ಹಾಸನ: ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಆರ್ ಟಿ-ಪಿಸಿಆರ್(ರಿವರ್ಸ್ ಟ್ರಾನ್ಸ್‌ಸ್ಕ್ರಿಪ್ಷನ್ -ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆಯನ್ನು ಮೂರು ಪಟ್ಟು ಹೆಚ್ಚಿಸಬೇಕು. ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ನಗರ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಹಾಗೂ ಸ್ಥಳೀಯಸಂಸ್ಥೆಗಳಕಂದಾಯಅಧಿಕಾರಿಗಳಿಗೆ ನಿಗದಿತ ಗುರಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯ್ ಭಾಸ್ಕರ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಮರಣ ಪ್ರಮಾಣ ಹೆಚ್ಚಾಗಿರುವ 7 ರಾಜ್ಯಗಳೊಂದಿಗೆ ಪ್ರಧಾನ ಮಂತ್ರಿಯವರು ಬುಧವಾರ ವಿಡಿಯೋ ಸಂವಾದ ನಡೆಸಿ ಸೋಂಕು ತಡೆಗಟ್ಟಲು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವುಗಳನ್ನು ಎಲ್ಲಾ ಜಿಲ್ಲೆಗಳು ಅನುಸರಿಸಬೇಕು ಎಂದು ಸೂಚಿಸಿದರು.
ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವನ್ನು 24 ಗಂಟೆಯೊಳಗೆ ಮಾಡಬೇಕು,ಒಬ್ಬ ಸೋಂಕಿತರಿಗೆ10ಮಂದಿ ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವ ಮೂಲಕ ಸೋಂಕು ಹರಡವಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಹೋಂಐಸೋಲೇಷನ್‌ನಲ್ಲಿರುವವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿ ಪ್ರತಿ ದಿನ ವೈದ್ಯರು ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳಬೇಕು, ಅವರೆಲ್ಲರಿಗೂ ಥರ್ಮೋ ಮೀಟರ್ ನೀಡಿ ನಿಗಾವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಪಪ್ರಚಾರ; ಕಠಿಣ ಕ್ರಮಕೈಗೊಳ್ಳಿ: ಮೈಕ್ರೋ ಕಂಟೇನ್ಮೆಂಟ್ ವಲಯದಲ್ಲಿ ಇರು ವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸ ಬೇಕು. ಸೋಂಕಿತರ ಸಂಪರ್ಕಿತರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಎರೆಡೆರಡು ಬಾರಿ ಪರೀಕ್ಷೆಗೆ ಒಳಪಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ಪರೀಕ್ಷೆಯ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ವಿಜಯಭಾಸ್ಕರ್ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಶ್ರೀನಿವಾಸ್‌ಗೌಡ ಜಿಲ್ಲೆಯಲ್ಲಿನ ಸೋಂಕಿತರ ಪತ್ತೆಗಾಗಿ ಸರ್ಕಾರ ನೀಡಿರುವ ಆರ್ ಟಿ-ಪಿಸಿಆರ್ ಹಾಗೂ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗಳ ಗುರಿ ಸಾಧನೆ ಹಾಗೂ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸುತ್ತಿರುವುದರ ಕುರಿತು ಮಾಹಿತಿ ನೀಡಿದರು. ಜಿಪಂ ಸಿಇಒ ಬಿ.ಎ.ಪರಮೇಶ್, ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಮತ್ತಿತರ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಹಾಜರಿದ್ದರು.