಸಂಜೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಮುಗಿಸಿ ಹೊರಡುವ ವೇಳೆಗೆ ಮಳೆ ಶುರುವಾಗಿದೆ. ಭಾರೀ ಮಳೆಯಿಂದಾಗಿ ದೇವಾಲಯದ ಆವರಣದಲ್ಲಿ ನೀರು ತುಂಬಿಕೊಳ್ಳ ಲಾರಂಭಿಸಿದ್ದು, ದೇವಾಲಯಕ್ಕೆ ಆಗಮಿಸಿದ ಲಕ್ಷ್ಮೀ ಎಂಬುವವರು ನೀರು ಹೋಗುವ ಪೈಪ್‌ ಬಳಿ ಸೇರಿಕೊಂಡಿದ್ದ ತ್ಯಾಜ್ಯ ತೆರೆವಿಗೆ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅರ್ಚಕ ವಾಸುದೇವ್‌ ಭಟ್‌, ಲಕ್ಷ್ಮೀ ಅವರಿಂದ ಕೋಲು ಪಡೆದು ತ್ಯಾಜ್ಯ ತೆರವುಗೊಳಿಸುವ ವೇಳೆ ಚರಂಡಿ ಸ್ಲ್ಯಾಬ್  ಮುರಿದು ಚರಂಡಿಯಲ್ಲಿ ಕೊಚ್ಚಿ ಹೋದರು. ರಾತ್ರಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರಾದರೂ ಶವ ಸಿಕ್ಕಿರಲಿಲ್ಲ. ಶನಿವಾರ ಬೆಳಗ್ಗೆ ಸುಮಾರು ಒಂದೂವರೆ ಕಿಲೋ ಮೀಟರ್‌ ದೂರದಲ್ಲಿ ಕಾವೇರಿ ನಗರ ಬಳಿ ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂಲತಃ ದೊಡ್ಡಬಳ್ಳಾಪುರದವರಾದ ವಾಸುದೇವ್‌, ಕಳೆದ 10 ವರ್ಷಗಳಿಂದ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ತಾಯಿ ರಾಧಾ, ಪತ್ನಿ ರೂಪ, ಮಕ್ಕಳಾದ ಅನಂತಕೃಷ್ಣ ಪ್ರಣೀತ್‌ ಹಾಗೂ ಪ್ರೇರಣಾರನ್ನು ಅಗಲಿದ್ದಾರೆ. ಅಮೇರಿಕಾದಲ್ಲಿ ರುವ ಸಹೋದರ ರಾಘವ ಅವರು ಬಂದ ನಂತರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾ ಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಡೀಸೆಲ್‌ಗೆ ನೀರು: ನಗರದ ಶುಕ್ರವಾರದ ಮಳೆ ಅವಾಂತರದ ಬಿಸಿ ಬಿಎಂಟಿಸಿ ವೋಲ್ವೊ ಬಸ್‌ಗಳಿಗೂ ತಟ್ಟಿತು. ವೋಲ್ವೊ ಬಸ್‌ ಗಳಿಗೆ ತುಂಬಲು ಇಟ್ಟಿದ್ದ ಡೀಸೆಲ್‌ ಟ್ಯಾಂಕ್‌ಗೆ ಮಳೆ ನೀರು ಸೇರಿಕೊಂಡು, ಬಸ್‌ಗಳಿಗೆ ಡೀಸೆಲ್‌ ಇಲ್ಲದಂತಾಯಿತು. ಇದರಿಂದ ಮಧ್ಯಾಹ್ನದವರೆಗೂ ಸುಮಾರು 30 ವೋಲ್ವೊ ಬಸ್‌ಗಳು ರಸ್ತೆಗಿಳಿಯಲಿಲ್ಲ. ಡಿಪೋ-13 ಕತ್ರಿಗುಪ್ಪೆಯಲ್ಲಿ ಈ ಘಟನೆ ನಡೆದಿದೆ.
ವೋಲ್ವೊ ಬಸ್‌ಗಳಿಗೆ ಭರ್ತಿ ಮಾಡಲು ಸುಮಾರು ನಾಲ್ಕು ಸಾವಿರ ಲೀಟರ್‌ ಡೀಸೆಲ್‌ ಅನ್ನು ಡಿಪೋದಲ್ಲಿದ್ದ ಟ್ಯಾಂಕ್‌ನಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ಮಳೆ ನೀರು ಹರಿದು ಡೀಸೆಲ್‌ನಲ್ಲಿ ಮಿಶ್ರಣವಾಗಿದೆ. ಶನಿವಾರ ಬೆಳಿಗ್ಗೆ ಸಿಬ್ಬಂದಿ ಬಸ್‌ಗಳಿಗೆ ಡೀಸೆಲ್‌ ತುಂಬುವಾಗ ಘಟನೆ ಬೆಳಕಿಗೆಬಂದಿದೆ. ಭಾರತ್‌ ಪೆಟ್ರೋಲಿಯಂಗೆ ಮಾಹಿತಿ ನೀಡಿದ ಬಳಿಕ ಸಿಬ್ಬಂದಿ ಬಂದು ಡೀಸೆಲ್‌ ಬೇರ್ಪಡಿಸಿದರು. ಮಧ್ಯಾಹ್ನದ ನಂತರ ಬಸ್‌ಸೌಲಭ್ಯ ಒದಗಿಸಲಾಯಿತು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು. ವೋಲ್ವೊ ಬಸ್‌ಗಳಲ್ಲಿ ಡೀಸೆಲ್‌ ಸಂಪೂರ್ಣ ಖಾಲಿಯಾಗಿತ್ತು ಎಂದಲ್ಲ. ಆದರೆ, ಬೆಳಿಗ್ಗೆಯಿಂದ ರಾತ್ರಿವರೆಗೂ ಕಾರ್ಯಾಚರಣೆ ಮಾಡಿ ಡಿಪೋಗೆ ಸೇರುವ ಬಸ್‌ಗಳಲ್ಲಿ ಡೀಸೆಲ್‌ ಕಡಿಮೆ ಇರುತ್ತದೆ. ಮಾರ್ಗಮಧ್ಯೆಯೇ ನಿಲ್ಲುವ ಸಾಧ್ಯತೆ ಇರುತ್ತದೆ. ಹಾಗಾಗಿ, ಕೆಲಹೊತ್ತು ಸೇವೆ ಸ್ಥಗಿತಗೊಳಿಸಬೇಕಾಯಿತು ಎಂದೂ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next