ವಿಮಾನ ಸಂಚಾರದ ವೇಳೆ ಮಹಿಳಾ ಸಹಯಾನಿಯ ಮೇಲೆ ಪುರುಷ ಯಾನಿಯೋರ್ವ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಸಮಗ್ರ ತನಿಖೆ ನಡೆಸಿದ ಬಳಿಕ ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಏರ್ ಇಂಡಿಯಾಗೆ 30 ಲಕ್ಷ ರೂ. ಮತ್ತು ಕರ್ತವ್ಯ ಪಾಲನೆಯಲ್ಲಿ ವಿಫಲರಾದ ಏರ್ ಇಂಡಿಯಾ ವಿಮಾನ ಸೇವಾ ನಿರ್ದೇಶಕರಿಗೆ 3 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.
ಘಟನೆ ನಡೆದ ವಿಮಾನದ ಪೈಲಟ್ ಇನ್ ಕಮಾಂಡ್ ಅವರ ಲೈಸನ್ಸ್ ಅನ್ನು ಮೂರು ತಿಂಗಳ ಅವಧಿಗೆ ಅಮಾನತು ಗೊಳಿಸಿ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಡಿಜಿಸಿಎ ಇದೇ ಮೊದಲ ಬಾರಿಗೆ ವಿಮಾನಯಾನ ಕಂಪೆನಿಗೆ ದಂಡವನ್ನು ವಿಧಿಸುವಂತಹ ದಿಟ್ಟ ಮತ್ತು ಅತ್ಯಂತ ಸಮುಚಿತ ನಿರ್ಧಾರ ಕೈಗೊಂಡಿದೆ.
ವಿಮಾನ ಯಾನದ ವೇಳೆ ಸುರಕ್ಷತೆಯ ದೃಷ್ಟಿಯಿಂದ ಸಿಬಂದಿ ಮತ್ತು ಯಾನಿಗಳಿಗೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ನಿಯಮಾವಳಿ ಗಳನ್ನು ಅನುಸರಿಸುತ್ತ ಬರಲಾಗಿದ್ದು ಇವುಗಳ ಪಾಲನೆಯಲ್ಲಿ ಕೊಂಚ ಲೋಪವಾದರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತ ಬರಲಾಗಿದೆ. ಅಷ್ಟು ಮಾತ್ರವಲ್ಲದೆ ವಿಮಾನಯಾನದ ವೇಳೆ ಯಾವುದೇ ಪ್ರಯಾಣಿಕ ಅನುಚಿತ ವರ್ತನೆ ತೋರಿದ್ದೇ ಆದಲ್ಲಿ ದಂಡ, ವಿಮಾನ ಪ್ರಯಾಣಕ್ಕೆ ನಿರ್ಬಂಧ, ಜೈಲು ಶಿಕ್ಷೆಯಂಥ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದೇ ವೇಳೆ ವಿಮಾನದ ಸಿಬಂದಿಯಿಂದ ಇಂಥ ಲೋಪ ಅಥವಾ ಪ್ರಮಾದಗಳು ನಡೆದರೂ ಅವರ ವಿರುದ್ಧವೂ ನಿಯಮಾವಳಿಗಳಿಗ ನುಸಾರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
ಇವೆಲ್ಲದರ ಹೊರತಾಗಿಯೂ ಪ್ರಕರಣ ನಡೆದು ಎರಡು ತಿಂಗಳುಗಳಾದರೂ ಏರ್ ಇಂಡಿಯಾ ಡಿಜಿಸಿಎಗೆ ವರದಿ ನೀಡದಿರುವುದು ಮತ್ತು ತಪ್ಪಿತಸ್ಥ ಯಾನಿಯ ವಿರುದ್ಧ ಕ್ರಮ ಜರಗಿಸದೇ ಇದ್ದುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಮಾತ್ರವಲ್ಲದೆ ಭಾರತೀಯ ವಿಮಾನಯಾನ ಕಂಪನಿಗಳು ನೀಡುತ್ತಿರುವ ಸೇವೆಗೆ ಮಸಿ ಬಳಿದಂತಾಗಿತ್ತು. ಘಟನೆ ನಡೆದ ವಿಮಾನದ ಪೈಲಟ್, ಕಂಪೆನಿಯ ಸೇವಾ ನಿರ್ದೇಶಕರು, ಸಿಬಂದಿ ಮತ್ತು ಸಹಯಾನಿಯ ಮೇಲೆ ಮೂತ್ರ ಮಾಡಿದ ಆರೋಪಿಯ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿತ್ತು. ಅದರಂತೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಸಿಎ, ಏರ್ ಇಂಡಿಯಾದಿಂದ ಘಟನೆಯ ಸಮಗ್ರ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ ಬಳಿಕ ಕಂಪೆನಿಗೆ ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ.
ವಿಮಾನಯಾನದ ಸಂದರ್ಭದಲ್ಲಿ ಯಾನಿಗಳ ಅನುಚಿತ ವರ್ತನೆ, ನಿಯಮಾವಳಿಗಳ ಉಲ್ಲಂಘನೆ, ಸಿಬಂದಿಯಿಂದ ಕರ್ತವ್ಯಲೋಪ ಮತ್ತು ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡದೆ ಗೌಪ್ಯವಾಗಿರಿಸುವಂಥ ಪ್ರಕರಣಗಳು ಪದೇ ಪದೆ ನಡೆಯುತ್ತಿವೆ. ಇಂತಹ ಘಟನಾವಳಿಗಳು ಹೆಚ್ಚುತ್ತಿರುವ ಬೆನ್ನಲ್ಲೇ ಡಿಜಿಸಿಎ ಏರ್ ಇಂಡಿಯಾ ಕಂಪೆನಿ ಮತ್ತದರ ಸೇವಾ ನಿರ್ದೇಶಕರಿಗೆ ದಂಡ ವಿಧಿಸುವ ನಿರ್ಧಾರ ಕೈಗೊಂಡಿರುವುದು ಉಳಿದ ವಿಮಾನಯಾನ ಸಂಸ್ಥೆಗಳು ಮತ್ತು ಕಂಪೆನಿಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ. ಇನ್ನಾದರೂ ವಿಮಾನಯಾನ ಕಂಪೆನಿಗಳು ಯಾನಿಗಳ ಸುರಕ್ಷೆಗೆ ಮೊದಲ ಆದ್ಯತೆ ನೀಡುವುದರ ಜತೆಯಲ್ಲಿ ನಿಯಮಾವಳಿಗಳಿಗ ನುಸಾರವಾಗಿ ಯಾನಿಗಳಿಗೆ ಸೇವೆ ನೀಡಲು ಕಟಿಬದ್ಧವಾಗಬೇಕು.