Advertisement
ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಸಿಲ್ವರ್ ಜ್ಯುಬಿಲಿ ಪಾರ್ಕ್ ರಸ್ತೆ ಸೇರಿದಂತೆ ವಿವಿಧೆಡೆ ಸಾರ್ವಜನಿಕರು ರಸ್ತೆಯ ಒಂದು ಬದಿಯಿಂದ ಮತ್ತೂಂದು ಬದಿಗೆ ಹೋಗಲು ನಿರ್ಮಿಸಿರುವ ಸುರಂಗ ಮಾರ್ಗಗಳ ಮೂಲ ಉದ್ದೇಶ ಈಡೇರುತ್ತಿಲ್ಲ, ಜನರೂ ಸ್ಪಂದಿಸುತ್ತಿಲ್ಲ. ಆದರೆ, ಕೋಟಿ ಕೋಟಿ ಹಣ ಮಾತ್ರ ಖರ್ಚಾಗಿದೆ.
Related Articles
Advertisement
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆಟ್ರೋ, ಬಿಎಂಟಿಸಿ ಹಾಗೂ ರೈಲು ನಿಲ್ದಾಣಗಳಿಗೆ ಸಂಪರ್ಕ ಕ್ಲಪಿಸುವ ಪಾದಚಾರಿ ಸುರಂಗ ಮಾರ್ಗದಲ್ಲಿ ಜನ ಓಡಾಡಲು ಮುಜುಗರ ಪಡುವ ಸ್ಥಿತಿ ಇದೆ. ಅನಪೇಕ್ಷಿತ ಜನರು ಅಸಭ್ಯ ರೀತಿಯಲ್ಲಿ ವರ್ತಿಸುವುದು ಹಾಗೂ ವೇಶ್ಯಾವಾಟಿಕೆ ಚಟುವಟಿಕೆ ನಡೆಸುವವರು ಜನರನ್ನು ಸೆಳೆಯುವ ಕಾರಣ ಗೌರವಯುತ ಮಂದಿ ಪಾದಚಾರಿ ಸುರಂಗ ಮಾರ್ಗವನ್ನು ಬಳಸಲು ಹಿಂದೇಟು ಹಾಕುತ್ತಾರೆ.
ಸಂಜೆ 6ರ ನಂತರ ಈ ಸುರಂಗ ಮಾರ್ಗದಲ್ಲಿ ಮಹಿಳೆಯಷ್ಟೇ ಅಲ್ಲದೆ ಪುರುಷರೂ ಒಬ್ಬಂಟಿಯಾಗಿ ಸಂಚರಿಸಲು ಯೋಚಿಸುತ್ತಾರೆ. ಕೆಲವು ಲೈಗಿಂಕ ಅಲ್ಪಸಂಖ್ಯಾತರಿಂದ ಮುಜುಗರ ಉಂಟು ಮಾಡುವ ವರ್ತನೆ ಹಾಗೂ ಪೊಲೀಸರನ್ನು ಕಸಿವಿಸಿಗೊಳಿಸುವಂತಹ ನಡವಳಿಯಿಂದಾಗಿ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಮತ್ತು ಸಿಸಿಟಿವಿಗಳನ್ನು ಅಳವಡಿಸದಿರುವುದು ಪ್ರಮುಖ ಸಮಸ್ಯೆಯಾಗಿದೆ.ಮಲ, ಮೂತ್ರ ವಿಸರ್ಜನೆಗೆ ಮೀಸಲು (ಕೆ.ಆರ್.ಮಾರ್ಕೆಟ್): ಕೆ.ಆರ್.ಮಾರುಕಟ್ಟೆ ಬಳಿ ಇರುವ ಪಾದಚಾರಿ ಸುರಂಗ ಮಾರ್ಗ ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ, ಕಲಾಸಿಪಾಳ್ಯ ಹಾಗೂ ಯಲಹಂಕ ಬಸ್ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಈ ಸುರಂಗ ಮಾರ್ಗ ಜನರು ಬಳಸಲು ಸುರಕ್ಷಿತವಾಗಿದೆಯಾದರೂ ಮಲಮೂತ್ರ ವಿಸರ್ಜನೆಯ ಕೊಳುಕು ವಾಸನೆಯಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ವಿಕ್ಟೋರಿಯಾ, ಮಿಂಟೋ ಮತ್ತು ವಾಣಿ ವಿಲಾಸ ಆಸ್ಪತ್ರೆಗೆ ಹೋಗುವವರು, ಹಳೆಕೋಟೆ ಶಾಲೆ, ವಾಣಿ ವಿಲಾಸ ಶಾಲೆಯ ವಿದ್ಯಾರ್ಥಿಗಳು, ಹಣ್ಣು-ಹೂವಿನ ವ್ಯಾಪಾರಿಗಳು ಹೆಚ್ಚಾಗಿ ಈ ಸುರಂಗ ಮಾರ್ಗ ಬಳಸುತ್ತಾರೆ. ಬೆಳಗ್ಗೆ 7.30ರಿಂದ ತೆರೆಯುವ ಈ ಸುರಂಗ ಮಾರ್ಗವನ್ನು ರಾತ್ರಿ 8ಕ್ಕೆ ಮುಚ್ಚಲಾಗುತ್ತದೆ. ವಾರಾಂತ್ಯದ ದಿನಗಳಲ್ಲಿ ಮತ್ತು ಹಬ್ಬಗಳ ಹಿಂದಿನ ಎರಡು ದಿನ ರಾತ್ರಿ 9ರವರೆಗೂ ತೆರೆಯಲಾಗುತ್ತದೆ. ಸುರಂಗ ಮಾರ್ಗದಲ್ಲಿ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಪೌರಕಾರ್ಮಿಕರ ಸಮಸ್ಯೆಯಿಂದಾಗಿ ಸ್ವತ್ಛತೆ ಸಾಧ್ಯವಾಗುತ್ತಿಲ್ಲ. ಉಳಿದಂತೆ ಪ್ರತಿನಿತ್ಯ ಭದ್ರತಾ ಸಿಬ್ಬಂದಿಯೇ ಬೆಳಗ್ಗೆ ಮತ್ತು ಸಂಜೆ ಕಸ ಗುಡಿಸುತ್ತಾರೆ. ಹೀಗಾಗಿ ಇಲ್ಲಿ ಕಸದ ಸಮಸ್ಯೆ ಇಲ್ಲ. ಆದರೆ ಮೂತ್ರ ವಿಸರ್ಜನೆ ಮಾಡುವವರನ್ನು ತಡೆಗಟ್ಟುವ ವಿಚಾರದಲ್ಲಿ ಭದ್ರತಾ ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ. ಸಿಸಿಟಿವಿ ಅಳವಡಿಕೆ: ಇಲ್ಲಿರುವ ಪಾದಚಾರಿ ಸುರಂಗ ಮಾರ್ಗಕ್ಕೆ ಸಿಸಿಟಿವಿ ಅಳವಡಿಸಲು ಬಿಬಿಎಂಪಿ ಒಂದು ವರ್ಷದ ಹಿಂದೆ ಕ್ರಮ ಕೈಗೊಂಡಿತ್ತು. ಸಿಸಿಟಿವಿ ಅಳವಡಿಸಲು ಪಾದಚಾರಿ ಸುರಂಗ ಮಾರ್ಗದ ಕೆಲವು ಕಡೆಗಳಲ್ಲಿ ಗುರುತಿಸಲಾಗಿತ್ತು. ಆದರೆ, ಇನ್ನೂ ಅನುಷ್ಠಾನ ಮಾತ್ರ ಆಗಿಲ್ಲ.
ಸುರಂಗದಲ್ಲಿ ನೀರಿನ ಸುಗಮ ಸಂಚಾರ (ಟೌನ್‌ಹಾಲ್): ನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಟೌನ್‌ಹಾಲ್ ಬಳಿ ಪಾದಚಾರಿಗಳ ಅನುಕೂಲಕ್ಕಾಗಿ ಕಾಮತ್ ಹೋಟೆಲ್ ಹಾಗೂ ದಾಸಪ್ಪ ಆಸ್ಪತ್ರೆ ಬಳಿ ತೆರೆಯಲಾಗಿರುವ ಪಾದಚಾರಿ ಸುರಂಗ ಮಾರ್ಗದಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತದೆ. ಮಳೆಬಂದಾಗ ನೀರು ಒಳಗೆ ನುಗ್ಗುವುದರಿಂದ ಜನ ಬಳಕೆಗೆ ಯೋಗ್ಯವಾಗಿಲ್ಲ. ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಮಹಿಳೆಯರು ಈ ಪಾದಚಾರಿ ಸುರಂಗ ಮಾರ್ಗ ಬಳಸಲು ಹಿಂದೇಟು ಹಾಕುತ್ತಾರೆ. ಬೆಳಗ್ಗೆ ಈ ಪಾದಚಾರಿ ಸುರಂಗ ಮಾರ್ಗವನ್ನು ಶುಚಿ ಮಾಡಲು ಬರುವ ಮಹಿಳಾ ಪೌರಕಾರ್ಮಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಪುರುಷರು ಇಲ್ಲಿದ್ದಾರೆ. ಸನ್ನೆ ಮಾಡುವುದು, ಕೆಟ್ಟ ದನಿಯಲ್ಲಿ ಕರೆಯುವುದು ಈ ರೀತಿ ಮುಜುಗರಕ್ಕಿಡು ಮಾಡುವಂತೆ ಪುರುಷರು ವರ್ತಿಸುವುದರಿಂದ ಮಹಿಳಾ ಪೌರಕಾರ್ಮಿಕರು ಸರಿಯಾಗಿ ಪಾದಚಾರಿ ಸುರಂಗ ಮಾರ್ಗವನ್ನು ಸ್ವತ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆ ಈ ಪಾದಚಾರಿ ಸುರಂಗ ಮಾರ್ಗ ಅನೈತಿಕ ಚಟುವಟಿಕೆಗಳಿ ತಾಣವಾಗಿ ಬದಲಾಗುವುದು ದುರದೃಷ್ಟಕರ.
ಬಳಕೆಗಾಗಿ ಅಲ್ಲ, ಪ್ರದರ್ಶನಕ್ಕಾಗಿ (ನೃಪತುಂಗ ರಸ್ತೆ): ನೃಪತುಂಗ ರಸ್ತೆಯ ಕೊನೆಯಲ್ಲಿ ಮಾತ್ರವೇ ಸಿಗ್ನಲ್ ಇರುವುದರಿಂದ ವಾಹನಗಳ ವೇಗವಾಗಿ ಬರುತ್ತಿರುತ್ತವೆ. ಹೀಗಾಗಿ ಜನರಿಗೆ ರಸ್ತೆದಾಟಲು ಅನುಕೂಲವಾಗಲಿ ಎಂದು ತೆರೆಯಲಾಗಿರುವ ಮೂರು ಪಾದಚಾರಿ ಸುರಂಗ ಮಾರ್ಗಗಳಲ್ಲಿ ಆರ್‌ಬಿಐ ಬಳಿ ಇರುವ ಸುರಂಗ ಮಾರ್ಗವೊಂದೇ ಬಳಸಲು ಯೋಗ್ಯವಾಗಿದೆ. ಏಕೆಂದರೆ, ಹೆಚ್ಚಿನ ಮಂದಿ ಇದನ್ನು ಬಳಸುತ್ತಿದ್ದಾರೆ. ಉಳಿದಂತೆ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಕೆ.ಆರ್.ವೃತ್ತದ ಬಸ್ ನಿಲ್ದಾಣದ ಬಳಿ ಇರುವ ಸುರಂಗ ಮಾರ್ಗ ದುರ್ನಾತ ಬಿರುತ್ತಿದೆ. ಯುವಿಸಿಇ ಕಾಲೇಜು ಬಳಿ ಇರುವ ಪಾದಚಾರಿ ಸಂಚಾರ ಮಾರ್ಗದ ಒಳಗೆ ಹೆಜ್ಜೆ ಇಡಲು ಹೆದರಿಕೆಯಾಗುತ್ತದೆ. ಬಳಕೆಯಾಗದ ಕಾರಣ ಈ ಪಾದಚಾರಿ ಸುರಂಗ ಮಾರ್ಗ ಮಲಮೂತ್ರ ವಿರ್ಸಜನೆಯಿಂದ ತುಂಬಿಕೊಂಡಿದೆ. ಹೀಗಾಗಿ ಅಪರೂಪಕ್ಕೆ ಬರುವ ವಿದ್ಯಾರ್ಥಿಗಳೂ ಇದನ್ನು ಬಳಸಲು ಹೆದರುತ್ತಾರೆ. ಶೇಷಾದ್ರಿ ರಸ್ತೆಯಲ್ಲಿರುವ ಸುರಂಗ ಮಾರ್ಗ ಬಳಸಲು ಯೋಗ್ಯವಾಗಿದೆ. ಆದರೆ, ಅಲ್ಲೂ ಕಸದ ಸಮಸ್ಯೆ ಹೆಚ್ಚಿದೆ. ಸುರಂಗ ಮಾರ್ಗದ ಪಕ್ಕದಲ್ಲಿ ಕಲ್ಲುಹಾಸು ಕುಸಿದು ಬಿದ್ದಿದೆ. ಸಂಜೆ ವೇಳೆಗೆ ಪಾದಚಾರಿ ಸುರಂಗ ಮಾರ್ಗವನ್ನು ಮುಚ್ಚಲಾಗುವುದು. ಆಗ ಸುರಂಗ ಮಾರ್ಗ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಜನರು ಇದನ್ನು ಗಮನಿಸದಿದ್ದರೆ ಕುಸಿದು ಬೀಳುವ ಸಾಧ್ಯತೆ ಇದೆ.
ಭದ್ರತಾ ಸಿಬ್ಬಂದಿಗಿಲ್ಲ ವೇತನ: ಕೆ.ಆರ್.ಮಾರುಕಟ್ಟೆ ಬಳಿ ಇರುವ ಪಾದಚಾರಿ ಸುರಂಗ ಮಾರ್ಗದ ಭದ್ರತೆಗಾಗಿ ನೇಮಿಸಿರುವ ಭದ್ರತಾ ಸಿಬ್ಬಂದಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಸಂಬಳವಾಗಿಲ್ಲ. 6 ವರ್ಷದಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಬಿಬಿಎಂಪಿ ವೇತನ ಹೆಚ್ಚಳ ಕೂಡ ಮಾಡಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಈ ಸಿಬ್ಬಂದಿ ತಮಗೆ ಸಂಬಳ ನೀಡುವಂತೆ ಮಾಲೀಕರನ್ನು ಕೇಳಿದರೆ ಮಾಲೀಕರು ಬಿಬಿಎಂಪಿ ಅನುದಾನ ನೀಡಿದ ನಂತರ ಸಂಬಳ ನೀಡಲಾಗುವುದು ಎಂದು ಹೇಳುತ್ತಾರೆ. ಹೀಗಾಗಿ ಮೂರು ಜನಕ್ಕೆ ಕಳೆದ 4 ತಿಂಗಳುಗಳಿಂದ ಮತ್ತು ಇಬ್ಬರಿಗೆ ಕಳೆದ 6 ತಿಂಗಳುಗಳಿಂದ ಸಂಬಳವಾಗಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಮಾದರಿ ಸುರಂಗ ಮಾರ್ಗ: ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸೆಂಟ್ ಮಾರ್ಥಸ್ ಆಸ್ಪತ್ರೆ ಮುಂದಿರುವ ಪಾದಚಾರಿ ಸುರಂಗ ಮಾರ್ಗ ಮಾದರಿ ಸುರಂಗ ಮಾರ್ಗವಾಗಿದ್ದು, ಈ ರೀತಿ ಉಳಿದ ಪಾದಚಾರಿ ಸುರಂಗ ಮಾರ್ಗಗಳ ನಿರ್ವಹಣೆ ಮಾಡಬೇಕೆಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ. ಈ ಸುರಂಗ ಮಾರ್ಗದಲ್ಲಿ ಕಸದ ಸಮಸ್ಯೆ ಇಲ್ಲ, ಮಲಮೂತ್ರ ವಿಸರ್ಜನೆಯ ವಾಸನೆ ಇಲ್ಲ. ಬೆಳಕಿನ ವ್ಯವಸ್ಥೆಯನ್ನು ಚೆನ್ನಾಗಿ ಮಾಡಲಾಗಿದೆ. ಮಹಿಳೆಯರು ಸುರಕ್ಷಿತವಾಗಿ ಓಡಾಡಬಹುದು. ಪಾದಚಾರಿ ಸುರಂಗ ಮಾರ್ಗದೊಳಗೆ ಸಿಸಿಟಿವಿ ಅಳವಡಿಕೆ ಮಾಡಿದರೆ ಇನ್ನೂ ಸುರಕ್ಷಿತವಾಗಿ ಓಡಾಡಬಹುದು. ಈ ರೀತಿ ಉಳಿದ ಪಾದಚಾರಿ ಸುರಂಗ ಮಾರ್ಗಗಳ ನಿರ್ವಹಣೆಯಾಗು ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿನಿ ಗೌತಮಿ.
ನೃಪತುಂಗ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಸರ್ಕಾರಿ ವಿಜ್ಞಾನ ಕಾಲೇಜಿನ ಎದುರಿರುವ ಪಾದಚಾರಿ ಸುರಂಗ ಮಾರ್ಗ ಬಳಸಲು ಯೋಗ್ಯವಾಗಿಲ್ಲ. ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಒಳಗೆ ಹೆಜ್ಜೆ ಇಡಲು ಹೆದರಿಕೆಯಾಗುತ್ತದೆ.
-ಪ್ರಿಯಾಂಕ, ವಿದ್ಯಾರ್ಥಿನಿ
ಶೇಷಾದ್ರಿ ರಸ್ತೆ ಮತ್ತು ನೃಪತುಂಗ ರಸ್ತೆಯ ಸುತ್ತ ಯುವಿಸಿಇ, ಸರ್ಕಾರಿ ವಿಜ್ಞಾನ ಕಾಲೇಜು, ಎಸ್.ಜೆ.ಪಾಲಿಟೆಕ್ನಿಕ್ ಸೇರಿ ಹಲವು ಕಾಲೇಜುಗಳಿವೆ. ವಾಹನ ದಟ್ಟಣೆ ಹೆಚ್ಚಿರುವ ಕಾರಣ, ರಸ್ತೆ ದಾಟಲು ಕಷ್ಟ. ಪಾದಚಾರಿ ಸುರಂಗ ಮಾರ್ಗಗಳೂ ಸುರಕ್ಷಿತವಾಗಿಲ್ಲ.
-ಐಶ್ವರ್ಯಾ, ವಿದ್ಯಾರ್ಥಿನಿ
ಯುವಿಸಿಇ ಪಕ್ಕದಲ್ಲಿರುವ ಪಾದಚಾರಿ ಸುರಂಗ ಮಾರ್ಗದಲ್ಲಿ ಕಲ್ಲು, ಮಣ್ಣು, ಮರದ ಟೊಂಗೆಗಳು ಬಿದ್ದಿರುತ್ತವೆ. ಅಕ್ಕಪಕ್ಕದಲ್ಲಿ ಕಸದ ರಾಶಿ ಸಹ ಇದೆ. ಹೀಗಾಗಿ ಈ ಮಾರ್ಗದ ಮೂಲಕ ಸಂಚರಿಸಲು ಭಯವಾಗುತ್ತದೆ.
-ಮಮತಾ, ಉಪನ್ಯಾಸಕಿ ಟೌನ್‌ಹಾಲ್ ಬಳಿ ಇರುವ ಪಾದಚಾರಿ ಸುರಂಗ ಮಾರ್ಗ ಸ್ವತ್ಛವಾಗಿಲ್ಲ. ಸಂಜೆ 4ರಿಂದ 6ರವರೆಗೆ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಸುರಂಗ ಮಾರ್ಗ ಬಳಸಲು ಭಯವಾಗುತ್ತದೆ. ಅಲ್ಲಿ ಕನಿಷ್ಠ ಬೆಳಕಿನ ವ್ಯವಸ್ಥೆ ಇಲ್ಲ.
-ಶೈಲಜಾ, ಖಾಸಗಿ ಸಂಸ್ಥೆ ಉದ್ಯೋಗಿ ಪಾದಚಾರಿ ಸುರಂಗ ಮಾರ್ಗ ತೆರೆಯುವ ಸಮಯ ಹಾಗೂ ಮುಚ್ಚುವ ಸಮಯವನ್ನು ನಮೂದಿಸಬೇಕು. ಮಲ, ಮೂತ್ರ ವಿಸರ್ಜನೆ ಮಾಡುವವರಿಂದ ಕಡ್ಡಾಯವಾಗಿ ದಂಡ ವಸೂಲಿ ಮಾಡಬೇಕು. ಇದರಿಂದ ಸ್ವತ್ಛತೆ ಕಾಪಾಡಬಹುದು.
-ಪ್ರದೀಪ್, ಖಾಸಗಿ ಸಂಸ್ಥೆ ಉದ್ಯೋಗಿ * ಶ್ರುತಿ ಮಲೆನಾಡತಿ