ಉಡುಪಿ : ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥರನ್ನು ಇಂದು ಮುಂಜಾನೆ ಉಡುಪಿ ಮಠಕ್ಕೆ ಕರೆದೊಯ್ಯಲಾಗಿದೆ.
ಮಣಿಪಾಲ ಆಸ್ಪತ್ರೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಶ್ರೀಗಳನ್ನು ಮಠಕ್ಕೆ ಕರೆದುಕೊಂಡು ಹೋಗಲಾಗಿದೆ.
ವೆಂಟಿಲೇಟರ್ ಸಹಿತ ಆಂಬ್ಯುಲೆನ್ಸ್ ನಲ್ಲಿ ಪೇಜಾವರ ಶ್ರೀಗಳನ್ನು ಉಡುಪಿ ಮಠಕ್ಕೆ ಕರೆತರಲಾಗಿದೆ. ಮಠದಲ್ಲಿ ನುರಿತ ವೈದ್ಯರನ್ನು ಒಳಗೊಂಡ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.
ಅನಾರೋಗ್ಯದ ಸಮಸ್ಯೆಯಿಂದ ಡಿ.20ರಂದು ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದ ಹಿನ್ನಲೆಯಲ್ಲಿ ಅವರ ಇಚ್ಛೆಯಂತೆ ಇಂದು ಮುಂಜಾನೆ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಠದ ಸುತ್ತ ಸೇರಿದಂತೆ ಬಿಗು ಭದ್ರತೆ ಒದಗಿಸಲಾಗಿದ್ದು, ಜಿಲ್ಲೆಯ 500 ಸಿಬ್ಬಂದಿ ಮ್ತು 200 ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳ ಮೂಲಕ ಭದ್ರತೆ ಒದಗಿಸಲಾಗಿದೆ.