Advertisement

ಇಟಲಿ : ಲಾಕ್‌ಡೌನ್‌ ಇಲ್ಲ, ಇದೆ !

04:40 PM May 08, 2020 | mahesh |

ಮಿಲನ್‌: ಇಟಲಿಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಕೆಲವು ಪ್ರದೇಶಗಳಲ್ಲಿ ಜನರು ಮುಕ್ತವಾಗಿ ಓಡಾಡುತ್ತಿದ್ದು, ಕೆಲವು ನಗರಗಳಲ್ಲಿ ಲಾಕ್‌ಡೌನ್‌ ಮುಂದುವರಿದಿದೆ.
ಇಟಲಿಯ ಸ್ಥಳೀಯ ಆಡಳಿತ ತಮ್ಮದೇ ಆದ ನಿಯಮಗಳನ್ನು ಜಾರಿಗೆ ತರುತ್ತಿರುವುದರಿಂದ ಹೀಗೆ ಕೆಲವೆಡೆ ಲಾಕ್‌ಡೌನ್‌ ವಿನಾಯಿತಿ, ಇನ್ನು ಕೆಲವೆಡೆ ಲಾಕ್‌ಡೌನ್‌ ಇದೆ. ಇಟಲಿ ಸರಕಾರವು ಲಾಕ್‌ಡೌನ್‌ ಘೋಷಿಸುತ್ತಿದ್ದಂತೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಜಾರಿ ತಂದಿತು. ಆ ಪೈಕಿ ಕೆಲವು ನಿರ್ಬಂಧಗಳು ಮುಂದುವರಿದರೆ, ಕೆಲವಷ್ಟೇ ಸಡಿಲುಗೊಂಡವು.

Advertisement

ಇಟಲಿಯ ವಿವಿಧ ನಗರಗಳ ಸ್ಥಳೀಯ ಆಡಳಿತ ರಾಷ್ಟ್ರೀಯ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದ್ದರೂ ಅವುಗಳಿಗೆ ಪೂರಕವಾಗಿ ತಮಗೆ ಬೇಕಾದಂಥ ಕೆಲವು ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತಂದಿವೆ. ಇದು ಕೆಲವೆಡೆ ಜನರಲ್ಲಿ ಗೊಂದಲವನ್ನೂ ಸೃಷ್ಟಿಸಿದೆ. ಕಳೆದ ವಾರದಿಂದ ವೆನೆಟೊ ಮತ್ತು ಕ್ಯಾಲಬ್ರಿಯಾದಲ್ಲಿ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರ ಮತ್ತು ಪಾನೀಯವನ್ನು ಪೂರೈಸುತ್ತಿವೆ. ಇನ್ನು ಕೆಲವು ಕಡಲ ತೀರಗಳಲ್ಲಿ ಮತ್ತೆ ಚಟುವಟಿಕೆ ಆರಂಭಿಸುವ ಯೋಚನೆ ಚರ್ಚೆಯಲ್ಲಿದೆ. ನೆರೆಹೊರೆಯ ಎಮಿಲಿಯಾ- ರೊಮಾಗ್‌ನಲ್ಲಿನ ಕಡಲ ತೀರಗಳಿಗೆ ಅಲ್ಲಿನ ಮೂಲ ನಿವಾಸಿಗಳಿಗೂ ಪ್ರವೇಶವಿಲ್ಲ. ನಿಯಮಗಳನ್ನು ಉಲ್ಲಂ ಸಿದರೆ 3,000 ಯುರೋ ದಂಡ ತೆರಬೇಕು. ಮಾರ್ಚ್‌ ಅಂತ್ಯದಲ್ಲಿ ಸರಕಾರ ಹೊಸ ಸುಗ್ರೀವಾಜ್ಞೆ ಜಾರಿಗೊಳಿಸಿ, ಸ್ಥಳೀಯ ಆಡಳಿತಗಳಿಗೆ ತಮ್ಮದೇ ಆದ ಕೆಲವು ನಿಯಮಗಳನ್ನು ಜಾರಿಗೆ ತರಲು ಅವಕಾಶ ಮಾಡಿಕೊಡಲಾಗಿತ್ತು.

ಪುಗ್ಲಿಯಾ ಮತ್ತು ಮೋಲಿಸ್‌ ಸೇರಿದಂತೆ ದಕ್ಷಿಣದ ಅನೇಕ ಕಡೆಗಳಲ್ಲಿನ ಪ್ರದೇಶಗಳಿಗೆ ಯಾರಾದರೂ ಪ್ರವೇಶಿಸಿದರೆ 14 ದಿನಗಳ ಕಡ್ಡಾಯ ಕ್ವಾರಂಟೇನ್‌ಗೆ ಒಳಗಾಗಬೇಕು. ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾದ ಲೊಂಬಾರ್ಡಿ ಪ್ರದೇಶದಲ್ಲಿ ಇಂದಿಗೂ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಎಮಿಲಿಯಾ ರೊಮಾಗ್‌ನಲ್ಲಿಯೂ ಇಂಥದ್ದೇ ಕಠಿಣ ನಿಯಮಗಳಿವೆ. ಸ್ಥಳೀಯ ಮೇಯರ್‌ಗಳು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ. ಕೆಲವು ಪಟ್ಟಣಗಳು ಮತ್ತು ನಗರಗಳಲ್ಲಿನ ಉದ್ಯಾನವನಗಳನ್ನು ಮತ್ತೆ ಮುಚ್ಚಲು ನಿರ್ಧರಿಸಲಾಗಿದೆ. ಈ ಹಿಂದೆ ಸರಕಾರ ಅವುಗಳನ್ನು ತೆರವು ಮಾಡಲು ಅನುವು ಮಾಡಿಕೊಟ್ಟಿದ್ದರೂ ಸುಗ್ರೀವಾಜ್ಞೆಯ ಅವಕಾಶವನ್ನು ಬಳಸಿ ಸ್ಥಳೀಯ ಆಡಳಿತಗಳು ಅನುಮತಿ ನಿರಾಕರಿಸಿವೆ. ಇಟಲಿಯಲ್ಲಿ ಇದುವರೆಗೆ 2,14,457 ಪ್ರಕರಣಗಳು ಪತ್ತೆಯಾಗಿದ್ದು, 29,684 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 93,245 ಮಂದಿ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next