Advertisement

ಬೆಳ್ಳಂ ಬೆಳಗ್ಗೆ ಸುರಿದ ಮಳೆಗೆ ಜನತೆ ತತ್ತರ

11:12 AM Sep 25, 2018 | Team Udayavani |

ಮೈಸೂರು: ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಮೈಸೂರಿನ ಜನತೆ ತತ್ತರಿಸಿದ್ದಾರೆ. ನಸುಕಿನ ವೇಳೆಯಲ್ಲಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಸಾಕಷ್ಟು ಅವಾಂತರ ಸೃಷ್ಟಿಸಿದೆ. 

Advertisement

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗಿನ ಜಾವ 4.30ರ ವೇಳೆಗೆ ಆರಂಭಗೊಂಡ ಭಾರೀ ಮಳೆ ಬೆಳಗ್ಗೆ 7.30ರವರೆಗೂ ಎಡಬಿಡದೆ ಸುರಿಯಿತು. ನಿರಂತರವಾಗಿ ಸುರಿದ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ಮಳೆಯಿಂದಾಗಿ ನಗರದ ಹಿನಕಲ್‌, ಭರತ್‌ನಗರ, ಶಾಂತಿನಗರ, ಕಲ್ಯಾಣಗಿರಿ, ಮಹದೇವಪುರ, ಶಕ್ತಿನಗರ ಸೇರಿದಂತೆ ಹಲವು ಬಡಾವಣೆಗಳ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ಪರದಾಡಿದರು. ಈ ವೇಳೆ ಮಾಹಿತಿ ತಿಳಿದ ಪಾಲಿಕೆ ಅಭಯ ತಂಡದ ಸಿಬ್ಬಂದಿ ಮನೆಗಳಿಗೆ ನುಗ್ಗಿದ ನೀರನ್ನು ಹೊರ ತೆಗೆಯುವಲ್ಲಿ ಸಾರ್ವಜನಿಕರಿಗೆ ನೆರವಾದರು. 

ಕಟ್ಟಡದ ಗೋಡೆ ಕುಸಿತ: ನಗರದಲ್ಲಿ ಸುರಿದ ಮಳೆಯಿಂದಾಗಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಗ್ರಂಥಾಲಯ ಕಟ್ಟಡದ ಗೋಡೆಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಬಡಾವಣೆಯಲ್ಲಿ ಹಾದು ಹೋಗಿರುವ ದೊಡ್ಡ ಮೋರಿಗೆ ಹೊಂದುಕೊಂಡಿದ್ದ ಸರ್ಕಾರಿ ಗ್ರಂಥಾಲಯ ಕಟ್ಟಡದ ಹೊರಭಾಗದ ಗೋಡೆ ಮಳೆಯಿಂದಾಗಿ ಕುಸಿದಿದೆ.

ಆದರೆ, ಘಟನೆಯಲ್ಲಿ ಗ್ರಂಥಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಇನ್ನು ದಸರಾ ಅಂಗವಾಗಿ ನಗರದಲ್ಲಿ ಮುಚ್ಚಿದ್ದ ರಸ್ತೆಯ ಗುಂಡಿಗಳು ಮಳೆಯ ರಭಸಕ್ಕೆ ಯಥಾಸ್ಥಿತಿಗೆ ಬಂದಿದ್ದು, ವಾಹನಗಳ ಸವಾರರು ಪರದಾಡುವಂತಾಗಿದೆ. 

Advertisement

ಸಚಿವರ ಭೇಟಿ, ಪರಿಶೀಲನೆ: ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಿನಕಲ್‌ ಗ್ರಾಮದ ನನ್ನೇಶ್ವರಸ್ವಾಮಿ ದೇವಸ್ಥಾನದ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತ ಸ್ಥಳೀಯರು, ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಪರಿಣಾಮ ಪ್ರತಿಬಾರಿ ಜೋರಾಗಿ ಮಳೆಯಾದಗಲೂ ಇದೇ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹೊನ್ನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. 

ಮತ್ತೂಂದೆಡೆ ಗ್ರಾಮದಲ್ಲಿರುವ ಕಲ್ಯಾಣಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಕಲ್ಯಾಣಿಯ ಅಕ್ಕಪಕ್ಕದ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಚಿವ ಜಿ.ಟಿ.ದೇವೇಗೌಡ, ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next