Advertisement

ಪೂರ್ಣಗೊಳ್ಳದ ಕಾಮಗಾರಿ: ಹಳೆಯದ್ದು ಉಳಿಯಲಿಲ್ಲ, ಹೊಸತು ಆಗಿಲ್ಲ !

08:41 PM Oct 28, 2021 | Team Udayavani |

ಮಹಾನಗರ: ನಗರದ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿರುವ ಬಂದರು ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕುದ್ರೋಳಿ, ಬಂದರು, ಪೋರ್ಟ್‌ ವಾರ್ಡ್‌ಗಳ ಹೆಚ್ಚಿನ ಒಳರಸ್ತೆಗಳು ಕಾಂಕ್ರೀಟ್‌ ರಸ್ತೆಗಳಾಗುತ್ತಿವೆ. ಆದರೆ ಇನ್ನೂ ಹಲವಾರು ರಸ್ತೆಗಳು ಡಾಮರು ಕೂಡ ಕಾಣದೆ ನಿರ್ಲಕ್ಷ್ಯಕ್ಕೊಳಪಟ್ಟಿವೆ. ಕಾಂಕ್ರೀಟ್‌ ಕಾಮಗಾರಿ ವಿಳಂಬದಿಂದಾಗಿಯೂ ಕೆಲವೆಡೆ ರಸ್ತೆ ಸಂಚಾರ ದುಸ್ತರವಾಗಿದೆ.

Advertisement

ಗುಂಡಿಗಳಿಂದ ಕೂಡಿದ ರಸ್ತೆಗಳು, ಅಗಲ ಕಿರಿದಾದ ರಸ್ತೆಗಳು, ಮಣ್ಣಿನಿಂದ ಹೊಂಡ ಮುಚ್ಚಿದ ರಸ್ತೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅನೇಕ ಕಡೆ ಒಳಚರಂಡಿ ಕಾಮಗಾರಿ ವಿಳಂಬ, ಭೂ ಸ್ವಾಧೀನದ ತೊಡಕಿನಿಂದಾಗಿಯೂ ರಸ್ತೆಗಳ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವ ವಾಸ್ತವಾಂಶವು ಸುದಿನ ತಂಡವು ಈ ವಾರ್ಡ್‌ಗಳ ಒಳರಸ್ತೆಗಳಲ್ಲಿ ಸುತ್ತಾಟ ನಡೆಸಿದಾಗ ಗೊತ್ತಾಗಿದೆ.

ಕುದ್ರೋಳಿ ವಾರ್ಡ್‌ನ ಅಳಕೆ- ಕುದ್ರೋಳಿ ಹಳೆಯ ಗೇಟ್‌ ರಸ್ತೆ ಹೊಂಡಮಯವಾಗಿದೆ. ಕುದ್ರೋಳಿ ಕಸಾಯಿಖಾನೆ ಸಮೀಪದ ಬ್ರಿಡ್ಜ್ ನಿಂದ ಜಾಮಿಯಾ ಮಸೀದಿವರೆಗಿನ ರಸ್ತೆ ಕಿರಿದಾಗಿದೆ. ಕರ್ನಲ್‌ ಗಾರ್ಡನ್‌ ರಸ್ತೆ ಅಗಲ ಕಿರಿದಾಗಿದ್ದು, ಅಭಿವೃದ್ಧಿಗೆ ಬಾಕಿಯಿದೆ. ಬೊಕ್ಕಪಟ್ಣ ಭಾರತ್‌ ಶಾಲೆ ಹಿಂದುಗಡೆ ರಸ್ತೆಯ ಚರಂಡಿ ಸರಿ ಇಲ್ಲದೆ, ರಸ್ತೆ ಅಭಿವೃದ್ಧಿ ಬಾಕಿಯಾಗಿದೆ. ಇದೇ ವಾರ್ಡ್‌ನ ಕಂಡತ್ತಪಳ್ಳಿ ಏರಿಯಾದ ಸಮಗಾರಗಲ್ಲಿ ಲೋವರ್‌ ಕಾರ್‌ಸ್ಟ್ರೀಟ್‌ ಕ್ರಾಸ್‌ ರೋಡ್‌ ರಸ್ತೆಗೆ ಜಲ್ಲಿ ಹಾಕಿಟ್ಟು ಮೂರು ತಿಂಗಳುಗಳಾದರೂ ಡಾಮರು ಅಥವಾ ಕಾಂಕ್ರೀಟ್‌ ಕಂಡಿಲ್ಲ. ವರ್ಷದ ಹಿಂದೆಯೇ ಮಳೆನೀರು ಚರಂಡಿ ಕಾಮಗಾರಿ ಮುಗಿದಿದೆ. ಆದರೆ ಜಲ್ಲಿಕಲ್ಲುಗಳಿಂದ ತುಂಬಿದ ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ. “ಜಲ್ಲಿ ಕಲ್ಲಿನ ಮೇಲೆ ವಾಹನಗಳು ಸಂಚರಿಸುವಾಗ ಜಲ್ಲಿ ಕಲ್ಲುಗಳು ಪಕ್ಕದ ಅಂಗಡಿಯೊಳಗೂ ಎಸೆಯಲ್ಪಡುತ್ತವೆ. ಡಾಮರು ಸಿಗುತ್ತಿಲ್ಲ ಎಂದು ಪಾಲಿಕೆಯವರು ಹೇಳುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ಅಂಗಡಿಯೊಂದರ ಮಾಲಕ ಸತೀಶ್‌ ಅವರು.

ಮಳೆಗೆ ಸಂಚಾರ ಕಡಿತ: ಪಕ್ಕದ ಪೋರ್ಟ್‌ವಾರ್ಡ್‌ನ ರೊಸಾರಿಯೋ ಶಾಲೆ ಹಿಂಬದಿಯಿಂದ ದಕ್ಕೆ ಗೇಟ್‌ವರೆಗಿನ ರಸ್ತೆ ಇಕ್ಕಟ್ಟಾಗಿದೆ. ಭಗತ್‌ ಸಿಂಗ್‌-ದಕ್ಕೆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಲು ಮಾತ್ರ ಅವಕಾಶವಿದೆ. ಅದು ಕೂಡ ಮಳೆಗಾಲಕ್ಕೆ ಇಲ್ಲಿ ನೀರು ನಿಂತು ಸಂಚಾರ ಕಡಿತಗೊಳ್ಳುತ್ತದೆ. ಬಂದರು ಪೊಲೀಸ್‌ ಠಾಣೆಯ ಎದುರಿನಿಂದ ಗೂಡ್ಸ್‌ ಶೆಡ್‌ವರೆಗಿನ ರಸ್ತೆ ವಿಸ್ತರಣೆಗೊಂಡಿದ್ದರೂ ಅಲ್ಲಲ್ಲಿ ಇಕ್ಕಟ್ಟಾಗಿರುವುದರಿಂದ ಸುಗಮ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಕಂಟೋನ್ಮೆಂಟ್‌ ವಾರ್ಡ್‌ನ ಶಿವನಗರ 5ನೇ ಅಡ್ಡರಸ್ತೆಯ ಅಭಿವೃದ್ಧಿ ಬಾಕಿಯಾಗಿದೆ. ಸದ್ಯ ಹೊಂಡಗಳಿಗೆ ಅಲ್ಲಲ್ಲಿ ಮಣ್ಣು ತುಂಬಿಸಲಾಗಿದೆ.

ಹೊಗೆ ಬಜಾರ್‌ ನಿವಾಸಿಗಳ ನರಕ ಯಾತನೆ: ಪೋರ್ಟ್‌ ವಾರ್ಡ್‌ನ ಹೊಗೆ ಬಜಾರ್‌ ರೈಲ್ವೆಗೇಟ್‌ ಪಕ್ಕದಲ್ಲಿ ಕೆನರಾ ಗೂಡ್ಸ್‌ ಆಫೀಸ್‌ ಬಳಿ ರಸ್ತೆ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿ ಸುಮಾರು 10 ತಿಂಗಳುಗಳೇ ಕಳೆದಿದ್ದು, ಇಲ್ಲಿ ಭಾರೀ ಸಮಸ್ಯೆಯುಂಟಾಗಿದೆ. ಗೂಡ್ಸ್‌ಶೆಡ್‌ಗೆ ತೆರಳುವ ಲಾರಿಗಳು ಸೇರಿದಂತೆ ಅತ್ಯಂತ ವಾಹನ ನಿಬಿಡವಾಗಿರುವ ಈ ರಸ್ತೆಯ ಕಾಮಗಾರಿ ಅವ್ಯವಸ್ಥೆಯಿಂದಾಗಿ ವಾಹನ ಚಾಲಕರಿಗೆ ಮಾತ್ರವಲ್ಲದೆ ಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಮನೆಯಿಂದ ರಸ್ತೆಗೆ ಕಾಲಿಡುವುದು ಅಸಾಧ್ಯವಾಗಿದೆ. ಬಿಸಿಲು ಬಂದರೆ ಧೂಳಿನಿಂದ ಮನೆಯೊಳಗೆ ಇರುವುದು ಕೂಡ ಯಾತನಾಮಯ. ಒಳಚರಂಡಿ ಕಾಮಗಾರಿ ಬಾಕಿಯಾಗಿ ರುವುದರಿಂದ ರಸ್ತೆ ಕಾಮಗಾರಿಯೇ ಅರ್ಧಕ್ಕೆ ನಿಂತು ಹೊಂಗಿ ಅಧ್ವಾನ ಉಂಟಾಗಿದೆ.

Advertisement

ರಸ್ತೆ ಅಗೆದು ಒಂದೂವರೆ ವರ್ಷ: “ಪೋರ್ಟ್‌ ರೋಡ್‌’ ಬಂದರಿಗೆ ಸಂಪರ್ಕಿಸುವ ಒಳರಸ್ತೆಯ ಪರಿಸ್ಥಿತಿಯೂ ಸರಿಯಿಲ್ಲ. ಈ ಭಾಗದ ಪ್ರಮುಖ ರಸ್ತೆಯೂ ಹೌದು. ಕಾಂಕ್ರೀಟ್‌ ಅಳವಡಿಸಲು ಇದನ್ನು ಅಗೆದು ಹಾಕಿ ಒಂದೂವರೆ ವರ್ಷವಾಯಿತು. ಆದರೂ ಕೆಲಸ ಪೂರ್ಣಗೊಂಡಿಲ್ಲ. ಹಾಗಾಗಿ, ದ್ವಿಚಕ್ರ ವಾಹನಗಳಿಗೂ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಸಂಪರ್ಕ ರಸ್ತೆಯ ದುಸ್ಥಿತಿಯಿಂದಾಗಿ ವ್ಯಾಪಾರಸ್ಥರು, ಸಾರ್ವಜನಿಕರ ಗೋಳು ಕೇಳುವವರಿಲ್ಲ ಎನ್ನುವಂತಾಗಿದೆ. “ಎಂಜಿನಿಯರ್‌ಗಳು ಅಪರೂಪಕ್ಕೊಮ್ಮೆ ಬಂದು ಒಂದಷ್ಟು ಅಗೆದು ಹಾಕಿಸಿ ಹೋಗುತ್ತಿದ್ದಾರೆ. ಏನು ಮಾಡುತ್ತಿದ್ದಾರೆಂಬುದೇ ಗೊತ್ತಿಲ್ಲ’ ಎನ್ನುವುದು ಸ್ಥಳೀಯ ಅಂಗಡಿ ಮಾಲಕರೊಬ್ಬರ ಆರೋಪ.

ಕರೆ ಸ್ವೀಕರಿಸದ ಪಾಲಿಕೆ ಅಧಿಕಾರಿಗಳು: “ಈ ಹಿಂದೆ ಇಲ್ಲಿನ ರಸ್ತೆಗಳ ಬಗ್ಗೆ ದೂರು ಹೇಳಿದರೆ ಅದನ್ನು ಕೇಳುತ್ತಿದ್ದರು. ಆದರೆ ಇತ್ತೀಚೆಗೆ ಕರೆಯನ್ನೇ ಸ್ವೀಕರಿಸುತ್ತಿಲ್ಲ. ವರ್ಷವಿಡೀ ತೊಂದರೆ ಅನುಭವಿಸಿಕೊಂಡು ಬಂದಿ ದ್ದರೂ ನಮಗೆ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಪೋರ್ಟ್‌ ರೋಡ್‌ನ‌ ವ್ಯಾಪಾರಿ ಇಸ್ಮಾಯಿಲ್‌.

ವಾರ್ಡ್‌ಗಳ ನಿರೀಕ್ಷೆ :

  • ಆಮೆಗತಿಯ ಕಾಮಗಾರಿಯಿಂದ ಸಂಚಾರಕ್ಕೆ ತೊಡಕು
  • ಜಲ್ಲಿ ಕಲ್ಲು ಹಾಕಿ ತೆರಳಿದ ಗುತ್ತಿಗೆದಾರರು ತಿಂಗಳುಗಳಿಂದ ನಾಪತ್ತೆ
  • ಸ್ಮಾರ್ಟ್‌ ಸಿಟಿಯ ಒಳರಸ್ತೆಗಳ ಗುಂಡಿಗೆ ಮಣ್ಣಿನ ತೇಪೆ
  • ಒಳಚರಂಡಿ ಕಾಮಗಾರಿ ವಿಳಂಬದಿಂದ ಇಡೀ ರಸ್ತೆ ಕಾಮಗಾರಿಯೇ ನನೆಗುದಿಗೆ.

ಇದು ನಗರದ ಒಳರಸ್ತೆಗಳ ಸ್ಥಿತಿಗತಿ ಕುರಿತ ಅಭಿಯಾನ. ಪಾಲಿಕೆ ವ್ಯಾಪ್ತಿಯ ಕುದ್ರೋಳಿ, ಬಂದರು, ಪೋರ್ಟ್‌, ಕಂಟೋನ್ಮೆಂಟ್‌ ವಾರ್ಡ್‌ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ, ಮಾಹಿತಿ ಸಂಗ್ರಹಿಸಿದ್ದು, ಇಲ್ಲಿನ ಹಲವಾರು ರಸ್ತೆಗಳು

ಡಾಮರು ಕೂಡ ಕಾಣದೆ ನಿರ್ಲಕ್ಷ್ಯಕ್ಕೊಳಪಟ್ಟಿವೆ. ಕಾಂಕ್ರೀಟ್‌ ಕಾಮಗಾರಿ ವಿಳಂಬದಿಂದಾಗಿಯೂ ಕೆಲವೆಡೆ ರಸ್ತೆ ಸಂಚಾರ ಸಂಕಷ್ಟಕರವಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಬಗ್ಗೆ ಗಮನಹರಿಸಿ ತತ್‌ಕ್ಷಣ ಅಗತ್ಯ ಕ್ರಮ ಕೈಗೊಳ್ಳವುದು ಸಾರ್ವಜನಿಕರ ಹಿತದೃಷ್ಟಿಯಿಂದ ಅನಿವಾರ್ಯ. ನಾಗರಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್‌ಗೆ ಕಳುಹಿಸಬಹುದು.

 

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next