Advertisement

ಯಕ್ಷಗಾನ ಆನಂದ ನೀಡುವ ಪವಿತ್ರ ಯಜ್ಞ 

10:23 AM Nov 26, 2018 | |

ಉಡುಪಿ: ಯಕ್ಷಗಾನ ಕೇವಲ ಮನೋರಂಜನೆ ನೀಡುವ ಕಲೆಯಲ್ಲ, ಇದೊಂದು ಎಲ್ಲರಿಗೂ ಆನಂದ ನೀಡುವ ಪವಿತ್ರ ಯಜ್ಞ ಎಂದು ವರ್ಣಿಸಲಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

Advertisement

ಯಕ್ಷಗಾನ ಕಣ್ಣಿನಿಂದ ನೋಡಬಹುದಾದ ಅತ್ಯಂತ ಶಾಂತ ರೀತಿಯ ಯಜ್ಞ. ಎಲ್ಲರಿಗೂ ಒಂದು ಆರಾಧನೆ. ಯಕ್ಷಗಾನ ಕಲೆ ಇಳಿಮುಖವಾಗುತ್ತಿಲ್ಲ, ಬೆಳೆಯುತ್ತಿದೆ. ಕಲಾವಿದರ ಸಮ್ಮಾನ, ಅವರ ಸ್ಮರಣೆ ಕಲಾ ದೇವತೆಯ ಪೂಜೆ. ವಿದ್ಯೆ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಕಲಾರಂಗದ ಕಾರ್ಯ ಮತ್ತಷ್ಟು ಹೆಚ್ಚಲಿ ಎಂದು ಪೇಜಾವರ ಶ್ರೀಗಳು ಹೇಳಿದರು.

ರಾಮಾರಾಧನೆ, ಕಲಾರಾಧನೆ
ಮಂಗಳೂರಿನಲ್ಲಿ ರಾಮಮಂದಿರ ಜನಾಗ್ರಹ ಸಭೆ ಇದ್ದುದರಿಂದ ಕಲಾವಿದರ ಸಮ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದೇ ಎಂಬ ದುಗುಡವಿತ್ತು. ಆದರೆ ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಭಗವಂತ ರಾಮಾರಾಧನೆ ಮತ್ತು ಕಲಾರಾಧನೆ ಎರಡನ್ನೂ ನಡೆಸಿಕೊಟ್ಟ ಎಂದು ಶ್ರೀಗಳು ಹೇಳಿದರು.

ನರಹರಿತೀರ್ಥರ ಸ್ಮರಣೆ ಅಗತ್ಯ
ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರು “ಕಲಾಂತರಂಗ 2018′ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿ, ಯಕ್ಷಗಾನದಷ್ಟು ಕ್ರಿಯಾಶೀಲ ವಾದ ಕಲೆ ಬೇರೊಂದಿಲ್ಲ. ಯಕ್ಷಗಾನವನ್ನು ಉಡುಪಿಯಲ್ಲಿ ಆರಂಭಿಸಿದ ಅದಮಾರು ಮಠದ ಮೂಲ ಯತಿ ಶ್ರೀನರಹರಿತೀರ್ಥರನ್ನು ಯಕ್ಷಗಾನ ಕ್ಷೇತ್ರ ಸದಾ ನೆನಪಿಸಬೇಕಾಗಿದೆ ಎಂದು ಹೇಳಿದರು.

ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಕರ್ಣಾಟಕ ಬ್ಯಾಂಕ್‌ ಮಹಾಪ್ರಬಂಧಕ ಮಹಾಲಿಂಗೇಶ್ವರ ಕೆ., ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಉಡುಪಿಯ ಲೆಕ್ಕಪರಿಶೋಧಕ ಗಣೇಶ್‌ ಬಿ. ಕಾಂಚನ್‌ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್‌ ನಿರ್ವಹಿಸಿದರು. ಎಚ್‌.ಎನ್‌. ವೆಂಕಟೇಶ್‌ ಸಮ್ಮಾನಿತರನ್ನು ಪರಿಚಯಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next