Advertisement

ಕಲಾವಿದರಿಗೆ ಮಾಸಿಕ 10 ಸಾವಿರ ರೂ. ಮಾಸಾಶನ ನೀಡಿ

07:35 PM Mar 04, 2021 | Team Udayavani |

ದೇವನಹಳ್ಳಿ: ಕುಟುಂಬದ ಪೋಷಣೆಗಾಗಿ ಕಲೆಯನ್ನೇ ನಂಬಿಕೊಂಡಿರುವ ಕಲಾವಿದರು ದೃಶ್ಯ ಮಾಧ್ಯಮಗಳಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರಿದ್ದು, ಕಲಾವಿದರಿಗೆ ಮಾಸಿಕ 10 ಸಾವಿರ ರೂ. ಮಾಸಾಶನ ನೀಡಿ  ಎಂದು ಮಾಜಿ ತಾಪಂ ಅಧ್ಯಕ್ಷ ಬಿ.ಕೆ. ಶಿವಪ್ಪ ಒತ್ತಾಯಿಸಿದರು.

Advertisement

ನಗರದ ನಾರಾಯಣಚಾರ್‌ ಲೇಔಟ್‌ನಲ್ಲಿರುವ ಬಿಕೆಎಸ್‌ ಪ್ರತಿಷ್ಠಾನದ ಕೇಂದ್ರ ಕಚೇರಿಯಲ್ಲಿ ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದಿಂದ ಏರ್ಪಡಿಸಿದ್ದ 75ನೇ ಕನ್ನಡದೀಪ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು, ದೃಶ್ಯ ಮಾಧ್ಯಮಗಳ ಭರಾಟೆಯಿಂದ ರಂಗಭೂಮಿ ಕಲಾವಿದರು ಜೀವನೋಪಾಯಕ್ಕಾಗಿದ್ದ ಕಲೆಯನ್ನು ಕೈಬಿಟ್ಟು ಬೇರೆ ಕೆಲಸವನ್ನು ಹುಡುಕುತ್ತಿದ್ದಾರೆ. ಇದರಿಂದ ನಮ್ಮ ನಾಡಿನ ಕಲೆ ಅವನತಿಯತ್ತ ಸಾಗುತ್ತಿದೆ ಎಂದರು.

ನಾಡಿನ ಕಲೆ-ಸಂಸ್ಕೃತಿಯನ್ನು ಅಭಿನಯದ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುತ್ತಿರುವವರು ಕಲಾವಿದರು. ಅಂತಹ ಕಲಾವಿದರ ಬದುಕು ಈಗ ಸಂಕಷ್ಟದಲ್ಲಿದೆ. ಸಮಾಜ ಪರಿವರ್ತನೆಗೆ ಶಿಕ್ಷಕರು ಎಷ್ಟು ಮುಖ್ಯವೋ ಕಲೆ-ಸಂಸ್ಕೃತಿ ಉಳಿಯಬೇಕಾದರೆ ಕಲಾವಿದರೂ ಅಷ್ಟೆ ಮುಖ್ಯ. ದಿ.ರಾಜಗೋಪಾಲ್‌ ಅವರು ಅನೇಕ ಶಿಷ್ಯವೃಂದ ಬೆಳೆಸಿದ್ದು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರು ಮುನ್ನಡೆಯಬೇಕಿದೆ ಎಂದರು.

ಕ್ರಮ ಕೈಗೊಂಡಿಲ್ಲ: ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಈ ಹಿಂದೆ  ಅನೇಕ ಹೋರಾಟಗಳ ಮೂಲಕ ಕಲಾವಿದರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಮಂತ್ರಿಗಳೂ ಇತ್ತ ಗಮನ ಹರಿಸಿಲ್ಲ. ಕಲಾವಿದರಿಗೆ ಯಾವುದೇ ಅನುದಾನಗಳನ್ನು ನೀಡದೆ ಅವರನ್ನು ಮೂಲೆಗುಂಪು ಮಾಡುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದ ಸಂಚಾಲಕ ವಿ.ಎನ್‌.ರಮೇಶ್‌, ಕಲಾವಿದರ ಸಂಘದ ಗೌರವಾಧ್ಯಕ್ಷ ಆರ್‌.ಕೆ. ನಂಜೇಗೌಡ, ಅಧ್ಯಕ್ಷ ಮೋಹನ್‌ಬಾಬು, ಉಪಾಧ್ಯಕ್ಷ ಸೀತಾ ರಾಮಪ್ಪ, ಪ್ರ. ಕಾರ್ಯದರ್ಶಿ ಸುಬ್ರಮಣಿ, ಸಹ ಕಾರ್ಯದರ್ಶಿ ಗೋವಿಂದರಾಜು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಗೌರವಾಧ್ಯಕ್ಷ ಎನ್‌. ಚಂದ್ರಶೇಖರ್‌, ಜಿಲ್ಲಾಧ್ಯಕ್ಷ ಮುನಿರಾಜು, ಕಾರ್ಯಾಧ್ಯಕ್ಷ ವಿನೋದ್‌ಕುಮಾರ್‌ಗೌಡ, ಜೊನ್ನಹಳ್ಳಿ ರಾಮಾಂಜಿನಪ್ಪ, ಸೋಲೂರು ಶಿವಕುಮಾರ್‌, ಜೆ.ಎನ್‌. ಮುನಿವೀರಣ್ಣ, ಖಜಾಂಚಿ ವೆಂಕಟರಾಜು, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next