Advertisement

ದೇಶಭಕ್ತಿ ಜಾಗೃತಿಗಾಗಿ ಯಕ್ಷಗಾನ ಪ್ರಸ್ತುತಿ: ಪೇಜಾವರ ಶ್ರೀ

12:12 AM Jan 15, 2023 | Team Udayavani |

ಉಡುಪಿ : ಭವ್ಯ ಪರಂಪರೆಯನ್ನು ಒಳಗೊಂಡ ಭಾರತ ದೇಶದ ಸಂಸ್ಕೃತಿಯನ್ನು ಜೀವಂತಗೊಳಿಸುವುದಕ್ಕೆ ಸಮರ್ಥ ಮಾಧ್ಯಮವಾದ ಯಕ್ಷಗಾನದ ಮೂಲಕ ದೈವಭಕ್ತಿ, ದೇಶಭಕ್ತಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ರಚಿಸಲಾದ “ಕಾಶ್ಮೀರ ವಿಜಯ’ ಪ್ರಸಂಗ ಯಶಸ್ವಿಯಾಗಲಿ ಎಂದು ಸುಶಾಸನ ಸಮಿತಿ ಗೌರವಾಧ್ಯಕ್ಷರು, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

Advertisement

ಸುಶಾಸನ ಸಮಿತಿ ರಾಷ್ಟ್ರಕಲಾ ತಂಡದ ಪ್ರಾಯೋಜಕತ್ವದಲ್ಲಿ, ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪ-ಸಂಯೋಜನೆಯ “ಕಾಶ್ಮೀರ ವಿಜಯ’ ಪ್ರಸಂಗದ ಕೃತಿಯನ್ನು ಅಂಬಾಗಿಲಿನ ಅಮೃತ್‌ ಗಾರ್ಡನ್‌ನಲ್ಲಿ ಶನಿವಾರ ಶ್ರೀಪಾದರು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

ಕುಂಕುಮ ಬೆಳೆಯುವ ಭೂಮಿ ಯಾದ ಕಾಶ್ಮೀರ ಭಾರತಮಾತೆಯ ಹಣೆಯ ಕುಂಕುಮ. ಕುಂಕುಮದಂತೆ ರಂಜಿತವಾಗಿರಬೇಕಾದ ಕ್ಷೇತ್ರ ರಕ್ತ ದೋಕುಳಿಯಿಂದ ಕೆಂಪಾಗಿ ಹೋಯಿತು. ಕಾಲ ಇದ್ದಂತೆಯೇ ಇರುವುದಿಲ್ಲ. ಕಾಶ್ಮೀರದ ವೈಭವ ಮತ್ತೆ ಮರುಕಳಿಸಬೇಕೆನ್ನುವ ಹೆಬ್ಬಯಕೆಯಿಂದ ಸುಶಾಸನ ಸಮಿತಿ ಕಾರ್ಯ ಪ್ರವೃತ್ತವಾಗಿದೆ. ಈ ಕೃತಿಯು ತಾಳಮದ್ದಳೆಯ ಮೂಲಕ ಸಮಾಜದಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲಿ ಎಂದು ಶ್ರೀಪಾದರು ಹಾರೈಸಿದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ದ್ವಂದ್ವ ನಿಲುವನ್ನು ಹೊಂದಿದ್ದ ಭಾರತದ ಮುಕುಟ ಪ್ರಾಯವಾದ ಕಾಶ್ಮೀರದ ಸಮಸ್ಯೆಗೆ ತಾರ್ಕಿಕ ನ್ಯಾಯ ಒದಗಿಸಿದವರು ಮೋದಿಯವರು. ಅಂತಹ ಕಾಶ್ಮೀರದ ವೈಭವವನ್ನು ಸಾರುವ ಈ ಪ್ರಸಂಗದ ತಾಳಮದ್ದಳೆ ಉಡುಪಿಯಲ್ಲಿ ನಡೆ ಯುತ್ತಿರುವುದು ವಿಶೇಷ. ಈ ಪ್ರಸಂಗವು ದೇಶವ್ಯಾಪಿಯಾಗಿ ವಿವಿಧ ಭಾಷೆಗಳಲ್ಲಿ ಮೂಡಿಬರಲಿ ಎಂದು ಹಾರೈಸಿದರು.

ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಉದ್ಯಮಿಗಳಾದ ಗುರ್ಮೆ ಸುರೇಶ್‌ ಶೆಟ್ಟಿ, ಪ್ರದೀಪ್‌ ಕುಮಾರ್‌ ಕಲ್ಕೂರ ಶುಭಾಶಂಸನೆಗೈದರು.

Advertisement

ಉಜ್ವಲ್‌ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಟಿ. ಶಂಭು ಶೆಟ್ಟಿ, ಪ್ರೊ| ಎಂ.ಎಲ್‌. ಸಾಮಗ, ಕಿದಿಯೂರು ಉದಯ ಕುಮಾರ್‌ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ, ಸತ್ರಾಜಿತ ಭಾರ್ಗವ, ಡಾ| ದಿವ್ಯಾ, ಸುಸಾಸನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ಸ್ವಾಗತಿಸಿ, ನಿರೂಪಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ಪಟ್ಲ ಸತೀಶ್‌ ಶೆಟ್ಟಿಯವರ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಕಾಶ್ಮೀರ ವಿಜಯ’ ತಾಳಮದ್ದಳೆ ಸಂಪನ್ನಗೊಂಡಿತು.

ಪ್ರಶಸ್ತಿ ಪ್ರದಾನ
ಮುಂಬಯಿ ಸಂಜೀವಿನಿ ಆಸ್ಪತ್ರೆಯ ಸೀನಿಯರ್‌ ಜನರಲ್‌ ಸರ್ಜನ್‌, ವೈದ್ಯಕೀಯ ನಿರ್ದೇಶಕ ಡಾ| ಸುರೇಶ್‌ ಎಸ್‌. ರಾವ್‌, ಕೈಗಾರಿಕೋದ್ಯಮಿ, ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇಗುಲದ ಧರ್ಮದರ್ಶಿ ದೇವರಾಯ ಎಂ. ಶೇರಿಗಾರ್‌, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ತುಳುನಾಡ “ಸುಶಾಸನ ಅಮೃತ ಭಾರತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸಂಗಕರ್ತ ಪ್ರೊ| ಪವನ್‌ ಕಿರಣಕೆರೆ ಅವರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next