Advertisement

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

10:55 PM May 23, 2024 | Team Udayavani |

ಬೆಂಗಳೂರು: ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಗುದ್ದಾಟ ತಾರಕಕ್ಕೇರಿದ್ದು, ಎರಡೂ ಪಕ್ಷಗಳು ಈಗ ಸಾಮಾಜಿಕ ಜಾಲತಾಣ  “ಎಕ್ಸ್‌’ನಲ್ಲಿ ಪೋಸ್ಟ್‌ ವಾರ್‌ ನಡೆಸಿವೆ. ಒಂದೆಡೆ  “ಸಿ.ಡಿ. ಶಿವು ಎಲ್ಲಿದ್ದೀಯಪ್ಪ’ ಅಂತ ಜೆಡಿಎಸ್‌ ಜಾಲತಾಣದಲ್ಲಿ ಟ್ರೋಲ್‌ ಆರಂಭಿಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್‌ “ಉತ್ತರಿಸು ಪೆನ್‌ಡ್ರೈವ್‌ ಸ್ವಾಮಿ’ ಎಂದು ಕೇಳಲು ಆರಂಭಿಸಿದೆ.

Advertisement

“ಪ್ರಜ್ವಲ್‌ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ ಸಿ.ಡಿ. ಶಿವುಗೆ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ’ ಎಂದು ಕೇಳುವ ಮೂಲಕ ಈ  “ಟ್ವೀಟ್‌ ವಾರ್‌’ಗೆ ಗುರುವಾರ ಮಾಜಿ ಸಿಎಂ ಕುಮಾರಸ್ವಾಮಿ ಮುನ್ನುಡಿ ಬರೆದರು. ಇದು ಅಪ್‌ಲೋಡ್‌ ಆದ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್‌, “ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು. ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ಧನೂ ಅಲ್ಲ ಬ್ರದರ್‌ ಸ್ವಾಮಿ’ ಎಂದು ಕಾಲೆಳೆದಿದೆ.

ಕಾರ್ಖಾನೆಯ ಮೂಲ ಮಾಲಕ:

ಎಸ್‌ಐಟಿ ಅಧಿಕಾರಿಗಳಿಗೆ ಸಿ.ಡಿ. ಶಿವುವನ್ನು ಹಿಡಿದು ಡ್ರಿಲ್‌ ಮಾಡಿದರೆ, ಸತ್ಯ ಹೊರಗೆ ಬರುತ್ತದೆ. ಶಿವಕುಮಾರ್‌ ಇನ್‌ವೆಸ್ಟಿಗೇಷನ್‌ ಟೀಮ್‌ಗೆ ಗೊತ್ತಿಲ್ಲವೆಂದರೆ ಅದು ಶತಮಾನದ ಜೋಕ್‌ ಅಷ್ಟೇ. ಅಲ್ಲದೆ, ಸಿ.ಡಿ. ಶಿವು ಪೂರ್ವಾಶ್ರಮಕ್ಕೆ ಮಾಡಿದ ಘೋರ ಅಪಚಾರ. ಈ ಶತಮಾನ ಕಂಡು ಕೇಳರಿಯದ ಸೋಜಿಗ. ಪೆನ್‌ಡ್ರೈವ್‌ ಕಾರ್ಖಾನೆಯ ಮೂಲ ಮಾಲಕ, ಸಿ.ಡಿ. ಸಂಚುಕೋರ ಸಿ.ಡಿ. ಶಿವು ಕಣ್ಸನ್ನೆಯಂತೆ ಅವರ ಚೇಲಾಗಳು ನಡೆಸಿದ ಪೆನ್‌ಡ್ರೈವ್‌ ಸಮಾರಾಧನೆ ಯಾರಿಗೆ ಗೊತ್ತಿಲ್ಲ ಹೇಳಿ? ಎಫ್ಐಆರ್‌ ಆದ ಮೇಲೆ ಕಾಲ್ಕಿತ್ತ ಪೆನ್‌ಡ್ರೈವ್‌ ಪಿಶಾಚಿಗಳು; ಕೋರ್ಟ್‌ ಜಾಮೀನು ನಿರಾಕರಿಸಿದ ಮೇಲೆಯೂ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಸಿ.ಡಿ. ಶಿವು ಆಸ್ಥಾನದಲ್ಲಿ ಓಲಾಡುತ್ತಿರುವುದು ಯಾರಿಗೆ ಗೊತ್ತಿಲ್ಲ, ಹೇಳಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸಿ.ಡಿ. ಜನಕ ಬ್ರದರ್‌ ಸ್ವಾಮಿ!:

Advertisement

ತಮ್ಮ ಕುಟುಂಬದ ಸದಸ್ಯನೊಬ್ಬ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಇಲ್ಲದಿರುವಷ್ಟು ಅಮಾಯಕನೂ ಅಲ್ಲ, ಮುಗ್ಧನೂ ಅಲ್ಲ ಬ್ರದರ್‌ ಸ್ವಾಮಿ! ಗೆಜ್ಜೆ ಶಬ್ದ ಕಂಡರೆ ಕಳ್ಳ ಹೆಜ್ಜೆ ಇಡುವ ಮಾನಗೇಡಿಗಳು ತಾವು ಕೊಳಕು ತಿಂದು ಇತರರ ಬಾಯಿಗೆ ಒರೆಸಲು ಬರುತ್ತಿರುವುದು ಮೂರನ್ನೂ ಬಿಟ್ಟಿರುವ ನಿರ್ಲಜ್ಜತನದ ಪರಮಾವಧಿ. ಪೆನ್‌ಡ್ರೈವ್‌ ಬಿಡುತ್ತೇನೆ, ಬಿಡುತ್ತೇನೆ ಎಂದು ಒಂದು ವರ್ಷದಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿಯ ದೇವರಾಜೇಗೌಡನ ಜತೆ ರಹಸ್ಯ ಒಪ್ಪಂದ ಮಾಡಿಕೊಂಡು ಅಖಿಲ ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದು ಇದೇ ಬ್ರದರ್‌ ಸ್ವಾಮಿಯಲ್ಲವೇ? ಪೂರ್ವಾಶ್ರಮದ ಸಿನೆಮಾ ಹಂಚಿಕೆಯ ವೃತ್ತಿ ಇದರಲ್ಲೂ ಸಹಾಯಕ್ಕೆ ಬಂದಿರಬಹುದು ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next