Advertisement
ನೆಲಗಡಲೆ ಬೆಳೆಯುವ ರೈತರು ಉಡುಪಿ ಜಿಲ್ಲೆಯಾದ್ಯಂತ ಇಲ್ಲದಿದ್ದರೂ ಕೋಟ, ಕುಂದಾಪುರ, ಬೈಂದೂರು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿದ್ದು, ಸ್ವಲ್ಪ ಭಾಗ ಮಾತ್ರ ವಂಡ್ಸೆ ಹೋಬಳಿಯಲ್ಲಿ ಕಾಣಸಿಗುತ್ತಾರೆ. ಒಟ್ಟು ಸುಮಾರು 18,000 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಕೃಷಿಯನ್ನು ಬೆಳೆಯಲಾಗುತ್ತದೆ. ಅಂದಾಜು 4 ಸಾವಿರಕ್ಕೂ ಹೆಚ್ಚು ರೈತರು ಹಿಂಗಾರು ಹಂಗಾಮಿನಲ್ಲಿ ಇದನ್ನೇ ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಕಾರ್ಕಡ, ಸಾಸ್ತಾನ, ಗುಂಡ್ಮಿ, ಸಾಲಿಗ್ರಾಮ, ಉಪ್ಪುಂದ, ನಾಗೂರು, ಕಿರಿಮಂಜೇಶ್ವರ, ಬೈಂದೂರು ಭಾಗದಲ್ಲಿಯೇ ಹೆಚ್ಚು ಮಂದಿ ರೈತರು ನೆಲಗಡಲೆಯನ್ನು ಬೆಳೆಯುತ್ತಾರೆ.
ಶೇಂಗ ಕೃಷಿಗೆ 2 ರೀತಿಯ ತಳಿಗಳಿದ್ದು, 120 ದಿನದಲ್ಲಿ ಹಾಗೂ 90 ದಿನಗಳಲ್ಲಿ ಬೆಳೆಯುವ ಬೀಜಗಳಿವೆ. ಕುಂದಾಪುರ, ಬೈಂದೂರು, ಕೋಟ ಭಾಗದಲ್ಲಿ ಉಪ್ಪು ನೀರಿನ ಪ್ರಭಾವವೂ ಜಾಸ್ತಿಯಿರುವುದರಿಂದ ಕಡಿಮೆ ತೇವಾಂಶ ಹಾಗೂ ಕಡಿಮೆ ದಿನಗಳಲ್ಲಿ ಬೆಳೆಯುವ ಬೀಜದ ಅಗತ್ಯವಿದೆ. ಇಲ್ಲಿ ಶೇ. 60ರಷ್ಟು ಜವಾರಿ (90 ದಿನಗಳಲ್ಲಿ) ಬೀಜ ಬೇಕಿದ್ದರೆ, ಜಿಪಿ ಬಿಡಿ-4 (120 ದಿನಗಳಲ್ಲಿ) ಶೇ. 40ರಷ್ಟು ಮಾತ್ರ ಅಗತ್ಯವಿದೆ. ಆದರೆ ಇಲ್ಲಿಗೆ ಹೆಚ್ಚಾಗಿ ಹೈಬ್ರಿಡ್ ತಳಿ ಅಂದರೆ 120 ದಿನಗಳಲ್ಲಿ ಬೆಳೆಯುವ ಜಿಪಿಬಿಡಿ – 4 ತಳಿಯನ್ನೇ ಇಲಾಖೆಯಿಂದ ಹೆಚ್ಚಾಗಿ ಪೂರೈಕೆ ಮಾಡುತ್ತಾರೆ ಎನ್ನುವುದು ರೈತರ ವಾದ. ಇಲಾಖೆಯಲ್ಲಾದರೆ 1 ಕೆ.ಜಿ. ಶೇಂಗಾ ಬೀಜಕ್ಕೆ 47 ರೂ. ಇದ್ದರೆ, ಹೊರಗಡೆ 65 ರೂ. ನೀಡಬೇಕಾಗುತ್ತದೆ. ಬೀಜದ ಕೊರತೆಯಿಲ್ಲ
ಉಡುಪಿ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ನೆಲಗಡಲೆ ಕೃಷಿಕರು ಇದ್ದಾರೆ. ಈಗಾಗಲೇ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ನೆಲಗಡಲೆ ಬೀಜವನ್ನು ಪೂರೈಕೆ ಮಾಡಲಾಗಿದೆ. ಅಗತ್ಯವಿರುವ ರೈತರು ಅಲ್ಲಿಂದಲೇ ಪಡೆಯಬಹುದು. ಜಿಲ್ಲೆಯಲ್ಲಿ 375 ಕ್ವಿಂಟಾಲ್ ಟಿಎಂಎ – 2 ಬೀಜ ಹಾಗೂ 245 ಕ್ವಿಂಟಾಲ್ ಜಿಪಿಬಿಡಿ – 4 ಬೀಜವನ್ನು ಪೂರೈಕೆ ಮಾಡಲಾಗಿದೆ.
– ಚಂದ್ರಶೇಖರ್ ಶೆಟ್ಟಿ, ಉಪನಿರ್ದೇಶಕರು, ಕೃಷಿ ಇಲಾಖೆ ಉಡುಪಿ
Related Articles
ಈ ಬಾರಿ ನ. 22 ರಿಂದ ನೆಲಗಡಲೆ ಬೀಜವನ್ನು ಇಲಾಖೆಯಿಂದ ಕೊಡುತ್ತಿದ್ದಾರೆ. ಆದರೆ ಇದು ತಡವಾಯಿತು. ನವೆಂಬರ್ ಎರಡನೇ ವಾರದಿಂದಲೇ ಕೊಡಬೇಕಾಗಿತ್ತು. ಉಪ್ಪುಂದ, ನಾಗೂರು, ನಾಯ್ಕನಕಟ್ಟೆ ಭಾಗಗಳಲ್ಲಿ ಕಡಿಮೆ ತೇವಾಂಶ ಇರುವ ಜಾಗವೇ ಹೆಚ್ಚಿದೆ. ನಮಗೆ ಅಗತ್ಯವಿರುವಷ್ಟು ಶೇಂಗಾ ಬೀಜ ಇಲ್ಲದೆ ಹುಬ್ಬಳ್ಳಿಯಿಂದ ಹೆಚ್ಚಿನ ಹಣ ಕೊಟ್ಟು ತರಿಸಲಾಗಿದೆ.
– ನಾಗರಾಜ್ ಉಪ್ಪುಂದ, ಶೇಂಗಾ ಕೃಷಿಕರು
Advertisement
— ಪ್ರಶಾಂತ್ ಪಾದೆ