ಮಣಿಪಾಲ: ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಅವರು ಜೀವರಕ್ಷಕ ಸಾಧನಗಳ ಸಹಾಯದಲ್ಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಶುಕ್ರವಾರ ಮಣಿಪಾಲ ಆಸ್ಪತ್ರೆ ಹೆಲ್ತ್ ಬಿಡುಗಡೆ ಮಾಡಿದ್ದು, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣವಾಗಿದೆ. ಪ್ರಜ್ಞೆಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಅವರು ಜೀವರಕ್ಷಕ ಸಾಧನಗಳ ಸಹಾಯದಲ್ಲಿದ್ದಾರೆ ಎಂದಿದೆ.
ಪೇಜಾವರ ಶ್ರೀಗಳಿಗೆ ಶುಕ್ರವಾರ ರಾತ್ರಿ ಎಂಆರ್ ಐ ಸ್ಕ್ಯಾನಿಂಗ್ ಮಾಡಲಾಗಿದೆ. ಇಂದು ಮತ್ತೊಂದು ಎಂಆರ್ ಐ ಸ್ಕ್ಯಾನಿಂಗ್ ಮಾಡಲಿದ್ದು, ಎರಡೂ ವರದಿ ಬಂದ ನಂತರ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.
ಡಿಸೆಂಬರ್ 19ರಂದು ಸ್ವಾಮೀಜಿಯವರು ಜ್ವರದಿಂದ ಬಳಲುತ್ತಿದ್ದರೂ ಎರಡು ಮೂರು ಕಾರ್ಯಕ್ರಮಗಳನ್ನು ಮುಗಿಸಿ ಉಡುಪಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸ್ವಲ್ಪ ಗುಣಮುಖರಾಗಿ ಮಠಕ್ಕೆ ಮರಳಿದ್ದರು. ಆದರೆ ಡಿ.20ರಂದು ಮುಂಜಾನೆ ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.