ಶಿಡ್ಲಘಟ್ಟ: ವಿದ್ಯುತ್ ಬಿಲ್ ವಸೂಲಿ ಮಾಡಲು ಅಭಿಯಾನ ನಡೆಸುತ್ತಿರುವ ಬೆಸ್ಕಾಂ ಅಧಿಕಾರಿಗಳು ಕೇವಲ ಗ್ರಾಹಕರು ಮಾತ್ರವಲ್ಲ ಸರ್ಕಾರಿ ಕಚೇರಿಗಳಲ್ಲಿ ಉಳಿಸಿಕೊಂಡಿರುವ ಬಾಕಿ ವಸೂಲಿಗೆ ಬಿಗಿ ಕ್ರಮ ಕೈಗೊಂಡಿದ್ದಾರೆ.
ಶಿಡ್ಲಘಟ್ಟ ನಗರದ ತಾಲೂಕು ಕಚೇರಿಗೆ ಸಂಬಂಧಿಸಿದ 6 ಲಕ್ಷ ರೂ. ಪಾವತಿಸಲು ಪದೇ ಪದೆ ಮನವಿ ಮಾಡಿಕೊಂಡು ನೋಟಿಸ್ ಜಾರಿಗೊಳಿಸಿದರೂ ಸಹಕಂದಾಯ ಇಲಾಖೆಯ ಅಧಿಕಾರಿಗಳುವಿದ್ಯುತ್ ಪಾವತಿಸಲು ನಿರ್ಲಕ್ಷ್ಯವಹಿಸಿರುವುದರಿಂದ ಬೆಸ್ಕಾಂ ಅಧಿಕಾರಿಗಳು ತಾಲೂಕು ಕಚೇರಿ (ಮಿನಿ ವಿಧಾನಸೌಧದ) ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಶಾಕ್ ನೀಡಿದ್ದಾರೆ.
ಪರದಾಟ: ಸಾಮಾನ್ಯವಾಗಿ ತಾಲೂಕು ಕಚೇರಿಗೆ ನಾನಾ ಕೆಲಸ ಕಾರ್ಯಗಳಿಗಾಗಿ ವಿದ್ಯಾರ್ಥಿಗಳು, ರೈತರು ಮತ್ತು ನಾಗರಿಕರುಬರುತ್ತಾರೆ. ಆದರೆ ಇಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ತಾಲೂಕು ಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ, ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಲು ಪರದಾಡುವಂತಾಯಿತು. ಇನ್ನೂ ತಾಲೂಕು ಕಚೇರಿ ಸಿಬ್ಬಂದಿ ವಿದ್ಯುತ್ ಇಲ್ಲ. ಹೀಗಾಗಿಅರ್ಜಿಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲವೆಂದು ಸಿದ್ಧ ಉತ್ತರ ನೀಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದಿತ್ತು.
ಬೆಳಕಿನ ಭಾಗ್ಯ: ಜಿಲ್ಲಾಧಿಕಾರಿಗಳ ಕಚೇರಿಯಿಂದ ಮತ್ತು ತಾಲೂಕು ದಂಡಾಧಿಕಾರಿ ಕೆ.ಅರುಂಧತಿ ಅವರು ವಿದ್ಯುತ್ ಬಿಲ್ ಪಾವತಿಸಲು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭ್ಯಯಂತರ ಬಿ.ಪ್ರಭು ಅವರು ತಮ್ಮ ಸಿಬ್ಬಂದಿಯೊಂದಿಗೆ ತಾಲೂಕುಕಚೇರಿಗೆ ತೆರಳಿ ಮರು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಅಕ್ಟೋಬರ್ 22 ರಿಂದ ಕಗ್ಗತ್ತಲ್ಲಲ್ಲಿ ಮುಳುಗಿದ ತಾಲೂಕು ಕಚೇರಿಗೆ ಬೆಳಕಿನ ಭಾಗ್ಯ ಬಂದಂತಾಗಿದೆ.
ವಿದ್ಯಾರ್ಥಿಗಳ ಪರದಾಟ: ಸಾಮಾನ್ಯವಾಗಿ ಈ ತಿಂಗಳ ಅಂತ್ಯದೊಳಗೆ ಅಲ್ಪಸಂಖ್ಯಾತರ ಇಲಾಖೆ ವಿದ್ಯಾರ್ಥಿವೇತನದ ಅರ್ಜಿಗಳನ್ನು ಸಲ್ಲಿಸಲು ಸೂಚನೆ ನೀಡಿದೆ ಇದರಿಂದ ಪೋಷಕರು ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪಡೆಯಲು ತಾಲೂಕುಕಚೇರಿಗೆ ಅಲೆದಾಡುವಂತಾಗಿದೆ ವಿದ್ಯುತ್ ಸಂಪರ್ಕ ಇಲ್ಲದೇ ವಿದ್ಯಾರ್ಥಿಗಳು ಪೋಷಕರು ಆತಂಕಗೊಂಡಿದ್ದರುಇದರಲ್ಲದೆ ಸಿಇಟಿ ಪರೀಕ್ಷೆಗೆ ಪ್ರಮಾಣಪತ್ರ ಪಡೆಯಲು ಸಹ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಶಿಡ್ಲಘಟ್ಟ ತಾ.ಕಚೇರಿಯ ವಿದ್ಯುತ್ ಬಿಲ್ ಹಿಂದಿನಿಂದ ಬಾಕಿ ಉಳಿಸಿಕೊಂಡಿದ್ದಾರೆ. ಬೆಸ್ಕಾಂವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರೂ ಅಲಾಟ್‌ಮೆಂಟ್‌ಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಮಾಡಿದ್ದೇವೆ. ಅಲಾಟ್‌ಮೆಂಟ್ ಬಂದಿಲ್ಲ. ಬಿಲ್ ಪಾವತಿಸಲು ವಿಳಂ ಬವಾಗಿದೆ. ಬೆಸ್ಕಾಂ ಇಲಾಖೆಯವರು ಸಂಪರ್ಕ ಕಡಿತಗೊಳಿಸಿ ದ್ದರು. ಇದೀಗ ಸಂಪರ್ಕ ಕಲ್ಪಿಸಿದ್ದಾರೆ.
–ಕೆ.ಅರುಂಧತಿ, ತಹಶೀಲ್ದಾರ್ ಶಿಡ್ಲಘಟ್ಟ
ಶಿಡ್ಲಘಟ್ಟ ತಾ.ಕಚೇರಿಯಲ್ಲಿ ಬಿಲ್ ಪಾವತಿಸದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮತ್ತು ತಾಲೂಕು ದಂಡಾಧಿಕಾರಿಗಳು ಕಾಲಾವಕಾಶ ಕೇಳಿರುವುದರಿಂದ ಮರು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
– ಬಿ.ಪ್ರಭು, ಎಇಇ ಬೆಸ್ಕಾಂ