ಆನೇಕಲ್: ಸಮಾಜದಲ್ಲಿನ ಜಾತಿ, ಧರ್ಮ, ಪಂಥಗಳ ನಡುವೆ ಐಕ್ಯತೆ, ಸಾಮರಸ್ಯ ಮೂಡಿಸುವಲ್ಲಿ ಪುರದಂರದಾಸರ ಸಾಹಿತ್ಯ, ಸಂಗೀತ ಅಪಾರ ಕೊಡುಗೆಯನ್ನೇ ನೀಡಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕೊಪ್ಪಗೇಟ್ ಬಳಿಯ ನಿಸರ್ಗ ಬಡಾವಣೆಯಲ್ಲಿ ನಿರ್ಮಾಣ್ ಶೆಲ್ಟರ್, ಎಲೆನ್-ನಿರ್ಮಾಣ್ ಪುರಂದರ ಪ್ರತಿಷ್ಠಾನದ ವತಿಯಿಂದ ನಡೆದ ಶ್ರೀ ಪುರದಂರದಾಸರ ಅರಾಧನಾ ಮಹೋತ್ಸವದಲ್ಲಿ 2019ನೇ ಸಾಲಿನ ನಿರ್ಮಾಣ್-ಪುರಂದರ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ಸಾಮಾಜಿಕ ಜಾಗೃತಿ: ಪುರದಂರದಾಸರು ತಮ್ಮ ಕೀರ್ತನೆಗಳಲ್ಲಿ ಅಧ್ಯತ್ಮಿಕತೆ, ತಂತ್ರಜ್ಞಾನ, ಸಾಮಾಜಿಕ ಜಾಗೃತಿಯಂತಹ ಹಲವು ವಿಚಾರಗಳನ್ನು ಸಮಾಜಕ್ಕೆ ನೀಡಿ ಕನ್ನಡ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು
ಹೇಳಿದರು.
ಸೌಹರ್ದಯುತ ಬದುಕು: ದಾಸ ಸಾಹಿತ್ಯ, ಸಂಗೀತ ಇಂದಿಗೂ ಜನ ಸಾಮಾನ್ಯರು ಮೈಗೂಡಿಸಿ ಕೊಂಡಿರುವುದರಿಂದಲೇ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಎಲ್ಲರೂ ಸೌಹರ್ದಯುತವಾಗಿ ಬದುಕು ನಡೆಸುವಂತಾಗಿದೆ ಎಂದರು.
ಗಾನಸುಧೆ ಮೂಲಕ ಏಕತೆ: ಸಂಗೀತ ಕ್ಷೇತ್ರದಲ್ಲಿ ಎಲ್ಲಾ ಜಾತಿ, ಧರ್ಮದವರು ಸಹ ತಮ್ಮನ್ನು ತೊಡಗಿಸಿಕೊಂಡು ಅವರವರ ಪ್ರತಿಭೆಗಳನ್ನು ಮೆರೆಯುವುದರ ಜೊತೆಗೆ ಧರ್ಮ, ಧರ್ಮಗಳ ಮಧ್ಯೆ, ಜಾತಿ, ಜಾತಿಗಳ ಮಧ್ಯೆ ಏಕತೆ ಮೂಡುವಂತೆ ತಮ್ಮ ಗಾನಸುಧೆಯನ್ನು ಮೆರೆದಿದ್ದಾರೆಂದು ಹೇಳಿದರು. ಸದ್ಯ ರಾಷ್ಟ್ರ ಸಂಕಷ್ಟದ ಸ್ಥಿತಿಯಲ್ಲಿದ್ದರೂ ಶತ್ರುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇದೆ. ಮುಂದೆ ಎಲ್ಲವೂ ಸುಗಮವಾಗಿ ನಡೆಯಲಿ ಎಂದು ಹಾರೈಸಿದ ಸ್ವಾಮೀಜಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಪ್ರತಿ ವರ್ಷ ಪ್ರಶಸ್ತಿ: ನಿರ್ಮಾಣ್ ಶೆಲ್ಟರ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಲಕ್ಷ್ಮೀ ನಾರಾಯಣ್ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಖ್ಯಾತನಾಮರಿಗೆ ಸಂಗೀತ ರತ್ನ ಪ್ರಶಸ್ತಿಯನ್ನು ಕಳೆದ 9 ವರ್ಷಗಳಿಂದ ನೀಡಿ ಗೌರವಿಸುತ್ತ ಬಂದಿದ್ದೇವೆ. ಈ ಪರಂಪರೆ ನಾನು ಇರಲಿ, ಇಲ್ಲದಿರಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುವಂತಹ ಯೋಜನೆ ಸಿದ್ಧಮಾಡಿ ಇಟ್ಟಿರುವೆ ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿದ ಪುತ್ತೂರು ನರಸಿಂಹ ನಾಯಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಇಂತಹ ದಿನಗಳಲ್ಲಿ ಯಾರಾದರೂ ಪ್ರಶಸ್ತಿ ನೀಡುತ್ತೇವೆ ಎಂದರೆ ಸಹಜವಾಗಿ ಮುಜುಗರವಾಗುತ್ತದೆ. ಆದರೆ, ನಿರ್ಮಾಣ್ ಶೆಲ್ಟರ್ ಸಮೂಹ ಸಂಸ್ಥೆಗಳ ಈ ಪ್ರಶಸ್ತಿ ನಿಜಕ್ಕೂ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಇದೇ ಸಂದರ್ಭದಲ್ಲಿ
ಕೆ.ಎಚ್.ಎಸ್.ವೆಂಕಟೇಶ್‌ಮೂರ್ತಿ, ಪ್ರೊ. ಅಶ್ವತ್ಥ್ ನಾರಾ ಯಣ್, ಅರಳುಮಲ್ಲಿಗೆ ಪಾರ್ಥಸಾರಥಿ, ವಿದ್ಯಾಭೂಷಣ್ ಮೊದಲಾದವರು ಉಪಸ್ಥಿತರಿದ್ದರು.