ಉಡುಪಿ: ಸಾಮಾಜಿಕ ಭದ್ರತೆ ಮಾಸಿಕ ಪಿಂಚಣಿ ಯೋಜನೆಯಡಿ ಉಭಯ ಜಿಲ್ಲೆಗಳಲ್ಲಿ 3.21 ಲಕ್ಷಕ್ಕೂ ಅಧಿಕ ಫಲಾನುಭವಿಗಳು ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಮೊದಲಾದ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನವನ್ನು 29,504 ಮಂದಿ ಪಡೆದರೆ, ದ.ಕ. ಜಿಲ್ಲೆಯಲ್ಲಿ 33,273 ಮಂದಿ ಪಡೆಯುತ್ತಿದ್ದಾರೆ. ವಿಧವಾವೇತನವನ್ನು ಉಡುಪಿಯಲ್ಲಿ 35,575 ಮಂದಿ ಹಾಗೂ ದ.ಕ.ದಲ್ಲಿ 48,478 ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಉಡುಪಿಯಲ್ಲಿ 65,357, ದ.ಕ.ದಲ್ಲಿ 63,531 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ.
ಉಡುಪಿಯಲ್ಲಿ 12,537 ಹಾಗೂ ದ.ಕ.ದಲ್ಲಿ 17,719 ಮಂದಿ ಅಂಗವಿಕರಲ ವೇತನ ಪಡೆಯುತ್ತಿದ್ದಾರೆ. ಮನಸ್ವಿನಿ ಯೋಜನೆಯಡಿ ಉಡುಪಿಯಲ್ಲಿ 3,999 ಹಾಗೂ ದ.ಕ.ದಲ್ಲಿ 6,176, ಮೈತ್ರಿ ಯೋಜನೆಯಡಿ ಉಡುಪಿಯಲ್ಲಿ 27, ದ.ಕ.ದಲ್ಲಿ 15 ಹಾಗೂ ಉಡುಪಿಯಲ್ಲಿ 1,469, ದ.ಕ.ದಲ್ಲಿ 3,717 ಎಂಡೋಸೆಲ್ಫಾನ್ ಸಂತ್ರಸ್ತರು ಮಾಸಾಶನ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ವಿವಿಧ ಯೋಜನೆಯಡಿ ಉಡುಪಿಯ 1,48,479 ಹಾಗೂ ದ.ಕ.ದ 1,72,938 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ.
ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೂ ಸರಕಾರದಿಂದ ಮಾಸಾಶನ ನೀಡಲಾಗುತ್ತಿದೆ. ಉಡುಪಿ ಯಲ್ಲಿ ಯಾರೂ ಇಲ್ಲ, ದ.ಕ.ದಲ್ಲಿ ಒಬ್ಬರು ಮಾಸಾಶನ ಪಡೆಯುತ್ತಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿ ಕೊಂಡ ರೈತರ ಪತ್ನಿಯರಿಗೂ ಮಾಸಾಶನ ನೀಡಲಾಗುತ್ತದೆ. ಆ ರೀತಿಯಲ್ಲಿ ಉಡುಪಿಯ 11 ಹಾಗೂ ದ.ಕ.ದ 28 ಫಲಾನುಭವಿಗಳು ಸರಕಾರದಿಂದ ಪಿಂಚಣಿ ಪಡೆಯುತ್ತಿದ್ದಾರೆ.
ಒಟ್ಟಾರೆ ಯಾಗಿ ಬೆಳಗಾವಿ ಜಿಲ್ಲೆ ಯಲ್ಲಿ ರಾಜ್ಯದಲ್ಲೇ ಗರಿಷ್ಠ ಸಂಖ್ಯೆಯ(7,27,698) ಹಾಗೂ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ (57,005) ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ.
ನೇರ ವರ್ಗಾವಣೆ
ಸರಕಾರದ ಬಹುತೇಕ ಎಲ್ಲ ಯೋಜನೆಯ ಪಿಂಚಣಿಯನ್ನು ಫಲಾನು ಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಫಲಾನು ಭವಿಗಳು ನೀಡುವ ಬ್ಯಾಂಕ್ ಖಾತೆಗೆ ನೇರವಾಗಿ ಪ್ರತೀ ತಿಂಗಳು ಹಣ ವರ್ಗಾವಣೆ ಮಾಡಲಾಗುತ್ತದೆ. ವೃದ್ಧಾಪ್ಯ ವೇತನ ಸೇರಿದಂತೆ ಕೆಲವು ಪಿಂಚಣಿ ಸೌಲಭ್ಯ ಬರುವಾಗ ವಿಳಂಬವಾಗುವುದೂ ಇದೆ. ಫಲಾನುಭವಿಗಳು ಎರಡು ಮೂರು ತಿಂಗಳು ಕಾಯಬೇಕಾಗುತ್ತದೆ.