ಮೈಸೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ಜತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪೆ.8ರಿಂದ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ತಿಳಿಸಿದರು.
ನಗರದ ಎಸ್ಪಿ ಕಚೇರಿ ಸಬಾಂಗಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವ ಹಾಗೂ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಸ್‌ಐ ನೇತೃತ್ವದಲ್ಲಿ 10 ಮಂದಿ ಸಿಬ್ಬಂದಿಯ ವಿಶೇಷ ಪಡೆಯನ್ನು ರಚಿಸಲಾಗಿದೆ.
ಈ ವಿಶೇಷ ಪಡೆಯು ಜಿಲ್ಲೆಯದ್ಯಾಂತ ಸಂಚರಿಸಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದರ ಜತೆಗೆ ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಿದೆ. ಈ ವಿಶೇಷ ತಂಡ ಪ್ರಮುಖವಾಗಿ ಮಕ್ಕಳ ಭಿûಾಟನೆ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವ ಬಗ್ಗೆ ಬೀದಿನಾಟಕ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಿದೆ ಎಂದರು.
ಸ್ವಯಂ ದೂರು ದಾಖಲಿಸಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಾರದಿದ್ದರೂ ಪೊಲೀಸರೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಭೇಕಿದೆ. ಇದರ ಬದಲಿಗೆ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಯಾವ ಅಧಿಕಾರಿಯೂ ಹೇಳುವಂತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸಿದರೆ ಇಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಜಾಗೃತಿಗೆ ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದು ಹೇಳಿದರು.
ಅಗತ್ಯ ಸಹಕಾರ ನೀಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಮಾತನಾಡಿ, ಜಿಲ್ಲೆಯ ಯಾವುದಾದರೂ ಒಂದು ಗ್ರಾಮವನ್ನು ಬಾಲ್ಯ ವಿವಾಹ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಮೂರು ವರ್ಷಗಳ ಮಾಹಿತಿ ಕಲೆ ಹಾಕಿದರೆ ಒಂದೆರಡು ಬಾಲ್ಯ ವಿವಾಹವಾಗಿರುವ ವರದಿ ಇದೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಯೊಂದು ಕಾರ್ಯಕ್ರಮದ ಅನುಷ್ಠಾನ ಮತು ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಸಹಕಾರ ಅಗತ್ಯವಿದೆ ಎಂದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ಹಾಜರಿದ್ದರು.