Advertisement
ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕದ್ದುಮುಚ್ಚಿ ಬಾಲ್ಯ ವಿವಾಹ ನಡೆಯುತ್ತಲೇ ಇವೆ. ಹೀಗಾಗಿ ಮದುವೆ ಆಯೋಜಿಸುವ ಆರಂಭ ಹಂತದಲ್ಲೂ ಕಣ್ಗಾವಲಿಗೆ ಜಿಲ್ಲಾಡಳಿತ ಮುಂದಾಗಿದೆ. ಬಾಲ್ಯ ವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಪ್ರಕಾರ ಮದುವೆ ಆಮಂತ್ರಣ ಮುದ್ರಣಕಾರರೂ ಅಪರಾಧಿಗಳಾಗುತ್ತಾರೆ. ಕಾನೂನು ಪ್ರಕಾರ ಅವರಿಗೆ ಕನಿಷ್ಠ 1, ಗರಿಷ್ಠ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಈ ತಿದ್ದುಪಡಿ ಕಾನೂನಿನಲ್ಲಿ ಅವಕಾಶಗಳಿವೆ.
ಯಾವುದೇ ವ್ಯಕ್ತಿ ಅಥವಾ ಕುಟುಂಬದವರು ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಬಂದರೆ ಅವರಿಂದ ವಯಸ್ಸಿನ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಜನನ ಪ್ರಮಾಣ ಪತ್ರ, ಶಾಲಾ ವಯಸ್ಸಿನ ದೃಢೀಕರಣ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಸರ್ಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ ನೀಡಿದ ದೃಢೀಕರಣ ಪತ್ರ ಮುಂತಾದ ಯಾವುದಾದರೊಂದು ಪ್ರಮಾಣ ಪತ್ರ ಪಡೆದ ಬಳಿಕವೇ ಆಮಂತ್ರಣ ಪತ್ರಿಕೆ ಮುದ್ರಿಸಲು ಸೂಚಿಸಲಾಗಿದೆ.
Related Articles
ಜಿಲ್ಲೆಯ ಎಲ್ಲ ಮುದ್ರಣಕಾರರು, ಡಿಟಿಪಿ ಕೇಂದ್ರದವರು ತಾವು ಮುದ್ರಿಸುವ ಮದುವೆ ಆಮಂತ್ರಣ ಪತ್ರಿಕೆಗಳ ಒಂದು ಪ್ರತಿ, ಅದಕ್ಕೆ ಪಡೆದ ವಯಸ್ಸಿನ ದೃಢೀಕರಣ ಪತ್ರಗಳನ್ನು ಕಡ್ಡಾಯವಾಗಿ ಆಯಾ ಮುದ್ರಣಾಲಯದ ಕಡತಗಳಲ್ಲಿ ಕಾಯ್ದಿಟ್ಟಿರಬೇಕೆಂಬ ಸೂಚನೆಯಿದೆ.
Advertisement
ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಜಿಲ್ಲೆಯ ಎಲ್ಲ ಮುದ್ರಣಕಾರರು, ಡಿಟಿಪಿ ಕೇಂದ್ರಗಳಿಗೆ ವಿಶೇಷ ಸೂಚನಾ ಪತ್ರ ಹೊರಡಿಸಲಾಗಿದೆ. ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲು ಹುಡುಗಿಗೆ 18, ಹುಡುಗನಿಗೆ 21 ವಯಸ್ಸಿನ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.– ಕೆ.ಜಿ. ಶಾಂತಾರಾಮ್, ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಬಾಲ್ಯ ವಿವಾಹ ತಡೆಯುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನೆ ಸಮಿತಿ – ಶ್ರೀಶೈಲ ಕೆ. ಬಿರಾದಾರ