ಹುಬ್ಬಳ್ಳಿ: ಯಾವುದೇ ಖರೀದಿ, ಪಾರ್ಸಲ್‌ಗೆ ಅನುಮತಿ ಇಲ್ಲದಿರುವ ಕಾರಣ ಮಂಗಳವಾರ ವಾಹನಗಳ ಓಡಾಟ ಸಾಕಷ್ಟು ಕಡಿಮೆಯಿತ್ತು. ಇನ್ನೂ ಮಾಸ್ಕ್, ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ, ವೈದ್ಯರು ಹಾಗೂ ಸಾರಿಗೆ ಸಂಸ್ಥೆ ನೌಕರರಿಗೆ ದಂಡ ವಿಧಿಸುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ನ ಎರಡನೇ ದಿನ ಜನರು ಉತ್ತಮ ಸ್ಪಂದನೆ ನೀಡಿದ್ದಾರೆ. ಅಗತ್ಯ ಸೇವೆ, ಕಚೇರಿಗಳಿಗೆ ಹೋಗುವ ಸಿಬ್ಬಂದಿ ಹೊರತುಪಡಿಸಿ ಆಸ್ಪತ್ರೆಗೆ ತೆರಳುತ್ತಿದ್ದವರ ವಾಹನಗಳು ಮಾತ್ರ ಇದ್ದವು. ನಗರದ ಪ್ರಮುಖ ರಸ್ತೆಗಳ ಸ್ಥಾಪಿಸಿರುವ ಚೆಕ್‌ಪೋಸ್ಟ್ ಗಳನ್ನು ಬಿಗಿ ಮಾಡಿರುವುದರಿಂದ ವಿನಾಕಾರಣ, ಸಣ್ಣ ಪುಟ್ಟ ಕಾರಣಗಳನ್ನಿಟ್ಟುಕೊಂಡು ರಸ್ತೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ.
ದಂಡ ವಸೂಲಿ: ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡದ ವಾಹನಗಳ ಚಾಲಕರು, ಸವಾರರಿಗೆ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ದಂಡ ಹಾಕಿದರು. ಕಾರಿನಲ್ಲಿ ಹೊರಟಿದ್ದ ವೈದ್ಯೆಯೊಬ್ಬರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನಿಸಿದ ಪೊಲೀಸರು ದಂಡ ಪಾವತಿ ಮಾಡುವಂತೆ ಸೂಚಿಸಿದರು. ಈ ನಡುವೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವೈದ್ಯೆ ಕೊನೆಗೆ ದಂಡ ಪಾವತಿ ಮಾಡಿ ಅಲ್ಲಿಂದ ತೆರಳಿದರು. ಇನ್ನೂ ಸಾರಿಗೆ ಸಂಸ್ಥೆ ಸಿಬ್ಬಂದಿ ವಾಹನದ ತಪಾಸಣೆ ನಡೆಸಿದ ಪೊಲೀಸರು ಕೆಲವರು ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ. ಅವರಿಗೂ ಕೂಡ ದಂಡ ವಿಧಿಸಿದರು. ಸಿಬ್ಬಂದಿಯನ್ನು ಕಚೇರಿಗೆ ಕರೆದುಕೊಂಡು ಬರುತ್ತಿದ್ದ ಪಾಲಿಕೆಯ ಎರಡು ವಾಹನಗಳನ್ನು ತಪಾಸಣೆ ನಡೆಸಿ ಸಾಮಾಜಿಕ ಅಂತರ ಕಾಪಾಡಿಲ್ಲ ಎಂದು ದಂಡ ವಿಧಿಸಿದರು.
ಕೋವಿಡ್ ಕರ್ತವ್ಯದಲ್ಲಿ ಇರುವ ಸಿಬ್ಬಂದಿಗೆ ಇದು ಅನ್ವಯಿಸುವುದಿಲ್ಲ. ಮೇಲಾಗಿ ಎಲ್ಲರೂ ಪಾಲಿಕೆ ಸಿಬ್ಬಂದಿಯಾಗಿದ್ದು, ಕಚೇರಿಗೆ ತೆರಳುತ್ತಿರುವುದಾಗಿ ಸಬೂಬು ನೀಡಿದರೂ ಪೊಲೀಸರು ಕ್ಯಾರೇ ಎನ್ನಲಿಲ್ಲ. ಕೊನೆಗೆ ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆಯಲ್ಲಿ ದಂಡ ಪಾವತಿಸಿದರು. ಕಚೇರಿಗೆ ತೆರಳಲು ಇದೊಂದು ವಾಹನವಿದ್ದು, ಬೇರೆ ಯಾವುದೇ ವ್ಯವಸ್ಥೆಯಿಲ್ಲದಿರುವಾಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಗೊಣಗಿದರು.
ದಂಡ, ಇಲ್ಲದಿದ್ದರೆ ಜಪ್ತಿ: ಹೆಲ್ಮೆಟ್ ಧರಿಸಿದ ಬೈಕ್ ಸವಾರನನ್ನು ತಡೆದು ಮಾಸ್ಕ್ ಕೇಳಿದರು. ಹೆಲ್ಮೆಟ್ ತೆಗೆದು ಮಾಸ್ಕ್ ಧರಿಸಿರುವುದಾಗಿ ತೋರಿಸಿದರೂ ಮಾಸ್ಕ್ ಸರಿಯಾಗಿ ಧರಿಸಿಲ್ಲ ಎಂದು ದಂಡ ಹಾಕಿದರು. ಹೆಲ್ಮೆಟ್ ತೆಗೆಯುವಾಗ ಮಾಸ್ಕ್ ಸರಿದಿದೆ.
ತಾನು ಮಾಸ್ಕ್ ಧರಿಸಿರುವುದಾಗಿ ಹೇಳಿದರೂ ದಿನದ ಅರ್ಧ ದುಡಿಮೆಯನ್ನು ದಂಡ ಕಟ್ಟಿಸಿಕೊಂಡರೆ ಹೇಗೆ ಎಂದು ಸವಾರ ಪ್ರಶ್ನಿಸಿದರು. ಜಾಸ್ತಿ ಮಾತನಾಡಿದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸುವುದಾಗಿ ದಬಾಯಿಸಿದರು. ಇದರಿಂದ ಅನಿವಾರ್ಯವಾಗಿ ಮಾಸ್ಕ್ ಧರಿಸಿಲ್ಲ ಎನ್ನುವ ದಂಡ ಪಾವತಿಸಿ ನಡೆದರು.