Advertisement

ಪ್ಲಾಸ್ಟಿಕ್‌ ಬಳಸಿದವರಿಗೂ ದಂಡ?

06:30 AM Jul 02, 2019 | Lakshmi GovindaRaj |

ಬೆಂಗಳೂರು: ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವುದಕ್ಕೆ ಪ್ಲಾಸ್ಟಿಕ್‌ ಬಳಸುವವರಿಗೂ ಕಡ್ಡಾಯ ದಂಡ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬಳಸುವವರೂ ದಂಡ ತೆರಬೇಕಾಗುತ್ತದೆ. ಈಗ ಪ್ಲಾಸ್ಟಿಕ್‌ ಮಾರಾಟ ಮತ್ತು ಉತ್ಪಾದಿಸುವವರಿಗೂ ದಂಡ ವಿಧಿಸಲಾಗುತ್ತಿದ್ದೆ. ಆದರೂ ಪ್ಲಾಸ್ಟಿಕ್‌ ಬಳಕೆ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಹೀಗಾಗಿ, ದಂಡವಿಧಿಸುವಂತೆ ಮನವಿ ಮಾಡಲು ಮುಂದಾಗಿದೆ.

Advertisement

ಈ ಬಗ್ಗೆ ಸೋಮವಾರ ಚೌಡಯ್ಯ ಸ್ಮಾರಕಭವನದಲ್ಲಿ ಬಿಬಿಎಂಪಿ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಬಿಬಿಎಂಪಿಯ ಪಶ್ಚಿಮ ವಲಯದ 44 ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ-2016 ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮ ಕುರಿತು ಹಮ್ಮಿಕೊಂಡಿದ್ದ ಚರ್ಚೆ ಮತ್ತು ಸಂವಾದದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಸುಭಾಷ್‌ ಬಿ ಆದಿ ಅವರು ಮಾಹಿತಿ ನೀಡಿದರು.

“ರಾಜ್ಯದಲ್ಲಿ ಪ್ಲಾಸ್ಟಿಕ್‌ ಬಳಕೆ ಏಕೆ ನಿಲ್ಲುತ್ತಿಲ್ಲ, ಅಧಿಕಾರಿಗಳು ಯಾವ ಕ್ರಮ ತೆಗೆದುಕೊಂಡಿದ್ದಾರೆ’ ಎಂದು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ಲಾಸ್ಟಿಕ್‌ ಬಳಕೆ ರಾಜ್ಯದಲ್ಲಿ ಸಂರ್ಪೂಣವಾಗಿ ನಿಷೇಧಿಸಿದ್ದರೂ ಹೊರ ರಾಜ್ಯಗಳಿಂದ ತಂದು ಬಳಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ನಿರ್ಲಕ್ಷ್ಯವೂ ಕಾರಣ. ಪ್ಲಾಸ್ಟಿಕ್‌ ಕೈ ಚೀಲಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಬೇಕಾದರೆ ದಂಡವೊಂದೇ ಮಾರ್ಗ ಎನ್ನುವಂತೆ ಪರಿಸ್ಥಿತಿ ಬದಲಾಗಿದೆ.

ಸಾರ್ವಜನಿಕರು ಪ್ಲಾಸ್ಟಿಕ್‌ ಬಳಸಿದರೆ ದಂಡ ವಿಧಿಸುವಂತೆ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕಸ ವಿಲೇವಾರಿ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವ ಸಂಬಂಧ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಲಿದೆ’ ಎಂದು ಹೇಳಿದರು. “ದೇಶದಲ್ಲಿ 1.50 ಲಕ್ಷ ಟನ್‌ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.

ಇತ್ತೀಚಿನ ವರ್ಷದವರೆಗೆ ಘನ ತ್ಯಾಜ್ಯ ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗುತ್ತಿರಲಿಲ್ಲ. ನಿರ್ವಹಣೆ ಬಗ್ಗೆ 1996ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಕೆಯಾಗಿತ್ತು. ಅಲ್ಲಿಂದ 2014ರವರೆಗೆ ಹಲವು ಸಮಿತಿಗಳನ್ನು ರಚಿಸಿ, 2016ರಲ್ಲಿ ಕೇಂದ್ರ ಸರ್ಕಾರ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಸುದೀರ್ಘ‌ ನಿಯಮಾವಳಿಯನ್ನು ರೂಪಿಸಿದೆ. 2018ರಲ್ಲಿಯೂ ಅಂತಿಮವಾಗದಿದ್ದಾಗ 2018ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೇಮಿಸಲಾಗಿದೆ.

Advertisement

ರಾಜ್ಯದಲ್ಲಿ 11,085 ಟನ್‌ ಘನ ತ್ಯಾಜ್ಯ ಮತ್ತು ಬೆಂಗಳೂರಿನನಲ್ಲಿ 5,600 ಟನ್‌ ಘನ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಅಂದರೆ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ತ್ಯಾಜ್ಯ ಬೆಂಗಳೂರು ನಗರದಲ್ಲೇ ಉತ್ಪಾದನೆಯಾಗುತ್ತಿದೆ. “ನಮ್ಮ ಕಸ ನಮ್ಮ ಜವಾಬ್ದಾರಿ’ ಎನ್ನುವ ಘೋಷಾವಾಕ್ಯದೊಂದಿಗೆ ಅರಿವು ಮೂಡಿಸಲಾಗುತ್ತಿದೆ. ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡುವ ಜತೆಗೆ ಅದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ.

ಹಾನಿಕಾರಕ ತ್ಯಾಜ್ಯಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ. ಇದನ್ನು ಸೂಕ್ತ ನಿರ್ವಹಣೆಯ ಮೂಲಕ ತಪ್ಪಿಸಬಹುದು. ಚೆನ್ನೈನಲ್ಲಿ ಶೂನ್ಯ ತ್ಯಾಜ್ಯ ದ ಪರಿಕಲ್ಪನೆ ಮೂಡಿದೆ. ಇದೇ ರೀತಿ ನಮ್ಮಲ್ಲೂ ಕಾಂಪೋಸ್ಟ್‌ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳಬೇಕು’ ಎಂದರು. “ಮನೆ ಮಟ್ಟದಲ್ಲಿ ಹಸಿ ಮತ್ತು ಒಣ ತ್ಯಾಜ್ಯದ ವಿಂಗಡಣೆ ಪ್ರಮಾಣ ಕೆಲವು ವರ್ಷಗಳ ಹಿಂದೆ ಶೇ.50ರಿಂದ 60ರಷ್ಟಿತ್ತು. ಈಗ ಅದು ಶೇ.30ಕ್ಕೆ ಕುಸಿತ ಕಂಡಿದೆ. ಇದಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಇಚ್ಛಾಶಕ್ತಿ ಕೊರತೆಯೇ ಕಾರಣ.

ಬೆಂಗಳೂರಿನಲ್ಲಿ ಶೇ.100ರಷ್ಟು ತ್ಯಾಜ್ಯ ವಿಂಗಡಣೆಯಾಗಬೇಕು’ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದರು. “ಇನ್ನೊಂದು ತಿಂಗಳಲ್ಲಿ ಪ್ರತ್ಯೇಕ ತ್ಯಾಜ್ಯ ವಾಹನಗಳ ಟೆಂಡರ್‌ ಪ್ರಕ್ರಿಯೆ ಮುಗಿಯಲಿದೆ. ಇದರಿಂದ ವಾರದಲ್ಲಿ ಎರಡು ದಿನ ಒಣ ತ್ಯಾಜ್ಯ ಮತ್ತು ಪ್ರತಿದಿನ ಹಸಿತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದಕ್ಕೂ ದಂಡವೇ ಪರಿಹಾರ ಎನ್ನುವಂತಾಗಬಾರದು ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಬೇಕು’ಎಂದು ಮನವಿ ನೀಡಿದರು.

ದೂರುಗಳ ಸುರಿಮಳೆ, ಪರಿಹಾರಗಳ ಚಿಂತನೆ: ಬಿಬಿಎಂಪಿ ಪಶ್ಚಿಮ ವಲಯದ 44 ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರು ತಮ್ಮ ವಾರ್ಡ್‌ಗಳಲ್ಲಿ ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಶಾಲೆಯ ಪಕ್ಕದಲ್ಲೇ ತ್ಯಾಜ್ಯ ಎಸೆಯುತ್ತಿರುವುದು, ರಸ್ತೆಯಲ್ಲಿ ಡೈಪರ್‌ ಎಸೆಯುವುದು ಹಾಗೂ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.

ಇದರೊಂದಿಗೆ ಸಾರ್ವಜನಿಕರು ತಾವು ತಮ್ಮ ವಾರ್ಡ್‌ ವ್ಯಾಪ್ತಿಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಮತ್ತು ಕೈಗಾರಿಕಾ ತ್ಯಾಜ್ಯ ನಿರ್ವಾಹಣೆಗೆ ಅಳವಡಿಸಿಕೊಂಡಿರುವ ಪರಿಹಾರ ಮಾರ್ಗಗಳು ಸಹ ಸಾರ್ವಜನಿಕರ ಗಮನ ಸೆಳೆಯಿತು. ಕೆಲವು ಯೋಜನೆಗಳ ಬಗ್ಗೆ ಬಿಬಿಎಂಪಿ ಮತ್ತು ಹಸಿರು ನ್ಯಾಯ ಮಂಡಳಿ ಸಹ ಚಿಂತಿಸುವುದಾಗಿ ತಿಳಿಸಿತು! ಅಷ್ಟರ ಮಟ್ಟಿಗೆ ಚರ್ಚೆ ಯಶಸ್ವಿಯಾಗಿದೆ.

ಪ್ರಾಯೋಗಿಕ ತ್ಯಾಜ್ಯ ಸಂಗ್ರಹ ಕೇಂದ್ರ: ತ್ಯಾಜ್ಯ ಸಂಗ್ರಹ ಕೇಂದ್ರ ತೆರೆದರೆ ಜನರೇ ಬಂದು ಅಲ್ಲಿ ತ್ಯಾಜ್ಯ ನೀಡುತ್ತಾರೆ. ಅದಕ್ಕೆ ಹಣ ನೀಡಿದರೆ ತ್ಯಾಜ್ಯ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗಲಿದೆ ಎಂದು ಮಣಿ ಎನ್ನುವವರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)ರಂದೀಪ್‌, ಈಗಾಗಲೇ ಪ್ರಾಯೋಗಿಕವಾಗಿ ವಾರ್ಡ್‌ ನಂ.113ರಲ್ಲಿ ಸಹಾಸ್‌ ಎನ್ನುವ ಸಂಸ್ಥೆಯ ಸಹಯೋಗದಲ್ಲಿ ತ್ಯಾಜ್ಯ ಸಂಗ್ರಹ ಕೇಂದ್ರವನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ ಸಭೆ: “ಬಿಬಿಎಂಪಿಯಲ್ಲಿ ಅತೀ ಭ್ರಷ್ಟರೇ ಸೇರಿಕೊಂಡಿದ್ದಾರೆ. ಇಲ್ಲಿ ಮೇಯರ್‌ ಮತ್ತು ಪಾಲಿಕೆ ಸದಸ್ಯರ ಮಾತನ್ನೇ ಅಧಿಕಾರಿಗಳು ಕೇಳುವುದಿಲ್ಲ ಮೊದಲು ನಾವು ಸರಿ ಇರಬೇಕು ಆಗ ಸಾರ್ವಜನಿಕರು ಸರಿಹೋಗುತ್ತಾರೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು. ಸಭೆ ಉದ್ದೇಶಿಸಿ ಮಾತನಾಡಿದ ಅವರು, 40 ವರ್ಷಗಳ ರಾಜಕೀಯದಲ್ಲಿ ಇಂತಹ ದುರಾಡಳಿತ ನೋಡಿಲ್ಲ. ವಾಣಿಜ್ಯ ಪ್ರದೇಶಗಳಿಂದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ತ್ಯಾಜ್ಯ ಸಂಗ್ರಹಿಸುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಪ್ರತ್ಯೇಕ ಟೆಂಡರ್‌ ಕರೆಯಲಾಗಿದೆ ಎಂದರು. ಧ್ವನಿಗೂಡಿಸಿದ ಉಪಮೇಯರ್‌, ಎಲ್ಲೂ ತ್ಯಾಜ್ಯ ಸಂಗ್ರಹಣೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು. “ನಿಮ್ಮ ನಿಮ್ಮಲೇ ( ಕಾಂಗ್ರೆಸ್‌ ಮತ್ತು ಜೆಡಿಎಸ್‌) ಮಾಡಿಕೊಂಡರೆ ಸಾಕೇ ಎಂದು ಸೋಮಣ್ಣ ಮಾರ್ವಿಕವಾಗಿ ಪ್ರಶ್ನಿಸಿದರು. ಮೇಯರ್‌ ಕಾಲಾವಧಿ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದೆ. ಒಂದು ವರ್ಷದಲ್ಲಿ ಏನು ಮಾಡಲು ಸಾಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದರೆ ಮೇಯರ್‌ ಅವಧಿ 30 ತಿಂಗಳು ಮಾಡಲಾಗುವುದು ಎಂದು ವಿ. ಸೋಮಣ್ಣ ಹೇಳಿದರು.

4 ಬಯೋಮಿಥನೈಸೇಷನ್: ಬಿಬಿಎಂಪಿ ಪಶ್ಚಿಮ ವಲಯ ವ್ಯಾಪ್ತಿ 49.78 ಚದರ ಕಿ.ಮೀ ವ್ಯಾಪ್ತಿ ಹೊಂದಿದ್ದು, ಬಿಬಿಎಂಪಿಯ 44 ವಾರ್ಡ್‌ಗಳು ವಲಯಕ್ಕೆ ಸೇರಿವೆ. ವಲಯದಲ್ಲಿ ನಿತ್ಯ 295 ಮೆಟ್ರಿಕ್‌ ಟನ್‌ ಹಸಿ ತ್ಯಾಜ್ಯ ಮತ್ತು 63 ಮೆಟ್ರಿಕ್‌ ಟನ್‌ ಒಣ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇಲ್ಲಿ ವಿಕೇಂದ್ರಿಕೃತ ಘನತ್ಯಾಜ್ಯ ನಿರ್ವಹಣೆಗೆ 4 ಬಯೋಮಿಥನೈಸೇಷನ್‌ ಘಟಕಗಳಿವೆ.

ಮಲ್ಲೇಶ್ವರದಲ್ಲಿ ಸಾವಯವ ಗೊಬ್ಬರ ತಯಾರಿಕೆ ಘಟಕವಿದ್ದು, ಪಶ್ಚಿಮ ವಲಯದ ದೇವಸ್ಥಾನದ ತ್ಯಾಜ್ಯವನ್ನು ಇಲ್ಲಿ ಸಂಸ್ಕರಿಸಲಾಗುತ್ತಿದೆ. ಸ್ವತಂತ್ರ್ಯ ಉದ್ಯಾನದಲ್ಲಿ ಬ್ರಿಕೇಟಿಂಗ್‌ಯಂತ್ರ ಅಳವಡಿಸಲಾಗಿದ್ದು, ಇಲ್ಲಿ ತೆಂಗಿನ ಕಾಯಿ ಬುರಡೆ ಮತ್ತು ಕಬ್ಬಿನ ಸಿಪ್ಪೆಯನ್ನು ಸಂಸ್ಕರಿಸಲಾಗುತ್ತಿದೆ. ಹೆಚ್ಚು ಜನಸಂದಣಿ ಹೊಂದಿರುವ ಕೆ.ಆರ್‌.ಮಾರುಕಟ್ಟೆ, ಕೇಂದ್ರ ರೈಲು ನಿಲ್ದಾಣ, ಮೆಜೆಸ್ಟಿಕ್‌ ಹಾಗೂ ಯಶವಂತಪುದ ಎಪಿಎಂಸಿ ಪ್ರದೇಶಗಳು ಇದೇ ವ್ಯಾಪ್ತಿಗೆ ಒಳಪಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next