Advertisement

ಪೇಜಾವರ ಶ್ರೀಗಳಿಗೆ ವಿಪ್ರ ವೇದಿಕೆ ಬೆಂಬಲ

12:17 PM Jul 05, 2017 | Team Udayavani |

ಬೆಂಗಳೂರು: ಪೇಜಾವರ ಶ್ರೀಗಳು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್‌ಕೂಟ್‌ ಆಯೋಜಿಸಿದ್ದನ್ನು ಕರ್ನಾಟಕ ವಿಪ್ರ ವೇದಿಕೆ ಸ್ವಾಗತಿಸಿದ್ದು, ಸ್ವಾಮೀಜಿಯವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಜೆ.ಎಚ್‌.ಅನಿಲ್‌ಕುಮಾರ್‌, ಪೇಜಾವರ ಸ್ವಾಮೀಜಿಗಳು ಕೋಮು ಸಾಮರಸ್ಯದ ಅಂಗವಾಗಿ “ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ’ ಉದ್ದೇಶದಿಂದ ಮುಸ್ಲಿಂ ಸಮುದಾಯದವರಿಗೆ ಇಫ್ತಾರ್‌ ಔತಣಕೂಟ ಏರ್ಪಡಿಸಿದ್ದರು.

ಇದನ್ನು ವಿರೋಧಿಸಲು ಯಾವ ಸಕಾರಣವೂ ಗೋಚರಿಸುತ್ತಿಲ್ಲ. ಆದರೆ ಸ್ವಾಮೀಜಿಗಳನ್ನು ಹೀನಾಮಾನ ನಿಂದಿಸಿ ಅವರ ವಯಸ್ಸು, ಸಾಧನೆ ಗಮನಿಸದೆ ಅಗೌರವ ತೋರಿ ಮಾತನಾಡುವುದನ್ನು ಕರ್ನಾಟಕ ವಿಪ್ರವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ದಿನೇಶ್‌ ಅಮಿನ್‌ಮಟ್ಟು ಅವರು, ಪೇಜಾವರ ಸ್ವಾಮೀಜಿಗಳು ಇಫ್ತಾರ್‌ಕೂಟ ಆಯೋಜಿಸಿರುವುದನ್ನು ಸೋಗಲಾಡಿತನ ಎಂದು ಕರೆದಿರುವುದು ಖಂಡನೀಯ. ಹಾಗೆಯೇ ಸರ್ಕಾರದ ಖಜಾನೆಯಿಂದ ಕೋಟ್ಯಂತರ ರೂ.ಗಳನ್ನು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್‌ಕೂಟ ನಡೆಸಲು ಮುಖ್ಯಮಂತ್ರಿಗಳು ಕೊಟ್ಟಿರುವುದಕ್ಕೆ ಏನೆಂದು ಹೇಳಬೇಕೆಂದು ಪ್ರಶ್ನಿಸಿದರು.

ಸ್ವಾಮೀಜಿಗಳು ಈ ವಯಸ್ಸಿನಲ್ಲಿ ಸೋಗಲಾಡಿತನ ಪ್ರದರ್ಶಿಸಿ ಅವರಿಗೆ ಆಗಬೇಕಾಗಿದ್ದೇನೂ ಇಲ್ಲ ಎಂಬುದನ್ನು ಅಮಿನ್‌ಮಟ್ಟು ಅರ್ಥ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು. ಶ್ರೀರಾಮಸೇನೆಯ ಪ್ರಮೋದ್‌ ಮುತಾಲಿಕ್‌ ಅವರಾಗಲೀ ಅಥವಾ ಬುದ್ಧಿಜೀವಿಗಳು ಎನ್ನಿಸಿಕೊಂಡವರಿಗಾಗಲೀ ಸ್ವಾಮೀಜಿಗಳನ್ನು ಟೀಕಿಸುವ ಯಾವ ನೈತಿಕ ಹಕ್ಕೂ ಇಲ್ಲ.

Advertisement

ಅವರು ಪ್ರತಿಪಾದಿಸುವಂತೆ ಮುಸ್ಲಿಂ ಬಂಧುಗಳು ಗೋಮಾಂಸ ತಿನ್ನುತ್ತಾರೆ ಎನ್ನುವುದಾದರೆ, ಇತ್ತೀಚೆಗೆ ಬುದ್ಧಿಜೀವಿ ಎನ್ನಿಸಿಕೊಂಡ ಭಗವಾನ್‌ ಮತ್ತಿತರರು ಬಹಿರಂಗವಾಗಿ ತಿಂದದ್ದು ಏನನ್ನು ಎಂದು ಪ್ರಶ್ನಿಸಿದರು. ಉಡುಪಿಯಲ್ಲಿ ಇಫ್ತಾರ್‌ಕೂಟ ಆಯೋಜಿಸಿ, ಮಠದಲ್ಲಿ ಪ್ರಾರ್ಥನೆ ಸಲ್ಲಿಸಲು ಸ್ವಾಮೀಜಿ ಅನುವು ಮಾಡಿಕೊಟ್ಟಿದ್ದರಲ್ಲಿ ಯಾವುದೇ ಪ್ರಮಾದವಿಲ್ಲ.

ಅದು ಸ್ವಾಗತಾರ್ಹ ಕ್ರಮವಾಗಿದ್ದು, ಸ್ವಾಮೀಜಿಗಳ ಪರಧರ್ಮ ಸಹಿಷ್ಣುತೆಗೆ ವಿಪ್ರ ವೇದಿಕೆ ಬೆಂಬಲಿಸುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಪ್ರ ವೇದಿಕೆ ಉಪಾಧ್ಯಕ್ಷ ಎಚ್‌.ಎಲ್‌.ರಾಮಕೃಷ್ಣ, ಮಧುಸೂಧನ್‌ ಇದ್ದರು. 

ಉದ್ಯೋಗ ಮೇಳ ಆಯೋಜನೆ 
ಕರ್ನಾಟಕ ವಿಪ್ರ ವೇದಿಕೆ ವತಿಯಿಂದ ಸೆ.22-23ರಂದು ವಿಪ್ರ ಸಮಾವೇಶ ಮತ್ತು ಉದ್ಯೋಗ ಮೇಳ ಆಯೋಜಿಸಲಾಗುವುದು. ಉನ್ನತ ಶಿಕ್ಷಣದಲ್ಲಿ ಕಡಿಮೆ ಅಂಕ ಗಳಿಸಿದವರಿಗೂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಮೇಳ ನೆರವಾಗಲಿದೆ. ಇದರ ಸದುಪಯೋಗ ಪಡೆಯಬೇಕು ಎಂದು ವೇದಿಕೆ ಮುಖಂಡ ಮಧುಸೂದನ್‌ ತಿಳಿಸಿದರು.

ಮುತಾಲಿಕ್‌ ಪ್ರಚೋದನಕಾರಿ ಭಾಷಣ ಮಾಡಿಲ್ಲ: ಸ್ಪಷ್ಟನೆ
ಬೆಂಗಳೂರು: ಉಡುಪಿ ಶ್ರೀ ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್‌ ಕೂಟ ಆಯೋಜಿಸಿದ್ದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಮೋದ್‌ ಮುತಾಲಿಕ್‌ ಅವರು ಪ್ರಚೋದನಕಾರಿ ಭಾಷಣ ಮಾಡಿಲ್ಲ ಎಂದು ಶ್ರೀರಾಮಸೇನೆ ತಿಳಿಸಿದೆ.

ಪ್ರತಿಭಟನೆ ವೇಳೆ ಮುತಾಲಿಕ್‌ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, “ತಮ್ಮ ರಕ್ತವನ್ನು ಚೆಲ್ಲಿಯಾದರೂ ಸರಿ…’ ಎಂದು ಹೇಳಿದ್ದಾರೆಯೇ ಹೊರತು, “ಬೇರೆಯವರ ರಕ್ತ ಚೆಲ್ಲಿ’ ಎಂದು ಉದ್ರೇಕಕಾರಿ ಭಾಷಣ ಮಾಡಿಲ್ಲ.

ಈ ಸಂಬಂಧ ಪ್ರಮೋದ್‌ ಮುತಾಲಿಕ್‌ ಅವರ ಮೇಲೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯ ಅಧಿಕಾರಿಗಳು ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ರಾಜ್ಯ ಗೃಹ ಸಚಿವರು  ಮಧ್ಯಪ್ರವೇಶಿಸಿ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಶ್ರೀರಾಮಸೇನೆ ವಕ್ತಾರ ಎಂ.ಎಸ್‌. ಹರೀಶ್‌ ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next