Advertisement

ಧನಕ್ಕಾಗಿ ಅಂತರ ಮರೆತ ಜನ

04:36 PM Apr 14, 2020 | mahesh |

ಗದಗ: ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ನೆರವಾಗಲೆಂದು ಕೇಂದ್ರ ಸರಕಾರ ಜನ್‌ಧನ್‌ ಖಾತೆಗೆ 500 ರೂ. ಜಮೆ ಮಾಡಿದೆ. ಆದರೆ ಹಣಕ್ಕಾಗಿ ಮಹಿಳೆಯರು ಬ್ಯಾಂಕ್‌ಗಳಿಗೆ ಮುಗಿಬೀಳುತ್ತಿದ್ದು, ಸಾರ್ವಜನಿಕರ ಈ ನಡೆ ಕೋವಿಡ್-19 ಆಹ್ವಾನಿಸುವಂತಿದೆ. ಬಹುತೇಕ ಏ. 1ರಂದೇ ಜನ್‌ಧನ್‌ ಖಾತೆಗಳಿಗೆ 500 ರೂ. ಹಣ ಜಮೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ
“ತಕ್ಷಣವೇ ನಿಮ್ಮ ಹಣ ಡ್ರಾ ಮಾಡಬೇಕು. ಇಲ್ಲವೇ ಕೇಂದ್ರ ಸರಕಾರ 500 ರೂ. ಮರಳಿ ಪಡೆಯುತ್ತದೆ’ ಎಂಬ ವದಂತಿ ಹರಿದಾಡುತ್ತಿವೆ ಎನ್ನಲಾಗಿದೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಮಹಿಳೆಯರು ಬ್ಯಾಂಕ್‌ ಗಳಿಗೆ ಮುಗಿಬೀಳುತ್ತಿದ್ದಾರೆ.

Advertisement

2.51 ಲಕ್ಷ ಖಾತೆಗೆ ಜಮಾ: 2014ರಲ್ಲಿ ಜನ್‌ಧನ್‌ ಯೋಜನೆ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 7,07,254 ಖಾತೆಗಳನ್ನು ತೆರೆಯಲಾಗಿದೆ. ಆ ಪೈಕಿ 2,51,038 ಮಹಿಳೆಯರ ಖಾತೆಗಳಿದ್ದು, ಈಗಾಗಲೇ ತಲಾ 500 ರೂ. ಜಮಾ ಆಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳಿಂದ ಜನರು  ಗೊಂದಲಕ್ಕೀಡಾಗುತ್ತಿದ್ದು, ಹಣ ಬಿಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಧಾವಿಸುತ್ತಿದ್ದಾರೆ. ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಎದುರು ಬೆಳಗಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದಾರೆ. ಪೊಲೀಸರು ಕೊಂಚ ಅತ್ತಿತ್ತ ಹೋದರೂ ಮಹಿಳೆಯರು ಗುಂಪುಗೂಡುತ್ತಾರೆ.

ಜನ್‌ಧನ್‌ ಖಾತೆದಾರರಿಗೆ ಈಗಾಗಲೇ ಎಟಿಎಂ ಮಾದರಿಯ ರೂಪೇ ಕಾರ್ಡ್‌ ನೀಡಲಾಗುತ್ತಿದೆ. ಅವುಗಳು ಬಳಕೆಯಲ್ಲಿಲ್ಲದೇ, ಅಮಾನತು ಹಾಗೂ ರದ್ದುಗೊಂಡಿವೆ. ಇನ್ನೂ, ಕೆಲವರಿಗೆ ಎಟಿಎಂ ಬಳಕೆಯೇ ಗೊತ್ತಿಲ್ಲದಿದ್ದರೆ, ಹಲವರಿಗೆ ತಮ್ಮ ಪಿನ್‌ ನಂಬರ್‌(ಗುಪ್ತ ಸಂಖ್ಯೆ) ಮರೆತು ಹೋಗಿದೆ. ಹೀಗಾಗಿ ಬ್ಯಾಂಕ್‌ಗಳಿಗೆ ಮೊರೆ ಹೋಗುವುದು ಅನಿವಾರ್ಯ ಎನ್ನಲಾಗಿದೆ. 500 ರೂ.ಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದರಲ್ಲಿ ಎರಡು
ಮಾತಿಲ್ಲ.

ಜನ್‌ಧನ್‌ ಮಹಿಳಾ ಖಾತೆಗಳಿಗೆ ಸರಕಾರದಿಂದ ಈಗಾಗಲೇ 500 ರೂ. ಜಮಾ ಮಾಡಲಾಗಿದೆ. ಆದರೆ ತಕ್ಷಣವೇ ಹಣ ಡ್ರಾ ಮಾಡಬೇಕು ಎಂಬ ನಿಯಮವಿಲ್ಲ. ಇನ್ನೂ ಮೂರು ತಿಂಗಳು ಸರಕಾರದಿಂದ ಹಣ ಜಮೆಯಾಗುತ್ತದೆ. ಅಗತ್ಯವಿದ್ದವರು ಮಾತ್ರ ಹಣ ಬಿಡಿಸಿಕೊಳ್ಳಬೇಕು.
ಮುರಳಿ ನಾಯಕ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next