ನವ ದೆಹಲಿ : ಪೆಗಾಸಸ್ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ವಿವಾದ ಹುಟ್ಟುಹಾಕಿರುವ ಇಸ್ರೇಲಿ ಮೂಲದ ಪೆಗಾಸಸ್ ಸ್ಪೈವೇರ್ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಇಸ್ರೇಲ್ ಅಂತರ್ ಸಚಿವಾಲಯಗಳ ಸಮಿತಿಯೊಂದನ್ನು ರಚಿಸಿದ ಬೆನ್ನಿಗೆ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್ ವಿಚಾರ ಮಂಡನೆ ಮಾಡಲಿದ್ದಾರೆ.
ಸೋಮವಾರ ನಡೆದ ಸಂಸತ್ ಅಧಿವೇಶನದ ಕಲಾಪದಲ್ಲಿ ವೈಷ್ಣವ್, ಪೆಗಾಸಸ್ ಆಧಾರ ರಹಿತ ಚರ್ಚೆ ಎಂದು ಹೇಳಿದ್ದರು. ಈಗ ಪೆಗಾಸಸ್ ಸ್ಪೈವೇರ್ ಕುರಿತಾಗಿ ತನಿಖೆಗೆ ಸಮಿತಿ ರಚನೆಯಾದ ಹಿನ್ನೆಲೆಯಲ್ಲಿ ವಿಸ್ತೃತ ವಿಚಾರ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಕೋವಿಡ್ 19 ಮಹಾಮಾರಿಗೆ ಜಾಗತಿಕವಾಗಿ 15 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಷಕರಿಲ್ಲ!
ಮುಂಗಾರು ಅಧಿವೇಶನ ಆರಂಭವಾಗುವ ಮುನ್ನಾ ದಿನ ಈ ಪೆಗಾಸಸ್ ವಿಚಾರ ಬೆಳಕಿಗೆ ಬಂದಿದ್ದು, ರಾಜಕೀಯ ಪ್ರಮುಖ ನಾಯಕರ, ಪತ್ರಕರ್ತರ, ಹಾಗೂ ಪ್ರಭಾವಿ ವ್ಯಕ್ತಿಗಳ ಫೋನ್ ನಂಬರ್ ಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ.
ಇನ್ನು, ಇಸ್ರೇಲಿ ಮೂಲದ ಪೆಗಾಸಸ್ ಸ್ಪೈವೇರ್ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಇಸ್ರೇಲ್ ಅಂತರ್ ಸಚಿವಾಲಯಗಳ ಸಮಿತಿಯೊಂದನ್ನು ರಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಉತ್ತರದಾಯಿಯಾಗಿರುವ ರಾಷ್ಟ್ರೀಯ ಭದ್ರತ ಮಂಡಳಿ ಈ ಸಮಿತಿಯ ನೇತೃತ್ವ ವಹಿಸಿದೆ ಎಂದು ವರದಿಯಾಗಿದೆ
ಅಲ್ಲಿನ ರಕ್ಷಣ ಸಚಿವಾಲಯಕ್ಕಿಂತ ಹೆಚ್ಚು ಪರಿಣತಿ ಹೊಂದಿರುವ ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎನ್ನಲಾಗಿದ್ದು, ಪೆಗಾಸಸ್ ಸ್ಪೈವೇರ್ ಸೃಷ್ಟಿಸಿರುವ ಎನ್ ಎಸ್ ಒ ಸಂಸ್ಥೆ ರಕ್ಷಣ ಸಚಿವಾಲಯದ ಅಧೀನದಲ್ಲಿದೆ.
ಭಾರತ ಮಾತ್ರವಲ್ಲದೆ, ಮೆಕ್ಸಿಕೊ, ಫ್ರಾನ್ಸ್, ಇರಾಕ್, ಮೊರಾಕ್ಕೊಗಳಲ್ಲಿಯೂ ಪೆಗಾಸಸ್ ವಿವಾದದ ಕಿಡಿ ಹೊತ್ತಿಸಿದ್ದು, ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಬಹುದು ಎಂಬ ಹಿನ್ನೆಲೆ ಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ತಲೆಮಾರುಗಳಿಂದ ನಡೆಯುತ್ತಿರುವ PINE APPLE ಕೃಷಿಯ ಯಶಸ್ಸಿನ ರಹಸ್ಯ ತೆರೆದಿಟ್ಟ SOANS F FARM