Advertisement
ಮಹಾನಗರ ಜನತೆಗೆ ತ್ವರಿತ ಸಾರಿಗೆ ಸೇವೆ ನೀಡಲು ವಾಯವ್ಯ ಸಾರಿಗೆ ಸಂಸ್ಥೆ ಸುಮಾರು 34 ಎಕರೆ ಆಸ್ತಿಯನ್ನು ಬಿಆರ್‌ಟಿಎಸ್ ಕಂಪನಿಗೆ ಹಸ್ತಾಂತರಿಸಿ 2013 ಅಕ್ಟೋಬರ್ ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ನಂತರ 2018 ಅಕ್ಟೋಬರ್ ತಿಂಗಳಲ್ಲಿ ಹಸ್ತಾಂತರಿಸಿದ ಆಸ್ತಿಯನ್ನು ಮರಳಿಸಬೇಕು ಎನ್ನುವುದು ಒಪ್ಪಂದವಾಗಿತ್ತು. ಒಪ್ಪಂದ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಇದೀಗ ಬಹುತೇಕ ಕಟ್ಟಡಗಳನ್ನು ವಾಯವ್ಯ ಸಾರಿಗೆ ಸಂಸ್ಥೆ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ನಿರ್ವಹಣೆ ವಿಚಾರಕ್ಕೆ ಬಂದರೆ ಯಾರು ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ವಿಪರ್ಯಾಸವೆಂದರೆ ಒಪ್ಪಂದ ಪ್ರಕಾರ ಬಿಆರ್ ಟಿಎಸ್ ಸಂಸ್ಥೆ ಅಭಿವೃದ್ಧಿಗಾಗಿ ಪಡೆದ ಆಸ್ತಿ ಮರಳಿಸುವ ದಾಖಲೀಕರಣ ಆಗಬೇಕಿತ್ತು. ಆದರೆ ಇನ್ನೊಂದಿಷ್ಟು ಕಾಮಗಾರಿಗಳು ಬಾಕಿ ಉಳಿದಿರುವ ಕಾರಣ ಈ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನಲಾಗಿದೆ.
Related Articles
Advertisement
ನಿರ್ವಹಣೆಗೆ ಅಡ್ಡಿ : ಕಟ್ಟಡಗಳು ನಿರ್ಮಾಣವಾಗಿ ನಾಲ್ಕೈದು ವರ್ಷ ಪೂರ್ಣಗೊಂಡಿಲ್ಲ. ಈಗಾಗಲೇ ಅಲ್ಲಲ್ಲಿ ಬಿರುಕು, ಬಾಗಿಲುಗಳ ಚೌಕಟ್ಟು ಕಿತ್ತೋಗಿವೆ. ಕಿಟಕಿಗಳಿಗೆ ಗಾಜಿನ ಬಾಗಿಲಿವೆ, ಗ್ರಿಲ್‌ಗಳಿಲ್ಲ. ಆಸ್ತಿ ಇನ್ನೂ ಬಿಆರ್‌ಟಿಎಸ್ ಅಧೀನದಲ್ಲಿದೆ ಎನ್ನುವ ತಾಂತ್ರಿಕ ಕಾರಣದಿಂದ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಗೋಕುಲ ರಸ್ತೆಯಲ್ಲಿ ನಿರ್ಮಾಣವಾಗಿರುವ ಕಾರ್ಯಾಗಾರದ ಕೆಳ ಅಂತಸ್ತಿನಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು, ವಿದ್ಯುತ್ ಕೇಬಲ್, ಬೋರ್ಡ್, ನೂರಾರು ಕಾರ್ಮಿಕರು ಜೊತೆಗೆ ನಗರ ವಿಭಾಗ ಕಚೇರಿಯೂ ಇದ್ದು, ಅವಘಡಕ್ಕೆ ಕಾದು ಕುಳಿತಂತಿದೆ. ದುರಸ್ತಿಗೆ ಮುಂದಾದರೆ ಆಡಿಟ್‌ನಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಾಗೆಯೇ ಬಿಡಲಾಗಿದೆ ಎನ್ನಲಾಗುತ್ತಿದೆ.
ಪರವಾನಗಿ, ಸಿಸಿ ಇಲ್ಲ! : ಅಭಿವೃದ್ಧಿಗಾಗಿ ಪಡೆದ ಬಿಆರ್‌ಟಿಎಸ್ ಕಂಪನಿ ಕಟ್ಟಡ ನಿಮಾಣಕ್ಕೆ ಪಾಲಿಕೆಯಿಂದ ಪರವಾನಗಿ ಪಡೆದಿಲ್ಲ. ಮುಕ್ತಾಯದ ನಂತರ ಸಿಸಿ ಕೂಡ ಪಡೆದಿಲ್ಲ. ಹಸ್ತಾಂತರಕ್ಕೆ ಇದು ಕೂಡ ದೊಡ್ಡ ಕಗ್ಗಂಟಾಗಿದ್ದು, ಇದೀಗ ಈ ಎರಡು ಕಾರ್ಯಗಳನ್ನು ವಾಯವ್ಯ ಸಾರಿಗೆ ಸಂಸ್ಥೆಯ ಜವಾಬ್ದಾರಿ ಎಂದು ಬಿಆರ್‌ಟಿಎಸ್ ಅಧಿಕಾರಿಗಳು ಕೈ ಎತ್ತಿದ್ದಾರೆ. ದುಡಿಯುವ ಸಿಬ್ಬಂದಿಗೆ ಸಂಬಳ ನೀಡದ ಪರಿಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ಪರವಾನಗಿ, ಸಿಸಿಗಾಗಿ 40-50 ಲಕ್ಷ ರೂ. ಪಾವತಿ ಮಾಡುವುದಾದರೂ ಹೇಗೆ ಎನ್ನುವಂತಾಗಿದೆ. ಇನ್ನೂ ಪರವಾನಗಿ ಹಾಗೂ ಸಿಸಿ ಪಡೆಯದಿರುವುದರಿಂದ ಅಗತ್ಯ ಸೌಲಭ್ಯ ಪಡೆಯಲು ತಾಂತ್ರಿಕ ತೊಂದರೆ ಅನುಭವಿಸುವಂತಾಗಿದ್ದು, ಆಗುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ
ಸಂಸ್ಥೆಯ ಆಸ್ತಿ ಹಸ್ತಾಂತರ ಕಾರ್ಯ ಇಷ್ಟೊತ್ತಿಗಾಗಲೇ ಆಗಬೇಕಿತ್ತು. ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಇವೆಲ್ಲಾ ಮುಗಿದ ನಂತರ ಹಸ್ತಾಂತರ ಮಾಡಿದರಾಯಿತು ಎಂದು ಹಿಂದಿನ ಎಂಡಿ ಹೇಳಿದ್ದರು. ನನಗಿರುವ ಮಾಹಿತಿ ಪ್ರಕಾರ ಉಳಿದ ಕೆಲಸಗಳು ಆಗಿಲ್ಲ. ಹಸ್ತಾಂತರ ಕುರಿತು ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಆಗಿರುವ ಹಾಗೂ ಉಳಿದಿರುವ ಕಾಮಗಾರಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. –ವಿ.ಎಸ್. ಪಾಟೀಲ, ಅಧ್ಯಕ್ಷ, ವಾಕರಸಾ ಸಂಸ್ಥೆ
-ಹೇಮರಡ್ಡಿ ಸೈದಾಪುರ