Advertisement

ಶಿಶಿಲದಲ್ಲಿ ಕಾಲೇಜು ಸೌಲಭ್ಯ ಕಲ್ಪಿಸಲು ಸೂಚನೆ

01:53 AM Feb 21, 2021 | Team Udayavani |

ಬೆಳ್ತಂಗಡಿ/ಪಲಿಮಾರು: ಗ್ರಾಮ ವಾಸ್ತವ್ಯ ಕಾರ್ಯಕ್ರಮದಡಿ ದ.ಕ. ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು ಬೆಳ್ತಂಗಡಿಯ ಶಿಶಿಲಕ್ಕೆ ಮತ್ತು ಉಡುಪಿ ಡಿ.ಸಿ. ಜಿ. ಜಗದೀಶ್‌ ಕಾಪು ತಾಲೂಕಿನ ಪಲಿಮಾರಿಗೆ ಭೇಟಿ ನೀಡಿದರು.

Advertisement

ಶಿಶಿಲದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಜಿಲ್ಲಾಧಿಕಾರಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿದರು. ಕೋಟೆಬಾಗಿಲು ಬಳಿ ಒತ್ತುವರಿಯಾಗಿದ್ದ 15 ಎಕ್ರೆ ಜಮೀನು ಅಳತೆ ಮಾಡಲಾಗಿದ್ದು, ಗೋಮಾಳ ಜಮೀನಿಗೆ ಮೀಸಲಿರಿಸಲು ಸೂಚಿಸಿದರು. ಹೇವಾಜೆ ಶಾಲೆ ಆಟದ ಮೈದಾನಕ್ಕೆ ಸ್ಥಳ ನಿಗದಿ, ಆಶ್ರಮ ಶಾಲೆಗೆ ಜಮೀನು, ಶಿಶಿಲ ಅಂಗನವಾಡಿಗೆ ಜಾಗ ಮಂಜೂರು ಮಾಡಲಾಯಿತು. ಆಶ್ರಮ ಶಾಲೆ, ಅಂಗನವಾಡಿ, ಶಿಶಿಲೇಶ್ವರ ದೇವಸ್ಥಾನ, ಕೊಳಕ್ಕೆಬೈಲು ಪ. ಜಾತಿ ಕಾಲನಿ ರಸ್ತೆಗೆ ಭೇಟಿ ನೀಡಿದರು. ನಾಗನಡ್ಕ ಬಳಿ ಎಸೆಸೆಲ್ಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಆಲಿಸಿದರು. ರಾತ್ರಿ ವಾಸ್ತವ್ಯ ಹೂಡದೆ ಹಿಂದಿರುಗಿದ್ದು ನಿರಾಶೆ ಮೂಡಿಸಿತು.

ಉಡುಪಿ ಜಿಲ್ಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರವಾಸ ನಡೆಸಿದ್ದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಸಂಜೆ 5ರ ಬಳಿಕ ಪಲಿಮಾರು ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮದ ನಿವೇಶನ ಹಂಚಿಕೆಗಾಗಿ ಗುರುತಿಸಲ್ಪಟ್ಟ ಅರಂತಡೆ-ಆನಡ್ಕ ಭೂಮಿಯನ್ನು ಪರಿಶೀಲಿಸಿದರು. ಪಲಿಮಾರು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಕಾಲುವೆಯ ಹೂಳೆತ್ತಲು ಸೂಚಿಸಿದರು. ಎಸೆಸೆಲ್ಸಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ವಾಸ್ತವ್ಯ ನಡೆಸಿದರು.

ಉದಯವಾಣಿ ವರದಿಗೆ ಸ್ಪಂದನೆ
ಶಿಶಿಲಕ್ಕೆ ಡಿಸಿ ಭೇಟಿ ಹಿನ್ನೆಲೆಯಲ್ಲಿ “ಉದಯ ವಾಣಿ’ ಸುದಿನ ಸಂಚಿಕೆಯು ಜನರ ಅಗತ್ಯಗಳನ್ನು ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಡಿಸಿ, ಅರಶಿನಮಕ್ಕಿ ಪಿಯು ಕಾಲೇಜನ್ನು ಮೇಲ್ದರ್ಜೆಗೇರಿಸಲು ಅಧಿ ಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯಾದ್ಯಂತ ಆರಂಭ
ಬೆಂಗಳೂರು : ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾದ “ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ಸಿಕ್ಕಿತು. ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಚಾಲನೆ ನೀಡಿದರು. ರಾಜ್ಯದ 227 ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರ ಸಹಿತ ಅಧಿಕಾರಿಗಳು ಗ್ರಾಮ ವಾಸ್ತವ್ಯ ಆರಂಭಿಸಿದರು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next