Advertisement

ಬಾಕಿ ವೇತನ-ಕೋವಿಡ್‌ ಭತ್ಯೆಗಾಗಿ ನೌಕರರ ಪಟ್ಟು

04:07 PM May 19, 2022 | Team Udayavani |

ಬಳ್ಳಾರಿ: ವಿಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಬಾಕಿ ವೇತನ ಮತ್ತು ಕೋವಿಡ್‌ ಭತ್ಯೆ ನೀಡುವಂತೆ ಆಗ್ರಹಿಸಿ ನಗರದ ವಿಮ್ಸ್‌ ನಿರ್ದೇಶಕರ ಕಚೇರಿ ಎದುರು ಎಐಯುಟಿಯುಸಿ ಸಂಯೋಜಿತ ವಿಮ್ಸ್‌ ಗುತ್ತಿಗೆ ನೌಕರ ಸಂಘವು ಬುಧವಾರ ಪ್ರತಿಭಟನೆ ನಡೆಸಿತು.

Advertisement

ನಗರದ ವಿಮ್ಸ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್‌ ಗುತ್ತಿಗೆ ನೌಕರರು ಹತ್ತು ಹಲವು ರೀತಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ. ಆದರೆ ಅವರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ವಿಮ್ಸ್‌ ಆಡಳಿತ ಸಂಪೂರ್ಣ ವಿಫಲವಾಗಿದೆ. ಕಳೆದ 3-4 ತಿಂಗಳುಗಳಿಂದ ವಿಮ್ಸ್‌ ಆಡಳಿತ ಸಂಬಳವೇ ನೀಡದೆ, ಗುತ್ತಿಗೆ ಕಾರ್ಮಿಕರನ್ನು ಬೀದಿಗೆ ಬರುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿರುವ ಸಂದರ್ಭದಲ್ಲಿ, ವಿಮ್ಸ್‌ ಆಡಳಿತ ಹಾಗೂ ಗುತ್ತಿಗೆದಾರರ ಈ ಕಾರ್ಯವೈಖರಿ ನಿಜಕ್ಕೂ ಖಂಡನೀಯ. 5 ತಿಂಗಳ ಹಿಂದೆ ಗುತ್ತಿಗೆ ಕಾರ್ಮಿಕರ ಮುಷ್ಕರ ನಡೆದ ಸಂದರ್ಭದಲ್ಲಿ, ತಿಂಗಳ ಮೊದಲ ವಾರದಲ್ಲಿ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಅವರ ನ್ಯಾಯಬದ್ದ ಕನಿಷ್ಠ ವೇತನ, ನೀಡಲಾಗುವುದೆಂದು ಭರವಸೆ ನೀಡಲಾಗಿತ್ತು. ಆದರೆ ವಿಮ್ಸ್‌ ಆಡಳಿತ ಹಾಗೂ ಗುತ್ತಿಗೆದಾರರಿಂದ ಈ ಭರವಸೆ ಗಾಳಿಗೆ ತೂರಲಾಗಿದೆ. ಅಲ್ಲದೆ, ಕೋವಿಡ್‌ ಸಂದರ್ಭದಲ್ಲಿ ದುಡಿದ ಹಲವಾರು ಗುತ್ತಿಗೆ ನೌಕರರಿಗೆ ಕೋವಿಡ್‌ ಭತ್ಯೆ ಇನ್ನೂವರೆಗೆ ನೀಡಿಲ್ಲ. ಕಳೆದ 5 ತಿಂಗಳುಗಳಿಂದ ಒಂದಲ್ಲ ಒಂದು ಕಾರಣಗಳನ್ನು ಹೇಳುತ್ತಿರುವ ವಿಮ್ಸ್‌ ಆಡಳಿತ ಕೋವಿಡ್‌ ಭತ್ಯೆ ನೀಡುವುದನ್ನು ಮುಂದೂಡುತ್ತಲೇ ಇದೆ. ತಮ್ಮ ಪ್ರಾಣ ಪಣಕ್ಕಿಟ್ಟು ದುಡಿದ ಗುತ್ತಿಗೆ ನೌಕರರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ. ಈ ಹಿನ್ನಲೆಯಲ್ಲಿ, ಕೂಡಲೆ ಗುತ್ತಿಗೆ ನೌಕರರ ಸಮಸ್ಯೆಗೆ ಪರಿಹಾರ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿ ಕಾರಿ ಪಿ.ಎಸ್. ಮಂಜುನಾಥ್‌, 2 ದಿನಗಳಲ್ಲಿ ಗುತ್ತಿಗೆ ನೌಕರರ ಖಾತೆಗಳಿಗೆ ಬಾಕಿ ವೇತನವನ್ನು ಪಾವತಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಮುಖಂಡ ಡಾ| ಪ್ರಮೋದ್‌, ಸುರೇಶ್‌, ಗುತ್ತಿಗೆ ನೌಕರರ ಸಂಘದ ಲಕ್ಷ್ಮೀ ಚಿಟ್ಟೆಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next