ಬೆಂಗಳೂರು: ಉಡುಪಿ ಅಷ್ಟಮಠದ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಪಾದರು ರವಿವಾರ ಉಡುಪಿಯಲ್ಲಿ ಹರಿಪಾದ ಸೇರಿದ್ದಾರೆ. ಅವರ ಇಚ್ಛೆಯಂತೆ ಬೆಂಗಳೂರಿನ ಪುರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಬೃಂದಾವನ ಮಾಡಲಾಗಿದೆ.
ಸೋಮವಾರ ಮುಂಜಾನೆಯಿಂದಲೇ ಭಕ್ತಾದಿಗಳು ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಆಗಮಿಸಿ ಶ್ರೀಗಳ ಬೃಂದಾವನಕ್ಕೆ ನಮಸ್ಕರಿಸುತ್ತಿದ್ದಾರೆ.
ಮುಂಜಾನೆಯಿಂದಲೇ ಶಿಷ್ಯವೃಂದದಿಂದ ಬೃಂದಾವನದ ಬಳಿ ಮಂತ್ರ ಪಠಣ ನಡೆಯುತ್ತಿದೆ.
12 ದಿನಗಳ ನಂತರ ಮಠದ ಕಿರಿಯ ಶ್ರೀಪಾದರಾದ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಹಾ ಸಮಾರಾಧನೆಗ ನಡೆಯಲಿದೆ ಎಂದು ವರದಿಯಾಗಿದೆ.
ಬೃಂದಾವನಸ್ಥರಾದ 48 ದಿನಗಳ ನಂತರ ಬೃಂದಾವನದಲ್ಲಿ ಇರಿಸಿರುವ ಸಾಲಿಗ್ರಾಮ ಪಾತ್ರೆ ಸಿಗುವವರೆಗೆ ಮಣ್ಣನ್ನು ಬಿಡಿಸಲಾಗುತ್ತದೆ. ಅಲ್ಲಿಗೆ ನಿತ್ಯಾಭಿಷೇಕ ಮಾಡಲು ನೀರು ತಲುಪುವಂತೆ ನಾಳವೊಂದನ್ನು ಜೋಡಿಸಲಾಗುತ್ತದೆ. ವೃಂದಾವನ ಜಾಗಕ್ಕೆ ಮುಂದೆ ನಿತ್ಯ ಪೂಜೆ ಸಲ್ಲುತ್ತದೆ.