Advertisement

ಅಳಿವಿನ ಅಂಚಿನಲ್ಲಿ ಪೆಂಗ್ವಿನ್‌ ಸಂತತಿ; ಏನಿದು ಪೆಂಗ್ವಿನ್‌?

12:00 AM Nov 27, 2022 | Team Udayavani |

ಆಧುನಿಕತೆಯ ಭರದಲ್ಲಿ ಮಾನವ ತನ್ನ ಜೀವನಶೈಲಿಯನ್ನೇ ಸಂಪೂರ್ಣ ಮಾರ್ಪಡಿಸಿಕೊಂಡಿದ್ದಾನೆ. ಇದರ ಪರಿಣಾಮ ಮಾನವ-ಪ್ರಕೃತಿ ನಡುವಣ ಸಂಬಂಧ ನಶಿಸುತ್ತಿದೆ. ಈ ಕಾರಣದಿಂದಾಗಿ ಪ್ರಕೃತಿಯೂ ಮುನಿಸಿಕೊಂಡಿದ್ದು ಇಡೀ ಋತುಚಕ್ರವೇ ಬದಲಾಗತೊಡಗಿದೆ. ಪರಿಸರದಲ್ಲಿನ ಈ ಬದಲಾವಣೆ ಮಾನವನ ಸಹಿತ ಭೂಮಿಯ ಮೇಲಣ ಎಲ್ಲ ಜೀವಜಂತುಗಳ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವಂತೆ ಮಾಡಿದೆ. ಮಾನವನ ಅತಿರೇಕ ಹೆಚ್ಚಿದಂತೆ ಪ್ರಕೃತಿ ಒಂದಿನಿತು ಮೈಕೊಡವಿ ಕೊಂಡಾಗಲೆಲ್ಲ ಭೂಮಿಯಲ್ಲಿನ ಜೀವಜಂತುಗಳು ನಾನಾತೆರನಾದ ಪರಿಣಾಮಕ್ಕೆ ತುತ್ತಾದ ಸಾಕಷ್ಟು ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಈ ಪೈಕಿ ಒಂದು ಭೂಮಿಯ ಮೇಲಿದ್ದ ಹಲವು ಬಗೆಯ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳು ನಾಶವಾಗಿರುವುದು. ಇದು ಹೀಗೆ ಮುಂದುವರಿದಲ್ಲಿ ಇನ್ನಷ್ಟು ಜೀವಿಗಳು ಭೂಮಿಯಿಂದ ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ. ಇಂತಹುದೇ ಆತಂಕವನ್ನು ಎದುರಿಸುತ್ತಿದೆ ಪೆಂಗ್ವಿನ್‌. ಈಗಾಗಲೇ ಪೆಂಗ್ವಿನ್‌ನ ಕೆಲವೊಂದಿಷ್ಟು ಜಾತಿಗಳು ಕಣ್ಮರೆಯಾಗಿವೆ. ಭೂಮಿಯ ಮೇಲೆ ಉಳಿದಿರುವ ಪೆಂಗ್ವಿನ್‌ನ ಇತರ ಜಾತಿಗಳು ಕೂಡ ಅಳಿವಿನ ಬಾಗಿಲಿಗೆ ಬಂದು ನಿಂತಿವೆ. ಪೆಂಗ್ವಿನ್‌ ಸಂತತಿ ನಶಿಸುತ್ತಿರುವ ಬಗೆಗೆ ದಶಕಗಳ ಹಿಂದೆಯೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಆದರೆ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಪೆಂಗ್ವಿನ್‌ನ ಮೇಲೆ ಭಾರೀ ಪ್ರತಿಕೂಲ ಪರಿಣಾಮಗಳುಂಟಾಗುತ್ತಿದ್ದು ಪರಿಸ್ಥಿತಿ ಇದೇ ತೆರನಾಗಿ ಮುಂದುವರಿದದ್ದೇ ಆದಲ್ಲಿ ಮುಂದಿನ ಪೀಳಿಗೆಗೆ ಪೆಂಗ್ವಿನ್‌ ಅನ್ನು ಕೇವಲ ಚಿತ್ರಗಳಲ್ಲಷ್ಟೇ ಪರಿಚಯಿಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಲಿರುವುದು ನಿಶ್ಚಿತ.

Advertisement

ಏನಿದು ಪೆಂಗ್ವಿನ್‌?
ಪೆಂಗ್ವಿನ್‌ ಒಂದರ್ಥದಲ್ಲಿ ಉಭಯವಾಸಿ. ಹೆಚ್ಚಾಗಿ ನೀರಿನಲ್ಲೇ ಇದ್ದರೂ ನೆಲದ ಮೇಲೂ ಅಷ್ಟೇ ಸರಾಗ ವಾಗಿ ಓಡಾಡಿಕೊಂಡಿರುವ ಜೀವಿ. ಜಲ ಮತ್ತು ನೆಲದಲ್ಲಿ ವಾಸಿಸಬಲ್ಲ ಈ ಜೀವಿಗೆ ರೆಕ್ಕೆ ಇದ್ದರೂ ಇವು ಹಾರಲಾರವು. ಈ ರೆಕ್ಕೆಗಳನ್ನು ಬಳಸಿ ಸಾಗರದಲ್ಲಿ ಲೀಲಾಜಾಲವಾಗಿ ಈಜಾಡುತ್ತವೆ. ಪೆಂಗ್ವಿನ್‌ನಲ್ಲಿಯೂ ಹಲವಾರು ಜಾತಿಗಳಿವೆ. ಸಾಮಾನ್ಯವಾಗಿ ಪೆಂಗ್ವಿನ್‌ಗಳು ಭೂಮಿಯ ದಕ್ಷಿಣ ಗೋಳಾರ್ಧದಲ್ಲಿ ಅದರಲ್ಲಿಯೂ ವಿಶೇಷ ವಾಗಿ ಅಂಟಾರ್ಟಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಣ್ಣಪುಟ್ಟ ಕಡಲಕಳೆ, ಮೀನುಗಳು, ಕಡಲ ಜೀವಿಗಳ ಇನ್ನಿತರ ಸ್ವರೂಪಗಳೇ ಇವುಗಳ ಆಹಾರ. ಇವು ತಮ್ಮ ಜೀವಿತಾವಧಿಯ ಸುಮಾರು ಅರ್ಧ ಭಾಗವನ್ನು ನೆಲದ ಮೇಲೆ ಕಳೆದರೆ ಉಳಿದರ್ಧ ಭಾಗವನ್ನು ಮಹಾಸಾಗರದಲ್ಲಿ ಕಳೆಯುತ್ತದೆ.

ಹೇಗಿರುತ್ತವೆ?
ಫ್ರೆಂಚ್‌ ವಿಜ್ಞಾನಿಗಳ ಪ್ರಕಾರ ದೊಡ್ಡ ಗಾತ್ರದ ಪೆಂಗ್ವಿನ್‌ಗಳು ಅಂದರೆ ಸಾಮ್ರಾಟ ಪೆಂಗ್ವಿನ್‌ಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಸರಿಸುಮಾರು 1.1ಮೀ. ನಷ್ಟು (3 ಅಡಿ 7 ಇಂಚು) ಎತ್ತರವಿರುತ್ತದೆ. ಸುಮಾರು 35 ರಿಂದ 38 ಅಥವಾ ಅದಕ್ಕಿಂತ ಜಾಸ್ತಿ ತೂಕವಿರುತ್ತದೆ. ಪುಟ್ಟ ನೀಲಿ ಪೆಂಗ್ವಿನ್‌ಗಳು ಅತ್ಯಂತ ಚಿಕ್ಕ ಜಾತಿಯಾಗಿದ್ದು ಸುಮಾರು 40 ಸೆ.ಮೀ ನಷ್ಟು ಉದ್ದವಿರುತ್ತದೆ. 1 ಕೆ.ಜಿ.ಯಷ್ಟು ತೂಕವಿರುತ್ತದೆ. ದೊಡ್ಡ ಪೆಂಗ್ವಿನ್‌ಗಳಿಗೆ ತಂಪಾದ ವಾತಾವರಣವೇ ಆಗಬೇಕು. ಇನ್ನು ಚಿಕ್ಕ ಜಾತಿಯ ಪೆಂಗ್ವಿನ್‌ಗಳು ಸಮಾನ್ಯವಾಗಿ ಸಮಶೀತೋಷ್ಣ ವಲಯದಲ್ಲಿ ವಾಸಿಸುತ್ತವೆ. ಕೆಲವೊಮ್ಮೆ ಉಷ್ಣವಲಯದಲ್ಲಿಯೂ ಇವು ಕಂಡು ಬರುತ್ತವೆಯಾದರೂ ಅದು ತೀರಾ ವಿರಳ.

ಅಳಿವಿನ ಭೀತಿ!
ಹವಾಮಾನ ಬದಲಾವಣೆಯ ಪರಿಣಾಮ ಪೆಂಗ್ವಿನ್‌ ಸಂತತಿ ಸಂಕಷ್ಟಕ್ಕೆ ಸಿಲುಕಿರುವುದನ್ನು ಪ್ರಾಣಿಶಾಸ್ತ್ರಜ್ಞರು ಖಚಿತ ಪಡಿಸಿದ್ದಾರೆ. ಇವು ಹೆಚ್ಚಾಗಿ ವಾಸಿಸುವ ಐಲ್ಯಾಂಡ್‌ ನಾಶವಾಗುತ್ತಿದೆ. 1970ರಲ್ಲಿ ಈ ಬಗ್ಗೆ ಅಧ್ಯಯನಗಳು ನಡೆದಿದ್ದವು. ಈಗ ಆ ದ್ವೀಪ ಶೇ.57ರಷ್ಟು ನಾಶವಾಗಿದೆ. ಕಳೆದ ದಶಕದಲ್ಲಿ ಪೂರ್ವ ಅಂಟಾರ್ಟಿಕ್‌ ಭಾಗದಲ್ಲಿ ಈ ಅಡೇಲಿ ಪೆಂಗ್ವಿನ್‌ಗಳ ಒಟ್ಟಾರೆ ಸಂಖ್ಯೆಯಲ್ಲಿ ಶೇ.43ರಷ್ಟು ಕುಸಿತ ಕಂಡಿದೆ ಎಂದು ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಕಂಡುಕೊಂಡಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಪೆಂಗ್ವಿನ್‌ಗಳ ಸಂತತಿ ನಾಶವಾಗುವ ಅಪಾಯ ಎದುರಾಗಿದೆ. ಇವು ಹೆಚ್ಚಾಗಿ ಕಂಡುಬರುವ ಆಸ್ಟ್ರೇಲಿಯಾ, ಗ್ಯಾಲಪಗೋಸ್‌ ದ್ವೀಪಗಳಲ್ಲಿ ಬಿಸಿ ಹೆಚ್ಚಾಗುತ್ತಿದ್ದು ಇವುಗಳ ಆವಾಸಕ್ಕೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ.

ಆತಂಕ ಏನು?
1970ರ ದಶಕದ ಉತ್ತರಾರ್ಧದಲ್ಲಿ ದೀರ್ಘಾವಧಿಯ ಉಷ್ಣತೆಯಿಂದ ಪೆಂಗ್ವಿನ್‌ಗಳ ಸಂಖ್ಯೆ ವಿರಳವಾಯಿತು. ಆ ಬಳಿಕ ಪೆಂಗ್ವಿನ್‌ಗಳ ಸಂಖ್ಯೆ ಸ್ಥಿರವಾಗಿತ್ತು. ಆದರೆ ತಾಪಮಾನ ಏರಿಕೆಯ ಪ್ರವೃತ್ತಿ ಮುಂದುವರಿದ ಪರಿಣಾಮ ಪೆಂಗ್ವಿನ್‌ಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇದು ಮುಂದುವರಿದಲ್ಲಿ ಅವುಗಳ ಪ್ರಭೇದವೇ ನಶಿಸಿ ಹೋಗಬಹುದು ಎಂಬುದು ವಿಜ್ಞಾನಿಗಳ ಮಾತು.

Advertisement

ಯಾಕೆ?
ಪೆಂಗ್ವಿನ್‌ಗಳು ಶೀತ ಹವಾಮಾನಕ್ಕಾಗಿಯೇ ಸೀಮಿತವಾಗಿರುವಂತ ಜೀವಿ. ಅವುಗಳ ಚರ್ಮದ ಅಡಿಯಲ್ಲಿ ದಪ್ಪನಾದ ಬ್ಲಿರ್ಬ ಪದರ, ಅವುಗಳ ಮೇಲೆ ಉಣ್ಣೆಯ ದಟ್ಟವಾದ ಇನ್ನೊಂದು ಪದರ, ಅದರ ಮೇಲೆ ಗರಿಗಳ ಮಾದರಿಯ ಕಪ್ಪನೆಯ ಕೋಟ್‌ ಮಾದರಿಯಲ್ಲಿ ಹೊಂದಿಕೆಯಾಗಿರುತ್ತದೆ. ಇವು ಶೀತಕ್ಕೆ ಮಾತ್ರವೇ ತಮ್ಮ ದೇಹವನ್ನು ಹೊಂದಿಸಿಕೊಳ್ಳುತ್ತದೆ. ಇವುಗಳ ಆಕಾರ ಮತ್ತು ರಚನೆಯಿಂದಾಗಿ ಇವುಗಳಿಗೆ ಉಷ್ಣ ಹೆಚ್ಚಿರುವ ಪ್ರದೇಶಗಳಲ್ಲಿ ಬದುಕುವುದು ಅಸಾಧ್ಯ. ವಿಜ್ಞಾನಿಗಳ ಪ್ರಕಾರ ಹೆಚ್ಚುತ್ತಿರುವ ಉಷ್ಣತೆಯನ್ನು ಪೆಂಗ್ವಿನ್‌ಗಳ ದೇಹ ರಚನೆ ಸಹಿಸಿಕೊಳ್ಳಲಾರದು.

ಪೆಂಗ್ವಿನ್‌
ಜಾಗೃತಿ ದಿನವೂ ಇದೆ!
ಈ ಪಕ್ಷಿಯ ಉಳಿವಿನ ಬಗ್ಗೆ ಜಾಗೃತಿ ಮೂಡಿಸಲು ಜನವರಿ 20ರಂದು ಪೆಂಗ್ವಿನ್‌ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಅದಲ್ಲದೆ ವಿಶ್ವ ಪೆಂಗ್ವಿನ್‌ ಡೇಯನ್ನು ಎಪ್ರಿಲ್‌ 25ರಂದು ಆಚರಿಸಲಾಗುತ್ತದೆ. ಈ ದಿನ ಅನೇಕ ಖಾಸಗಿ ಸಂಘ ಸಂಸ್ಥೆಗಳು ಪೆಂಗ್ವಿನ್‌ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಕುರಿತಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇವೆಲ್ಲದರ ಹೊರತಾಗಿಯೂ ಸಮಸ್ಯೆಯ ಮೂಲ ಕಾರಣವಾಗಿರುವ ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಇವೆಲ್ಲವೂ ದಿನದ ಆಚರಣೆ, ಘೋಷಣೆಗಳಿಗೆ ಸೀಮಿತವಾಗಬಹುದೇ ವಿನಾ ನೈಜ ಸಮಸ್ಯೆಗೆ ಪರಿಹಾರ ಲಭಿಸದು.

ಅಪಾಯ ಏನು?
ಪೆಂಗ್ವಿನ್‌ಗಳು ವಾಸಿಸುವ ಪ್ರದೇಶಗಳಲ್ಲಿನ ಹಿಮ ವ್ಯಾಪಕವಾಗಿ ಕರಗತೊಡಗಿದೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ. ತಾಪಮಾನ ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ಅಂಟಾರ್ಟಿಕಾ ಸಹಿತ ಹಿಮ ಪ್ರದೇಶಗಳಲ್ಲಿನ ಹಿಮಗಡ್ಡೆಗಳು ಭಾಗಶಃ ಕರಗಿ ಸಾಗರವನ್ನು ಸೇರತೊಡಗಿವೆ. ಇದರಿಂದಾಗಿ ಪೆಂಗ್ವಿನ್‌ಗಳ ಆವಾಸಸ್ಥಾನವಾಗಿರುವ ಹಿಮದಿಂದಾವೃತವಾದ ಪ್ರದೇಶಗಳು ಮಾಯವಾಗಲಾರಂಭಿಸಿದೆ. ಇದರಿಂದ ಪೆಂಗ್ವಿನ್‌ಗಳ ಆವಾಸಸ್ಥಾನ ಕಿರಿದಾಗುತ್ತಿದೆ ಮಾತ್ರವಲ್ಲದೆ ಇವುಗಳ ಸಂತಾನೋತ್ಪತ್ತಿಯ ಮೇಲೆ ನೇರ ಪರಿಣಾಮ ಬೀಳುತ್ತಿದೆ. ದಿನಕಳೆದಂತೆ ಈ ಪ್ರದೇಶಗಳಲ್ಲಿ ಉಷ್ಣತೆ ಹೆಚ್ಚುತ್ತಿರುವುದರಿಂದಾಗಿ ಪೆಂಗ್ವಿನ್‌ಗಳ ಬದುಕು ಕೂಡ ದುಸ್ತರವಾಗಿ ಮಾರ್ಪಟ್ಟಿದೆ. ಇನ್ನು ದೊಡ್ಡ ಗಾತ್ರದ ಪೆಂಗ್ವಿನ್‌ಗಳು ಅತ್ಯಧಿಕ ಶೀತ ವಾತಾವರಣವನ್ನು ಬಯಸುವುದರಿಂದ ಹೆಚ್ಚುತ್ತಿರುವ ತಾಪಮಾನ ಇವುಗಳ ಬದುಕಿಗೆ ಕೊಳ್ಳಿ ಇಡುತ್ತಿದೆ. ಕಳೆದ ಮೂರ್‍ನಾಲ್ಕು ದಶಕಗಳಿಂದೀಚೆಗೆ ದೊಡ್ಡ ಗಾತ್ರದ ಪೆಂಗ್ವಿನ್‌ಗಳ ಕೆಲವು ಜಾತಿಗಳ ಸಂತತಿಯೇ ನಾಶವಾಗಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾತಿಯ ಪೆಂಗ್ವಿನ್‌ಗಳು ಕಣ್ಮರೆಯಾಗುವ ಆತಂಕ ಎದುರಾಗಿದೆ. ಇನ್ನು ಸಣ್ಣ ಗಾತ್ರದ ಪೆಂಗ್ವಿನ್‌ಗಳನ್ನೂ ತಾಪಮಾನ ಹೆಚ್ಚಳದ ಸಮಸ್ಯೆ ಕಾಡುತ್ತಿದೆಯಾದರೂ ದೊಡ್ಡ ಪೆಂಗ್ವಿನ್‌ಗಳಷ್ಟಲ್ಲ.

ಆಹಾರಕ್ಕೂ ಕುತ್ತು?
ಅಧ್ಯಯನಗಳ ಪ್ರಕಾರ ಹೆಚ್ಚಿನ ಉಷ್ಣತೆ, ಪೆಂಗ್ವಿನ್‌ಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಅವುಗಳು ಅವಲಂಬಿಸಿರುವ ಆಹಾರದ ಮೇಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಸಣ್ಣ ಸಿಗಡಿಗಳನ್ನು ಹೋಲುವ ಕ್ರಿಲ್‌ಗ‌ಳು ಇವುಗಳ ಮುಖ್ಯ ಆಹಾರ. ದೊಡ್ಡ ದೊಡ್ಡ ಮೀನುಗಳಿಗೂ ಇದೇ ಕ್ರಿಲ್‌ಗ‌ಳು ಆಹಾರವಾಗಿದೆ. ಈ ಕ್ರಿಲ್‌ಗ‌ಳು ಪಾಚಿಯನ್ನು ತಿನ್ನುತ್ತವೆ. ಹೀಗಾಗಿ ತಾಪಮಾನ ಹೆಚ್ಚಿ ಮಂಜುಗಡ್ಡೆ ಕರಗುತ್ತಿರುವುದರಿಂದ ಕ್ರಿಲ್‌ಗ‌ಳು ಸೇವಿಸುವ ಪಾಚಿಗಳ ಪ್ರಮಾಣ ಕಡಿಮೆಯಾಗುತ್ತದೆ. ಆಗ ಕ್ರಿಲ್‌ಗ‌ಳಿಗೆ ಆಹಾರವಿಲ್ಲದಂತಾಗುತ್ತದೆ. ಅವುಗಳ ಸಂಖ್ಯೆ ಕ್ಷೀಣಿಸುತ್ತದೆ. ಇದರಿಂದ ಪೆಂಗ್ವಿನ್‌ಗಳಿಗೆ ಆಹಾರವಿಲ್ಲದಂತಾಗುತ್ತದೆ.

ಮುಂದೇನು?
ಇತ್ತೀಚಿನ ಅಧ್ಯಯನಗಳ ಪ್ರಕಾರ ಕಳೆದೊಂದು ಶತಮಾನದಲ್ಲಿ ಅಂಟಾರ್ಟಿಕಾ ತನ್ನ ಹಿಮಗಡ್ಡೆಯ ಕಾಲು ಭಾಗವನ್ನು ಕಳೆದುಕೊಂಡಿದೆ. ಅಂಟಾರ್ಟಿಕಾ ಪರ್ಯಾಯ ದ್ವೀಪದಲ್ಲಿ ನಿರಂತರವಾಗಿ ಹಿಮಗಡ್ಡೆಗಳು ಕರಗಿಹೋಗುತ್ತಿವೆ. ಆದರೆ ವಿಜ್ಞಾನಿಗಳು ಹಿಮ ಕರಗುತ್ತಿರುವ ವ್ಯಾಪ್ತಿಯು ಜಾಗತಿಕ ತಾಪಮಾನ ಏರಿಕೆ ಅಥವಾ ತಾಪಮಾನ ಮತ್ತು ಹಿಮದ ಮಟ್ಟದಲ್ಲಿನ ನೈಸರ್ಗಿಕ ಏರಿಳಿತದ ಕಾರಣದಿಂದ ಎಂದು ವಿಭಜಿಸಿದ್ದಾರೆ. ಕಾರಣಗಳು ಏನೇ ಇರಲಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಎಷ್ಟು ಆವಶ್ಯಕವೋ ಅದಕ್ಕೆ ಪರಿಹಾರವೂ ಅಷ್ಟೇ ಆವಶ್ಯಕ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ಮಾನವನ ಸ್ವಯಂಕೃತ ಅಪರಾಧವೇ ಕಾರಣವಾಗಿರುವುದರಿಂದ ಇದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕಾಗಿದೆ. ಒಂದು ವೇಳೆ ಹವಾಮಾನ ಬದಲಾ ವಣೆಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಹಿಡಿಯದೇ ಹೋದಲ್ಲಿ ಪೆಂಗ್ವಿನ್‌ನ ಸಂತತಿ ನಶಿಸುವುದು ನಿಶ್ಚಿತ. ಅಷ್ಟು ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಇನ್ನೂ ಅನೇಕ ಜೀವವೈವಿಧ್ಯಗಳು ನಮ್ಮಿಂದ ಕಣ್ಮರೆಯಾದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ.

ಪೆಂಗ್ವಿನ್‌ ಹೆಚ್ಚಾಗಿ ಕಂಡು ಬರುವ ಪ್ರದೇಶಗಳು
-ಆಸ್ಟ್ರೇಲಿಯಾ
-ನ್ಯೂಜಿಲ್ಯಾಂಡ್‌
-ಚಿಲಿ
-ದಕ್ಷಿಣ ಆಫ್ರಿಕಾ
-ಪೆರು
-ಫಾಕ್ಲ್ಯಾಂಡ್  ದ್ವೀಪ
-ಗ್ಯಾಲಪಗೋಸ್‌ ದ್ವೀಪ

-ಪ್ರೀತಿ ಭಟ್‌ ಗುಣವಂತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next