ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎಸ್ಐಟಿ ಕಸ್ಟಡಿ ವಿಸ್ತರಿಸಲಾಗಿದೆ. ಜೂನ್ 10ರವರೆಗೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ವಿದೇಶದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಎಸ್ಐಟಿ ಬಂಧಿಸಿತ್ತು. ಬಳಿಕ 42ನೇ ಎಸಿಎಂಎಂ ಕೋರ್ಟ್ ಅವರನ್ನು ಆರು ದಿನ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿತ್ತು. ಇಂದಿಗೆ ಅವರ ಕಸ್ಟಡಿ ಅವಧಿ ಮುಗಿದಿದ್ದು, ಮತ್ತೆ ನಾಲ್ಕು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಲಾಗಿದೆ.
ಪ್ರಜ್ವಲ್ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ವಿಚಾರಣೆಗೆ ಕೊಂಚ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಬೇಕಿದೆ. ಹೀಗಾಗಿ ಎಸ್‌ಐಟಿಯು ಗುರುವಾರ ಪ್ರಜ್ವಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದೆ. ಇದಾದ ಬಳಿಕ ಎಸ್‌ಐಟಿಯಲ್ಲಿ ದಾಖಲಾಗಿರುವ ಇನ್ನೂ 3 ಪ್ರಕರಣಗಳಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ.
ಸೋತು ಕಳೆಗುಂದಿದ ಪ್ರಜ್ವಲ್
ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ರೇವಣ್ಣ ಸೋತ ಸುದ್ದಿ ಎಸ್‌ಐಟಿ ಅಧಿಕಾರಿಗಳು ತಿಳಿಸುತ್ತಿದ್ದಂತೆ ಅವರು ಸಪ್ಪೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮುಖ ಕಳೆಗುಂದಿದ್ದು, ಹತಾಶೆಗೊಳಗಾಗಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಒಪ್ಪಿಗೆ ನೀಡಿದ ಬೆನ್ನಲ್ಲೇ ಅವರನ್ನು ಬುಧವಾರ ಬೌರಿಂಗ್ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು.