Advertisement

ನಿಯಮ ಉಲ್ಲಂಘಿಸಿದ ಮುಖ್ಯಪೇದೆಗೂ ದಂಡ

02:16 PM May 20, 2021 | Team Udayavani |

ಹುಬ್ಬಳ್ಳಿ: ಕೊರೊನಾ ಕರ್ಫ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುತ್ತಿರುವ ಹಿನ್ನೆಲೆಯಲ್ಲಿ ವಿನಾಕಾರಣ ರಸ್ತೆಗಿಳಿಯುವವರ ಪ್ರಮಾಣ ಕಡಿಮೆಯಾಗಿದ್ದು, ಅಗತ್ಯ ಸೇವೆಯಡಿ ಓಡಾಡುವವರು ಸಂಚಾರ ನಿಯಮಗಳನ್ನು ಮರೆಯುತ್ತಿದ್ದು, ಅವರ ವಿರುದ್ಧವೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ಬೆಳಗ್ಗೆ 10:00 ಗಂಟೆಯೊಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಕಾಲ್ನಡಿಗೆಯಲ್ಲಿ ಬಂದು ಖರೀದಿಸುವುದನ್ನು ಜನರು ಪಾಲಿಸುತ್ತಿದ್ದಾರೆ. ಇದರ ನಡುವೆಯೂ ಕೆಲವರು ವಾಹನಗಳನ್ನು ತಂದು ಪೊಲೀಸರ ಅತಿಥಿಗಳಾಗುತ್ತಿದ್ದಾರೆ. ಅಂತಹ ವಾಹನಗಳನ್ನು ಪೊಲೀಸರು ಮುಲಾಜಿಯಿಲ್ಲದ ಜಪ್ತಿ ಮಾಡುತ್ತಿದ್ದಾರೆ. ಸಮಯ ಮುಗಿದ ನಂತರದಲ್ಲಿ ಮೆಡಿಕಲ್‌, ಊಟದ ಪಾರ್ಸಲ್‌ಗೆ ವಾಹನಗಳನ್ನು ತರುವುದು ಬಹುತೇಕ ನಿಂತಿದೆ. ಅದರೆ ಅಗತ್ಯ ಸೇವೆಗಳಡಿಯಲ್ಲಿ ಸಿಬ್ಬಂದಿ ಕಚೇರಿಗೆ ಓಡಾಡುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅಂತಹವರಿಗೆ ದಂಡ ವಿಧಿಸುವ ಕೆಲಸ ಪೊಲೀಸರಿಂದ ಆಗುತ್ತಿದೆ.

ಪಾಲಿಕೆ ಸಿಬ್ಬಂದಿಗೆ ದಂಡ: ಇದಕ್ಕೂ ಮೊದಲು ದ್ವಿಚಕ್ರ ವಾಹನದಲ್ಲಿ ಬಂದ ಪಾಲಿಕೆ ಪೌರ ಕಾರ್ಮಿಕನಿಗೂ ಹೆಲ್ಮೆಟ್‌ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಿದರು. ಇಲ್ಲೇ ಕೆಲಸಕ್ಕೆ ಹೋಗಿದ್ದೆ ಸಾರ್‌, ಹೆಲ್ಮೇಟ್‌ ಅಲ್ಲೆ ಬಿಟ್ಟು ಬಂದಿದ್ದೇನೆ. ಇನ್ನೊಮ್ಮೆ ಮರೆತು ಬರಲ್ಲ ಎಂದು ಮನವಿ ಮಾಡಿದರೂ ಬಿಡಲಿಲ್ಲ. ಕೊನೆಗೆ ಅವರಿವರ ಹತ್ತಿರ ಒಂದಿಷ್ಟು ಹಣ ಕೂಡಿಸಿ 500 ರೂ. ದಂಡ ಪಾವತಿಸಿ ದ್ವಿಕಚÅ ವಾಹನ ಪಡೆದುಕೊಂಡು ಹೋದರು. ವೈದ್ಯರಿಗೆ ಮಾಸ್ಕ್ ದಂಡ: ಪ್ರತ್ಯೇಕವಾಗಿ ಎರಡು ಕಾರಿನಲ್ಲಿ ಆಗಮಿಸಿದ ವೈದ್ಯರಿಗೆ ಮಾಸ್ಕ್ ದಂಡ ಹಾಕಿದರು. ಎರಡು ಕಾರುಗಳಲ್ಲಿ ವೈದ್ಯನನ್ನು ಹೊರತುಪಡಿಸಿ ಮತ್ತಾರೂ ಇರಲಿಲ್ಲ. ಆದರೆ ಓರ್ವ ವೈದ್ಯರು ಮಾಸ್ಕ್ ಧರಿಸದ ಕಾರಣಕ್ಕೆ 250 ರೂ ದಂಡ ಕಟ್ಟುವಂತೆ ಸೂಚಿಸಿದರು. ಕಾರಿನಲ್ಲಿ ಒಬ್ಬನೇ ಇದ್ದು, ಗಾಜುಗಳನ್ನು ಏರಿಸಿದ್ದೇನೆ. ಒಬ್ಬರಿದ್ದಾಗ ಮಾಸ್ಕ್ ಅಗತ್ಯವಿಲ್ಲ ಎಂದರು ಆದರೆ ಪೊಲೀಸರು ದಂಡ ಪಾವತಿಸಿಕೊಳ್ಳದೆ ಬಿಡಲಿಲ್ಲ.

ಇನ್ನೊಬ್ಬ ವೈದ್ಯರ ಮಾಸ್ಕ್ ಮೂಗಿನ ಕೆಳಗೆ ಇದ್ದ ಕಾರಣಕ್ಕೆ ದಂಡ ವಸೂಲಿ ಮಾಡಿದರು. ಇದರೊಂದಿಗೆ ಸರಿಯಾಗಿ ಮಾಸ್ಕ್ ಧರಿಸದವರಿಗೂ ದಂಡ ವಿಧಿಸಲಾಯಿತು. ವಕೀಲ- ಪೊಲೀಸರ ವಾಗ್ವಾದ: ಕಿತ್ತೂರು ಚನ್ನಮ್ಮ ವೃತ್ತದ ಚೆಕ್‌ಪೋಸ್ಟ್‌ ನಲ್ಲಿ ತಪಾಸಿಸುತ್ತಿದ್ದ ವೇಳೆ ಕಾರಿನಲ್ಲಿ ಬಂದ ವಕೀಲರೊಬ್ಬರನ್ನು ಪೊಲೀಸರು ಪ್ರಶ್ನಿಸಿದರು. ಮಾತಿಗೆ ಮಾತು ಬೆಳದು ದೀರ್ಘ‌ಕ್ಕೆ ಹೋಯಿತು. ಇದರಿಂದ ಕೆರಳಿದ ವಕೀಲರೊಬ್ಬರು ನಾನು ಧಾರವಾಡ ವಕೀಲರ ಸಂಘ ಕಾರ್ಯದರ್ಶಿ ಇದ್ದೇನೆ. ಬರಕೋ ನನ್ನ ಹೆಸರು ಎಂದು ಮಾತನಾಡಿದರು. ಇದರಿಂದ ಪೊಲೀಸರು ಕೂಡ ಒಂದಿಷ್ಟು ರೇಗಿದರು. ಕೊನೆಗೆ ಹಿರಿಯ ಅಧಿಕಾರಿಗಳು ಬಂದು ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಡೆಯಿತು.

ಪೌರ ಕಾರ್ಮಿಕರ ನಕಲಿ ಐಡಿ: ಪೌರ ಕಾಮಿಕರ ಗುರುತಿನ ಚೀಟಿಗಳನ್ನು ಕಲರ್‌ ಪ್ರಿಂಟ್‌ ಮಾಡಿ ಕೆಲವರು ಬಳಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಡಿಗೇರಿ, ಕಸಬಾ ಪೇಟೆ, ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಕಲಿ ಗುರುತಿನ ಚೀಟಿಗಳನ್ನು ಧರಿಸಿ ಓಡಾಡುವುದು ಕಂಡು ಬಂದಿದೆ. ಇದರೊಂದಿಗೆ ಪೌರ ಕಾರ್ಮಿಕರಿಗೆ ನೀಡಿರುವ ಅಂಗಿ ಇಟ್ಟುಕೊಂಡು ಸಂಚಾರ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಡಿಸಿಪಿ ಕೆ.ರಾಮರಾಜನ್‌ ಅವರು ತಪಾಸಣೆ ವೇಳೆ ಇದನ್ನು ಪತ್ತೆ ಹಚ್ಚಿದ್ದಾರೆ. ಗುರುತಿನ ಚೀಟಿ, ಬೈಕ್‌ ಸವಾರನ ಚಾಲನಾ ಪರವಾನಗಿ ಪತ್ರ ಪರಿಶೀಲನೆ ವೇಳೆ ನಕಲಿ ಗುರುತಿನ ಚೀಟಿ ಧರಿಸಿ ಓಡಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುವ ಪೌರ ಕಾರ್ಮಿಕರ ಗುರುತಿನ ಚೀಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.

Advertisement

ಕಮರೀಪೇಟೆ ಠಾಣೆ ಮುಖ್ಯ ಪೇದೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿದರು. ಕಿತ್ತೂರು ಚನ್ನಮ್ಮ  ವೃತ್ತದಲ್ಲಿದ್ದ ಡಿಸಿಪಿ ಕೆ.ರಾಮರಾಜನ್‌ ಅವರು, ಸಮವಸ್ತ್ರವಿಲ್ಲದ ಮುಖ್ಯಪೇದೆಯನ್ನು ಎಲ್ಲಿಗೆ ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ಏನು ಕೆಲಸ ಎಂದು ಕೇಳಿದರು. ತಾನು ಪೊಲೀಸ್‌ ಎಂದು ಗೌರವ ಸೂಚಿಸಿದರು.

ನೀವು ಶಿಸ್ತಿನ ಇಲಾಖೆಯಲ್ಲಿದ್ದು ಹೀಗೆ ಹೆಲ್ಮೆಟ್‌ ಇಲ್ಲದೆ ಓಡಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಇಲ್ಲಾ ಸಾರ್‌ ಅರ್ಜಂಟಾಗಿ ಬಂದು ಬಿಟ್ಟೆ ಎಂದು ಸಬೂಬು ನೀಡಿದರು. ಆದರೆ ಇದನ್ನೊಪ್ಪದ ಡಿಸಿಪಿ ನೀವು ಸಾರ್ವಜನಿಕರಿಗೆ ಹೇಳುವವರು ನೀವೇ ಹೀಗೆ ಮಾಡಿದರೆ ಹೇಗೆ ಎಂದು ದಂಡ ಕಟ್ಟುವಂತೆ ಸೂಚಿಸಿದರು. ದಂಡ ಕಟ್ಟಲು ಅಷ್ಟೊಂದು ಹಣವಿಲ್ಲದ ಕಾರಣ ಸ್ಥಳದಲ್ಲಿದ್ದ ಪರಿಚಯಸ್ಥರಿಂದ ಹಣ ಪಡೆದು ಸಂಚಾರಿ ಠಾಣೆ 500 ದಂಡ ಕಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next