ವಿಜಯಪುರ: ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ (Rahul Gandhi) ಸದನದಲ್ಲಿ ಮಾತನಾಡಿರುವುದಕ್ಕೆ ಪೇಜಾವರ ವಿಶ್ವಪ್ರಸನ್ನ ಶ್ರೀಪಾದರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಹಿಷ್ಣುಗಳನ್ನು ಕೆಣಕುವುದು, ಕೆದಕುವುದು, ಕೆಡಹುವುದು ಕೆಲವರ ಚಾಳಿಯಾಗಿದೆ ಎಂದು ಕುಟುಕಿದ್ದಾರೆ.
ಗುರುವಾರ ನಗರದ ಶ್ರೀಕೃಷ್ಣ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಹಿಷ್ಣುಗಳನ್ನೂ ಕೆಣಕಬೇಕು ಹಾಗೆ ಕೆಣಕಿ ಒಂದಿಷ್ಟು ಗೊಂದಲ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂಬ ಮನಸ್ಥಿತಿ ಕೆಲವರಿಗೆ ಇರುತ್ತದೆ ಎಂದರು.
ಪಂಗಡ, ಪಂಗಡಗಳಾಗಿ ಸಮಾಜ ಒಡೆಯುವುದು. ಅಲ್ಲಿ ಬೆಂಕಿ ಹಚ್ಚುವುದು ಏನು ಕಷ್ಟದ ಕೆಲಸ ಅಲ್ಲ. ಈಗ ಮಣಿಪುರದಲ್ಲಿ ಆಗಿರುವುದೂ ಅದೇ. ಅಲ್ಲಿ ಹಚ್ಚಿದ ಬೆಂಕಿ ಈಗಲೂ ತಣಿಸಲು ಸಾಧ್ಯವಾಗಿಲ್ಲ. ಹಾಗಿರುವಾಗ ರಾಜಕೀಯ ನಾಯಕರು ಮುಖಂಡರು ಇಂತಹ ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆಂದರೆ ಏನು ಹೇಳಬೇಕು. ಸಮಾಜ ಅಂತಹವರನ್ನು ಮೊದಲು ದೂರ ಇಡಬೇಕು ಎಂದು ಹರಿಹಾಯ್ದರು.
ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಹಿನ್ನಡೆ ಆಗಿದೆ. ನಮ್ಮಲ್ಲಿ ಬಡತನ ಇನ್ನು ಇದೆ, ದುಡ್ಡು ಕೊಡುತ್ತೇವೆಂದರೆ ಆಗದು. ಇಂತಹ ಸೋಲು, ಮೋಸದ ಸೋಲು ಸಹಜ. ಹಾಗಾಗಿ ಅವರ ಮೇಲಿನ, ಅವರ ಪ್ರಭಾವದ ಕಾಲದ ಮೇಲೆ ಕಡಿಮೆ ಆಗಲಿಲ್ಲ ಎಂಬುದು ಗಮನೀಯ ಎಂದರು.
ದುಡ್ಡಿನ ವ್ಯಾಮೋಹ, ಮೋಸದ ಕೆಲಸ ಅದು ಹೆಚ್ವು ಕೆಲಸ ಮಾಡಿತೋ ಎಂಬುದನ್ನು ತೀರ್ಮಾನಿಸುವುದು ಕಷ್ಟ ಎಂದರು.
ಸ್ವಪಕ್ಷೀಯರೇ ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಕಾರಣ ಎಂಬ ಆರೋಪ ಸತ್ಯ ಇರಬಹುದು, ನಾವು ಅದರ ಬಗ್ಗೆ ಹೆಚ್ಚು ತಲೆ ಹಾಕಲ್ಲ, ನಾವು ಸಮಾಜದ ಒಳ್ಳೆಯ ಕೆಲಸ ಮಾಡುವವರು ಎಂದರು.