Advertisement
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳು ಉದ್ಘಾಟನೆಯತ್ತ ಸುಳಿಯದಿದ್ದರಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಭಾಗ್ಯವನ್ನೇ ಕಾಣಲಿಲ್ಲ. ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿಪಂ ಸಿಇಒ ಪಿ.ಎನ್.ರವೀಂದ್ರ ಸೇರಿದಂತೆ ಇಲಾಖೆ ಅಕಾರಿಗಳು ಮಾತ್ರ ಪಾಲ್ಗೊಂಡಿದ್ದರಿಂದ ಕಾರ್ಯಕ್ರಮವು ಉದ್ಘಾಟನೆಯಾಗಲಿಲ್ಲ.
Related Articles
Advertisement
ಪುಷ್ಪಗಳ ಕಾರುಬಾರು: ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೆಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್(ಮಿಕ್ಸ್‌ಡ್), ಡೇಲಿಯಾ(ಡ್ವಾರ್ಫ್), ಸಾಲ್ವಿಯಾ(ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ ಜಿನಿಯಾ, ಪೆಟೂನಿಯಾ, ಕಾಸ್ ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟಿರಿನಮ್, ಡಯಾಂತಸ್, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯಮಿಲ್ಲಿ ಫ್ಯಾಂಸಿಟಿಯಾ ಇತ್ಯಾದಿ ಸುಮಾರು ಹತ್ತು ಸಾವಿರ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಒಂದು ಲಕ್ಷಕ್ಕೂ ಹೆಚ್ಚು ಪುಷ್ಪ ಸಸಿಗಳನ್ನುಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡುತ್ತಿದೆ. ಪ್ರದರ್ಶನ: ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಇತರೆ ರೈತರು ಬೆಳೆದ ಹೂ, ತರಕಾರಿ, ಹಣ್ಣು ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ. ತಾರಸಿ ತೋಟ: ಹಣ್ಣು ಮತ್ತು ತರಕಾರಿಗಳು ಖನಿಜಾಂಶ, ಜೀವಸತ್ವಗಳು, ನಾರಿನಾಂಶ ಮತ್ತು ಸೂಕ್ಷ್ಮ ಪೋಷಕಾಂಶ ಹೊಂದಿದ್ದು, ಜೀವರಕ್ಷಕಗಳಾಗಿ ಕೆಲಸ ಮಾಡುತ್ತಿವೆ.ಯತೇಚ ಬಳಸಿದಲ್ಲಿ ವಿವಿಧ ಮಾರಕ ರೋಗ ಬರದಂತೆ ತಡೆಗಟ್ಟಬಹುದಾಗಿದೆ ಎಂದು ಡಬ್ಲ್ಯುಎಚ್‌ಒ ಮತ್ತು ಎಫ್‌ಎಒ ಸಂಸ್ಥೆಗಳಿಂದ ದೃಢಪಡಿಸಿವೆ. ಆಧುನಿಕ ಜೀವನ ಶೈಲಿಯಿಂದ ಹಣ್ಣು ಮತ್ತು ತರಕಾರಿಗಳ ಸೇವನೆ ಕಡಿಮೆಯಾಗುತ್ತಿದ್ದು, ಸಮತೋಲನ ಆಹಾರ ಕೊರತೆಯಿಂದ ಬಹಳಷ್ಟು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಕೈತೋಟ ಮತ್ತು ತಾರಸಿ ತೋಟಗಳನ್ನು ಮಿತವಾಗಿ ನೀರನ್ನು ಬಳಸಿ ಅಭಿವೃದ್ಧಿಗೊಳಿಸಲು ಉತ್ತೇಜನ ನೀಡುವ ಸಲುವಾಗಿ ಕೈತೋಟಗಳ ಮತ್ತು ತಾರಸಿ ತೋಟಗಳ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ. ಕೆತ್ತನೆ: ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ವೀರ ಸೈನಿಕರು, ಕನ್ನಡ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಹಣ್ಣು ಮತ್ತು ತರಕಾರಿ ಬಳಸಿ ಸುಂದರವಾಗಿ ಪ್ರತಿಬಿಂಬಿಸಲಾಗಿದೆ.
ಲ್ಯಾಂಡ್ ಸ್ಕೇಪಿಂಗ್: ವಿವಿಧ ಜಾತಿ ಹೂವುಗಳಿಂದ ಸೂರ್ಯನಿಂದ ಹೊರಹೊಮ್ಮುವ ಕಿರಣಗಳನ್ನು ಬಿಂಬಿಸುವ ಉದ್ಯಾನವನ ತಯಾರಿಸಲಾಗಿದೆ. ಈ ಮೂಲಕ ವಿವಿಧ ಜಾತಿಯ ಹೂವುಗಳ ಪರಿಚಯವಾಗುತ್ತಿದೆ.
ಹೊಂಡ: ಗುಡ್ಡದ ಮೇಲಿನಿಂದ ನೀರು ಹರಿದು ಬಂದು ಹೊಂಡದಲ್ಲಿ ನಿಲ್ಲುವ ಪ್ರಕೃತಿ ಬಿಂಬಿಸುವ ಪ್ರದರ್ಶನವಿದೆ. ಹೊಂಡದಲ್ಲಿ ಜೀವಂತ ಬಾತುಕೋಳಿ, ಗುಡ್ಡದಲ್ಲಿ ಜೀವಂತ ಮೊಲ ಬಿಟ್ಟು ಮಕ್ಕಳಿಗೆ ಸಂತೋಷ ನೀಡುವುದರ ಜೊತೆಗೆ ಜಲಪಾತದ ಮನಮೋಹಕ ದೃಶ್ಯ ಮನಸೂರೆಗೊಳ್ಳುತ್ತಿದೆ. ಕಾರಂಜಿ: ಚಿಕ್ಕ ಮತ್ತು ಚೊಕ್ಕದಾದ ನೀರಿನ ಕಾರಂಜಿ ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಂಡಿದೆ. ಹರಿಯಬ್ಬೆ ಹೆಂಜಾರಪ್ಪ