Advertisement
ಚಾತುರ್ಮಾಸ್ಯವಾದುದರಿಂದ ನಮಗೆ ಪ್ರತ್ಯಕ್ಷವಾಗಿ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಚಾತುರ್ಮಾಸ್ಯವಾದ ಕೂಡಲೇ ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಿ ಪರಿಹಾರದ ಕಾರ್ಯಸ್ವರೂಪವನ್ನು ನಿರ್ಧರಿಸಿ ಜನತೆಯ ವಿಶೇಷ ಸಹಾಯದ ಜತೆಗೆ ಮಠದ ಟ್ರಸ್ಟ್‌ನಿಂದ ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುತ್ತೇವೆ. ದೀನ ದುಃಖೀತರ ಸೇವೆಯು ಭಗವಂತನ ಪರಮಾರಾಧನೆಯೆಂಬ ಭಾಗವತದ ಮಾತಿನಂತೆ ಮಹಾ ಜನತೆ ಈ ಪವಿತ್ರ ಕಾರ್ಯದಲ್ಲಿ ತಮ್ಮಿಂದ ಸಾಧ್ಯವಾದ ಸಹಾಯವನ್ನು ಮಾಡಬೇಕಾಗಿ ಅಪೇಕ್ಷಿಸುವುದಾಗಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಬೆಳ್ತಂಗಡಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ, ಆಸ್ತಿ ನಷ್ಟ, ಜೀವಹಾನಿ ಕುರಿತಂತೆ ವೇದನೆ ವ್ಯಕ್ತಪಡಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಂತ್ರಸ್ತರ ನೆಮ್ಮದಿಗಾಗಿ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿರುವ ಜತೆಗೆ, ಸಮಸ್ಯೆಗಳ ಪ್ರತ್ಯಕ್ಷ ಪರಿಶೀಲನೆಗಾಗಿ ತಜ್ಞರ ತಂಡವೊಂದನ್ನು ಕಳುಹಿಸಿ ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಮಾರು 400ಕ್ಕೂ ಮಿಕ್ಕಿದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು, ಪರಿಸ್ಥಿತಿಯ ವಿವರಣೆಗಳನ್ನು ಹೆಗ್ಗಡೆಯವರು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ದೀರ್ಘಾವಧಿ ಪುನರ್ ನಿರ್ಮಾಣ ಕಾಮಗಾರಿಯ ಕುರಿತು ಮಾಹಿತಿ ಪಡೆದುಕೊಂಡ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಬೇಕಾದ ನೆರವು ಮತ್ತು ಗಾತ್ರದ ಕುರಿತು ತೀರ್ಮಾನ ಕೈಗೊಳ್ಳಲಾಗುವುದಾಗಿ ಡಾ| ಹೆಗ್ಗಡೆಯವರು ತಿಳಿಸಿರುತ್ತಾರೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.