Advertisement

ಪಿಂಚಣಿ ಬಾಕಿ ಹಣ ಬಿಟ್ಹಾಕಿ

04:04 PM Aug 09, 2018 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ವಿಚಾರ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿ, ಹಲವು ಸುತ್ತಿನ ಹೋರಾಟಕ್ಕೂ ವೇದಿಕೆಯಾಗಿತ್ತು. ವಿಧಾನಸಭೆ ಚುನಾವಣೆ ವಿಷಯವಾಗಿಯೂ ಬಳಕೆಯಾಗಿತ್ತು. ಅಂದಾಜು 105 ಕೋಟಿ ರೂ. ಬಾಕಿ ಹಣಕ್ಕೆ ಕೊನೆಗೂ ಎಳ್ಳು ನೀರು ಬಿಡುವಂತಾಗಿದೆ.

Advertisement

ಪಿಂಚಣಿ ಬಾಕಿ ಹಣ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ರಾಜಕೀಯ ಸಮರ ಸೃಷ್ಟಿಸಿತ್ತು. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಪಿಂಚಣಿ ಬಾಕಿ ಹಣ ನೀಡದೆ ಕಾಂಗ್ರೆಸ್‌ ಸರಕಾರ ಮಲತಾಯಿ ಧೋರಣೆ ತೋರಿದೆ ಎಂದು ಆರೋಪಿಸಿ ಬಿಜೆಪಿಯವರು, ಮುಖ್ಯಮಂತ್ರಿ, ಸಚಿವರ ವಿರುದ್ಧ ಹಲವು ಸುತ್ತಿನ ಹೋರಾಟ ಕೈಗೊಂಡಿದ್ದರೂ ಇದೀಗ ಅಂತಿಮವಾಗಿ ಬಾಕಿ ಹಣದ ಆಸೆ ಬಿಟ್ಟು ಬಿಡಿ ಎಂಬ ಸಂದೇಶವನ್ನು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಸಾರಿದ್ದಾರೆ.

121 ಕೋಟಿ ರೂ. ಬಾಕಿ ಇತ್ತು: ಕಳೆದ ಏಳೆಂಟು ವರ್ಷಗಳಿಂದ ಪಿಂಚಣಿ ಬಾಕಿ ಸಮಸ್ಯೆ ಸೃಷ್ಟಿಯಾಗಿತ್ತು. ಸುಮಾರು 7-8 ಕೋಟಿ ರೂ.ಗಳ ಪಿಂಚಣಿ ಬಾಕಿ ಇದ್ದಾಗಲೇ ಕೆಲವರು ಇದರ ಬಗ್ಗೆ ಎಚ್ಚರಿಸಿದ್ದರಾದರೂ, ಅಧಿಕಾರಿಗಳು, ಪಾಲಿಕೆ ಆಡಳಿತ ಮಂಡಳಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸರಕಾರ ನೀಡಲಿದೆ, ತಂದರಾಯಿತು ಎಂಬ ಉದಾಸೀನತೆ ತೋರಿದ್ದರು.

ವರ್ಷದಿಂದ ವರ್ಷಕ್ಕೆ ಪಿಂಚಣಿ ಬಾಕಿ ಬಾಲ ಬೆಳೆದು ಅದು 100 ಕೋಟಿ ರೂ. ದಾಟಿದಾಗಲೇ ಎಲ್ಲರಿಗೂ ಇದರ ಬಿಸಿ ತಗುಲಿತ್ತು. ಸಾಮಾನ್ಯ ನಿಧಿ ಹಣ ಪಿಂಚಣಿ ಬಾಬತ್ತಿಗೆ ಹೋಗುತ್ತಿದೆ ಎಂದು ಅರಿತಾಗ, ಸರಕಾರಿದಂದ ಪಿಂಚಣಿ ಬಾಕಿ ಪಡೆಯುವ ಧ್ವನಿ ಹೆಚ್ಚತೊಡಗಿತ್ತು. ಪಿಂಚಣಿ ಬಾಕಿ ಮೊತ್ತ 121 ಕೋಟಿ ರೂ. ದಾಟಿತ್ತು. ಪಾಲಿಕೆ ಸರ್ವಪಕ್ಷ ಸದಸ್ಯರು ಹಾಗೂ ಅವಳಿ ನಗರ ಶಾಸಕರು ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರ ಬಳಿ ನಿಯೋಗ ತೆರಳಿ ಮನವಿ ಮಾಡಿದ್ದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪಿಂಚಣಿ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಬಾಕಿ ಹಣ ಬಾರದನ್ನು ಖಂಡಿಸಿ ಮಹಾಪೌರರಾಗಿದ್ದ ಡಿ.ಕೆ. ಚವ್ಹಾಣ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನಗರಕ್ಕೆ ಆಗಮಿಸಿದ್ದಾಗ ಶಿಷ್ಟಾಚಾರದಂತೆ ಅವರ ಸ್ವಾಗತಕ್ಕೆ ತೆರಳದೆ ಪ್ರತಿಭಟನೆ ತೋರಿದ್ದರು. ಇದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಕಾಂಗ್ರೆಸ್‌ ಸರಕಾರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದಲ್ಲಿ 2017ರ ಜೂನ್‌ನಿಂದ ಪಿಂಚಣಿ ಹಣವಾಗಿ ಅಂದಾಜು 16 ಕೋಟಿ ರೂ. ಬಿಡುಗಡೆ ಮಾಡಿ ಕೈ ತೊಳೆದುಕೊಂಡಿತ್ತು. ಪಾಲಿಕೆಗೆ ಬರಬೇಕಾದ 105 ಕೋಟಿ ರೂ. ಬಾಕಿ ರೂಪದಲ್ಲೇ ಉಳಿದಿತ್ತು.

Advertisement

ಬಾಕಿ ಹಣ ಆಸೆ ಬಿಟ್ಟು ಬಿಡಿ: ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ಪಿಂಚಣಿ ಬಾಕಿ ಹಣದ ಪ್ರಕರಣಕ್ಕೆ ತೆರೆ ಎಳೆದಿದ್ದು, ಹಿಂದಿನ ಬಾಕಿ ನೀಡಿಕೆ ಅಸಾಧ್ಯ. ಅದರ ಆಸೆ ಬಿಟ್ಟುಬಿಡಿ. ಬೇರೆ ಅಭಿವೃದ್ಧಿ ಯೋಜನೆಗೆ ಪ್ರಸ್ತಾವನೆ ನೀಡಿ ಅನುದಾನ ನೀಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಹಣ ಬರುವ ಆಸೆಗೆ ಇತಿಶ್ರೀ ಹಾಡಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಸರಕಾರ ಇದ್ದ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಪರದಾಡುತ್ತಿದ್ದು, ಹಲವು ಗೊಂದಲಗಳನ್ನು ಸುತ್ತಿಕೊಂಡ ಬಾಕಿ ಹಣದ ಪಾವತಿಗೆ ಖಂಡಿತವಾಗಿಯೂ ಮುಂದಾಗದು. ರೈತರ ಸಾಲ ಮನ್ನಾದ ಹಣ ಹೊಂದಾಣಿಕೆ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಾಕಿ ಹಣಕ್ಕೆ ಸುತಾರಾಂ ಒಪ್ಪುವುದಿಲ್ಲ ಎಂಬ ವಾಸ್ತವದ ಸಂಗತಿ ಅರಿತಿರುವ ಪಾಲಿಕೆ ಆಡಳಿತ ಮಂಡಳಿಯೂ ಸಹ ಪಿಂಚಣಿ ಬಾಕಿ ಆಸೆಯನ್ನು ಕೈ ಬಿಡಲು ಮುಂದಾಗಿದೆ.

ಸರಿದೂಗಿಸುವ ಸವಾಲು
ಪಿಂಚಣಿ ಬಾಕಿ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪಾಲಿಕೆಯವರಿಗೆ ಇದೀಗ ಬಾಕಿ ಹಣ ಬಾರದು ಎಂಬ ವಾಸ್ತವ ಅರಿವಿಗೆ ಬಂದಿದೆ. ಆದರೆ, ಈಗಾಗಲೇ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯವಾಗಿ ನೀಡಿದ ಅಂದಾಜು 105 ಕೋಟಿ ರೂ. ಗಳನ್ನು ಸರಿದೂಗಿಸುವುದು ಯಾವ ಬಾಬತ್ತಿನಿಂದ ಎಂಬ ಸವಾಲು ಎದುರಾಗಿದೆ. ಪಾಲಿಕೆ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆಸ್ತಿಕರ ಹೊರತು ಪಡಿಸಿದರೆ ಜಾಹೀರಾತು, ಭೂ ಬಾಡಿಗೆ, ವಾಣಿಜ್ಯ ಮಳಿಗೆಗಳು, ಕಟ್ಟಡ ಪರವಾನಗಿ ಶುಲ್ಕ, ನೀರಿನ ಬಾಕಿ ಹೀಗೆ ವಿವಿಧ ವಿಭಾಗಗಳಲ್ಲಿ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಕೆಲವೊಂದು ಬಾಬತ್ತುಗಳಿಂದ ನಯಾ ಪೈಸೆಯು ಆದಾಯ ಇಲ್ಲವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವುದರಿಲಿ, ನೌಕರರಿಗೆ ವೇತನ ನೀಡುವುದಕ್ಕೂ ಸಂಕಷ್ಟ ಪಡುವ ಸ್ಥಿತಿ ಇದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next