Advertisement

ಮಣ್ಣಿನ ರಾಶಿಯಿಂದ ಪಾದಚಾರಿ, ಸವಾರರ ಪರದಾಟ!

01:03 PM Jun 25, 2018 | |

ಮಹಾನಗರ : ಬಜಾಲ್‌ನ ಜೆ.ಎಂ. ರಸ್ತೆಯಲ್ಲಿ ಒಂದೂವರೆ ತಿಂಗಳ ಹಿಂದೆ ರಸ್ತೆ ವಿಸ್ತರಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಅಗೆದು ರಸ್ತೆ ಬದಿ ರಾಶಿ ಹಾಕಿದ್ದ ಮಣ್ಣು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಅಪಾಯಕ್ಕೆ ಆಹ್ವಾನಿಸುವಂತಿದೆ. ಮಳೆ ಬಂದ ಕಾರಣ ಈ ಮಣ್ಣಿನ ರಾಶಿ ಕೆಸರುಮಯವಾಗಿ ರಸ್ತೆಯಲ್ಲಿ ನಡೆದಾಡುವುದು ಬಿಡಿ, ಕಾಲೂರಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ, ಮಳೆ ನೀರಿನೊಂದಿಗೆ ಮಣ್ಣು ರಸ್ತೆಗೆ ಬಂದು ರಸ್ತೆಗೂ ಹಾನಿಯಾಗಿದೆ. ಇದರಿಂದ ವಾಹನಗಳ ಸಂಚಾರ ಕೂಡ ಕಷ್ಟಕರವಾಗಿದೆ.

Advertisement

ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪಡೀಲ್‌ ಕಡೆಗೆ ಮತ್ತು ಬಜಾಲ್‌ ಚರ್ಚ್‌ ಕಡೆಗೆ ಹೋಗುವ ಬಸ್‌ಗಳು ಸಂಚರಿಸುತ್ತಿದ್ದು, ಎಲ್ಲರಿಗೂ ಈ ಮಣ್ಣಿನ ರಾಶಿ ಸಮಸ್ಯೆಯಾಗಿ ಪರಿಣಮಿಸಿದೆ. ಮಳೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಶೋಚನೀಯ ಸ್ಥಿತಿಗೆ ರಸ್ತೆ ಬದಿಯ ಮಣ್ಣಿನ ರಾಶಿಯೇ ಕಾರಣ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಗನ್ನಾಥ ಶೆಟ್ಟಿ ಅವರು.

ಮಳೆಗಾಲ ಆರಂಭದ ವೇಳೆ ರಸ್ತೆ ವಿಸ್ತರಣೆಯ ಕಾಮಗಾರಿಗೆ ಮಹಾ ನಗರ ಪಾಲಿಕೆ ಪ್ರಾರಂಭಿಸಿದ್ದು, ದಿಢೀರನೆ ಧಾರಾಕಾರ ಮಳೆ ಬಂದಾಗ ಅರ್ಧದಲ್ಲಿಯೇ ಕೆಲಸವನ್ನು ಮೊಟಕುಗೊಳಿಸಿದ್ದು, ಈ ಸಮಸ್ಯೆಗೆ ಮುಖ್ಯ ಕಾರಣ. ಆದರೆ ಕಳೆದ ಎರಡು ದಿನಗಳಿಂದ ಇಬ್ಬರು-ಮೂವರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.

ಸಮಸ್ಯೆಯ ಮೂಲ
ರಸ್ತೆ ಸಮೀಪ ಇರುವ ದರೆಯನ್ನು ಅಗೆದು, ಮಣ್ಣನ್ನು ತೆಗೆಯದೆ ರಸ್ತೆಯ ಬದಿಯಲ್ಲಿ ರಾಶಿ ಮಾಡಲಾಗಿದೆ. ಮಳೆ ಬಂದಾಗ ಈ ಮಣ್ಣು ರಸ್ತೆಯ ತುಂಬೆಲ್ಲ ಹರಡಿದೆ. ಇದರಿಂದ ರಸ್ತೆ ಬದಿ ನಡೆ ದಾಡುವ ಮಂದಿಗೆ ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಮಸ್ಯೆಯಾಗಿದೆ. ಹಾಗೆ ಇಲ್ಲಿ ವಾಹನಗಳು ಓಡಾಡುವಾಗ ರಾಡಿ ಎರಚಲ್ಪಟ್ಟು ಧರಿಸಿದ ಬಟ್ಟೆಗಳು ಕೊಳೆಯಾದ ಪ್ರಸಂಗಗಳು ನಡೆದಿವೆ. ಆದ್ದರಿಂದ ರಸ್ತೆ ಬದಿಯ ಮಣ್ಣಿನ ರಾಶಿಯನ್ನು ಕೂಡಲೇ ತೆರವು ಮಾಡಬೇಕೆಂದು ಸಾರ್ವಜನಿಕರು ಪಾಲಿಕೆಯನ್ನು ಒತ್ತಾಯಿಸಿದ್ದಾರೆ. 

35ಕ್ಕೂ ಹೆಚ್ಚು ಗುಂಡಿಗಳು
ಈ ರಸ್ತೆಯ ಸುಮಾರು 100 ಮೀಟರ್‌ ವ್ಯಾಪ್ತಿಯಲ್ಲಿ 35ಕ್ಕೂ ಹೆಚ್ಚು ಗುಂಡಿಗಳಿವೆ. ವಾಹನ ಸವಾರರು ರಸ್ತೆಯ ಗುಂಡಿಗಳನ್ನು ಮತ್ತು ಕೆಸರನ್ನು ತಪ್ಪಿಸಿ ವಾಹನ ಚಲಾಯಿಸಲು ಸರ್ಕಸ್‌ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಅಗಲ ಕಿರಿದಾಗಿದ್ದು, ಅದರ ಮಧ್ಯೆ ರಸ್ತೆ ವಿಸ್ತರಣೆಗಾಗಿ ತರಿಸಿದ್ದ ಮರಳು ರಸ್ತೆಯ ಬದಿ ಸಂಗ್ರಹಿಸಿಟ್ಟಿದ್ದು, ಇದು ಕೂಡ ಪಾದಚಾರಿಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ. ಇದೆಲ್ಲವನ್ನೂ ಸಹಿಸಿಕೊಂಡು ಓಡಾಡುವುದು ನಮಗೆ ಅನಿವಾರ್ಯ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

Advertisement

ಶೀಘ್ರ ರಸ್ತೆ ಸಂಚಾರಕ್ಕೆ ಯೋಗ್ಯ
ರಸ್ತೆ ವಿಸ್ತರಣಾ ಕಾಮಗಾರಿಗೆ ಸಂಬಂಧಿಸಿದ ಟೆಂಡರ್‌ ಕಾರ್ಯರೂಪಕ್ಕೆ ಬರುವಾಗ ವಿಳಂಬವಾದ ಕಾರಣ ಮಳೆಗಾಲದ ಆರಂಭದಲ್ಲಿ ಕೆಲಸ ಕೈಗೊಳ್ಳುವ ಅನಿರ್ವಾಯ ಉಂಟಾಗಿದೆ.. ದಿಢೀರನೆ ಧಾರಾಕಾರ ಮಳೆ ಬಂದ ಹಿನ್ನೆಲೆಯಲ್ಲಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದು ಅನಿವಾರ್ಯವಾಯಿತು. ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಅದಷ್ಟು ಶೀಘ್ರದಲ್ಲಿ ರಸ್ತೆ ಕೆಲಸವನ್ನು ಮುಗಿಸಿ ಜನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿಕೊಡುವಂತೆ ಎಂಜಿನಿಯರ್‌ಗೆ ಸೂಚಿಸಿದ್ದೇನೆ. 
– ವಿಜಯ ಕುಮಾರ್‌,
ಸ್ಥಳೀಯ ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next