Advertisement

ಶೇಂಗಾ ಬೆಲೆ ಕುಸಿತ; ರೈತ ಕಂಗಾಲು

05:47 PM Mar 24, 2022 | Team Udayavani |

ಮುದಗಲ್ಲ: ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಕೀಟ-ರೋಗ ಬಾಧೆಯ ನಡುವೆ ಹೇಗೋ ಜೀವನ ಮುಂದೂಡುತ್ತಿದ್ದ ರೈತರಿಗೆ ಇದೀಗ ಮತ್ತೆ ಬೆಲೆ ಕುಸಿತ ಭೀತಿ ಉಂಟಾಗಿದೆ.

Advertisement

ಹೌದು, ಕೊಳವೆಬಾವಿ, ತೆರೆದ ಬಾವಿ, ನದಿ-ಕಾಲುವೆ ನೀರು ಹಾಯಿಸಿ ಇಲ್ಲಿನ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಶೇಂಗಾ ಬೆಳೆ ರಾಶಿ ಮಾಡಿ ಮಾರುಕಟ್ಟೆಗೆ ಸೇರಿಸೋಣ ಎನ್ನುವ ರೈತರಿಗೆ ಇದೀಗ ಬೆಲೆ ಕುಸಿತ ಕಂಗಾಲಾಗಿಸಿದೆ.

ಫೆಬ್ರವರಿ ಆರಂಭದಲ್ಲಿ 7300ರಿಂದ 7500 ರೂ. ವರೆಗೆ ಮಾರಾಟವಾಗಿದ್ದ ಶೇಂಗಾ ಈಗ ಮಾರ್ಚ್‌ ತಿಂಗಳಲ್ಲಿ ದಿಢೀರ್‌ ಕುಸಿತ ಕಂಡಿದೆ. ಒಮ್ಮಿಂದೊಮ್ಮೆಲೆ 5600ರಿಂದ 6300 ರೂ.ಗೆ ಕುಸಿದಿರುವುದು ರೈತರ ನೆಮ್ಮದಿ ಕದಡಿದೆ.

ರಷ್ಯಾ-ಉಕ್ರೇನ್‌ ಯುದ್ಧ ನಡೆದಿದ್ದರಿಂದ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಆದರಂತೆ ಶೇಂಗಾ ಎಣ್ಣೆ ಕಾಳು ಪದಾರ್ಥವಾಗಿದ್ದರಿಂದ ಶೇಂಗಾ ಬೆಲೆ ಹೆಚ್ಚುತ್ತದೆ ಎಂದು ಕೆಲ ರೈತರು ಉತ್ಪನ್ನ ಮಾರಾಟ ಮಾಡದೇ ಸಂಗ್ರಹಿಸಿಟ್ಟಿದ್ದರು. ಆದರೆ ತಿಂಗಳಿಂದ ಬೆಲೆ ಕುಸಿದಿರುವುದನ್ನು ಗಮನಿಸಿರುವ ರೈತರು ಇದೀಗ ಕೈ ಹಿಸುಕಿಕೊಳ್ಳುವಂತಾಗಿದೆ.

10ರಿಂದ 12 ಸಾವಿರ ರೂ.ಗಳಿಗೆ ಕ್ವಿಂಟಲ್‌ ಶೇಂಗಾ ಬೀಜ ಖರೀದಿಸಿ ಬಿತ್ತನೆ ಮಾಡಲಾಗಿದೆ. ಅಂತರ್ಜಲ, ವಿದ್ಯುತ್‌ ಸಮಸ್ಯೆ, ಕೀಟಬಾಧೆ, ರೋಗಾಣು ಹಾಗೂ ಕಳೆ, ಇಳುವರಿಯಂತಹ ಹಲವು ಸಮಸ್ಯೆ ಎದುರಿಸಿದ ರೈತರು ಬೆಳೆದ ಶೇಂಗಾ ಬೆಳೆಯನ್ನು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿದೆ.

Advertisement

ಅಧಿಕ ಆವಕ

ಹಿಂಗಾರಿಗೆ ಈ ವರ್ಷ ಉತ್ತಮ ಮಳೆ ಸುರಿದ ಕಾರಣ ಅಂತರ್ಜಲಮಟ್ಟ ಹೆಚ್ಚಾಗಿದ್ದರಿಂದ ಬಹಳಷ್ಟು ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಸುಮಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಬೋರ್‌ ವೆಲ್‌ಗ‌ಳು ಈ ಬಾರಿ ನೀರು ಸಂಗ್ರಹಗೊಂಡಿರುವುದನ್ನು ಗಮನಿಸಿ ಶೇಂಗಾ ಬೆಳೆದು ಲಾಭದೊಂದಿಗೆ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆದರೀಗ ರೈತರ ಆಸೆಗೆ ತಣ್ಣೀರೆರಚಿದಂತಾಗಿದೆ.

ಕೂಲಿಕಾರರ ಕೊರತೆ

ಬಹುತೇಕ ಜೋಳ, ಶೇಂಗಾ, ಕುಸುಬಿ ರಾಶಿಗೆ ಬಂದಿದ್ದು, ಕೂಲಿಕಾರರ ಕೊರತೆಯಿಂದಾಗಿ ಕಟಾವು ಕಾರ್ಯ ಕೂಡ ಕುಂಠಿತವಾಗಿದೆ. ದಿನಕ್ಕೆ 200ರಿಂದ 250 ರೂ. ನೀಡುತ್ತಿದ್ದರೂ ಮಹಿಳಾ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಕೂಲಿಕಾರರಿಗೆ ಡಿಮ್ಯಾಂಡ್‌ ಬಂದಿದೆ. ಸಾರಿಗೆ ವೆಚ್ಚ, ಊಟದ ಖರ್ಚಿನ ಬೇಡಿಕೆಯೊಂದಿಗೆ ಕೆಲಸಕ್ಕೆ ಬರುತ್ತಾರೆಂದು ರೈತರು ತಮ್ಮ ಅಸಹಾಯಕತೆ ಬಿಚ್ಚಿಡುತ್ತಾರೆ.

35 ಎಕರೆಯಲ್ಲಿ 30 ಕ್ವಿಂಟಲ್‌ ಶೇಂಗಾ ಬೀಜ ಬಿತ್ತನೆ ಮಾಡಿದ್ದೇನೆ. ಸುಮಾರು 6 ಲಕ್ಷ ರೂ. ಖರ್ಚಾಗಿದೆ. 600 ಚೀಲ ಶೇಂಗಾ ಮಾರಾಟ ಮಾಡಿದ್ದೇನೆ. ಆದರೆ ಇನ್ನುಳಿದ ಶೇಂಗಾ ಮಾರಾಟಕ್ಕೆ ಬೆಲೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ. -ಸೋಮಲ್ಯಾನಾಯಕ, ಶೇಂಗಾ ಬಿತ್ತನೆ ಮಾಡಿದ ರೈತ, ಜಕ್ಕರಮಡು ತಾಂಡಾ

-ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next