Advertisement

ಬಸವನಗುಡಿಯಲ್ಲೀಗ ಕಡಲೆಕಾಯಿ ಸೊಗಡು

11:21 AM Nov 23, 2019 | Team Udayavani |

ಬೆಂಗಳೂರು: ಕಡೆ ಕಾರ್ತೀಕ ಸೋಮವಾರ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ರಾಜ್ಯ ಸೇರಿ ಹೊರರಾಜ್ಯಗಳಿಂದ ಬಗೆ ಬಗೆಯ ಕಡಲೆಕಾಯಿ ಬಂದಿದ್ದು, ನೂರಾರು ಮಳಿಗೆಗಳು ನಿರ್ಮಾಣಗೊಂಡಿವೆ.

Advertisement

ಬುಲ್‌ ಟೆಂಪಲ್‌ ರಸ್ತೆ, ಎನ್‌.ಆರ್‌.ಕಾಲೋನಿ ರಸ್ತೆ, ರಾಮಕೃಷ್ಣ ಆಶ್ರಮ ರಸ್ತೆಯಲ್ಲಿ ಕಡಲೆಕಾಯಿ ರಾಶಿ ರಾರಾಜಿಸುತ್ತಿದ್ದು, ಪರಿಷೆಗೆ ಗಡಂಗ್‌, ಬಾದಾಮಿ, ಸಾಮ್ರಾಟ್‌ ಸೇರಿದಂತೆ ವಿವಿಧ ತಳಿಗಳ ಕಡಲೆಕಾಯಿಹಾಗೂ ಕೆಂಪು, ಗುಲಾಬಿ ಬಣ್ಣದ ಬೀಜ ಹೊಂದಿರುವ ಕಡಲೆಕಾಯಿ ಬಂದಿವೆ. ಹತ್ತಾರು ಜಾತಿಯ ಕಡಲೆಕಾಯಿ ಇದ್ದು, ಕೆಂಪು ಮಣ್ಣು, ಕಪ್ಪು ಮಣ್ಣಿನಲ್ಲಿ ಬೆಳೆದ ಒಂದೊಂದು ಬಗೆಯ ಕಡಲೆಕಾಯಿ ರಾಶಿಯೂ ಭಿನ್ನ ಬಣ್ಣದೊಂದಿಗೆ ಕಂಗೊಳಿಸುತ್ತಿವೆ. ಪರಿಷೆ ಇನ್ನೂ ಎರಡು ದಿನ ಬಾಕಿಯಿದ್ದರೂ ವಾರದ ಹಿಂದೆಯೇ ವ್ಯಾಪಾರಿಗಳು ರಾಶಿ ರಾಶಿ ಕಾಯಿ ಗಳೊಂದಿ ಗೆ ಮಳಿಗೆಗಳನ್ನು ನಿರ್ಮಿಸಿದ್ದಾರೆ. ರಾಮಕೃಷ್ಣ ಆಶ್ರಮದಿಂದ ಎನ್‌.ಆರ್‌. ಕಾಲೋನಿವರೆಗೆ, ಠ್ಯಾಗೋರ್‌ ಸರ್ಕಲ್‌ನಿಂದ ಹನುಮಂತನಗರ ವರೆಗೆ, ಬಿಎಂಎಸ್‌ ಕಾಲೇಜು ಮುಂಭಾಗ ಸೇರಿದಂತೆ ದೊಡ್ಡಗಣಪತಿ ದೇವಸ್ಥಾನ ಸುತ್ತಲ ಪ್ರದೇಶದಲ್ಲಿ ವ್ಯಾಪಾರಿಗಳು ಮಳಿಗೆ ನಿರ್ಮಿಸಿದ್ದು, ನ. 23 ಮತ್ತು 24ರಂದು ರಜೆ ದಿನವಾಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರಿಷೆಗೆ ಆಗಮಿಸುವ ಸಾಧ್ಯತೆ ಇದೆ.

ಕುಣಿಗಲ್‌, ಚಿಂತಾಮಣಿ, ಶ್ರೀನಿವಾಸಪುರ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ ಹೀಗೆ ರಾಜ್ಯದ ಹಲವು ಭಾಗಗಳಿಂದ ಕಡಲೆಕಾಯಿ ಬಂದಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಬಗೆ ಬಗೆಯ ಕಡಲೆಕಾಯಿ ಬಂದಿವೆ.

ಪರಿಷೆಯಲ್ಲಿ ರೈತರ ಮಳಿಗೆಗಿಂತ ವ್ಯಾಪಾರಿಗಳದೇ ಕಾರುಬಾರು ಜೋರಾಗಿದ್ದು, ಒಂದು ಸೇರು ಹಸಿ ಕಾಯಿ ಹಾಗೂ ಹುರಿದ ಕಡಲೆ ಕಾಯಿ 30-40 ರೂ. ಇದೆ. ರಸ್ತೆಯ ಎಡ ಮತ್ತು ಬಲ ಬದಿಗಳಲ್ಲಿ ಬಹುತೇಕ ಮಳಿಗೆಗಳಲ್ಲಿ ಹಸಿಯ ಹಾಗೂ ಹುರಿದ ಕಡಲೆಕಾಯಿ ರಾಶಿ ಹಾಕಿದ್ದರೆ, ಮತ್ತೆ ಕೆಲವು ಮಳಿಗೆಗಳಲ್ಲಿ ಮಾರಾಟಗಾರರು ಅಲ್ಲಿಯೇ ಗ್ಯಾಸ್‌ ಸ್ಟೌವ್‌ ಹಚ್ಚಿಕೊಂಡು ಹುರಿದ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ ಕಡ್ಲೆಪುರಿ, ಬೆಂಡು-ಬತ್ತಾಸು, ಮಿಠಾಯಿ ಮಳಿಗೆಗಳೂ ಕಳೆಗಟ್ಟಿವೆ. ಮಕ್ಕಳ ಆಟಿಕೆ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಪ್ರತಿ ವರ್ಷದಂತೆ ಕಡಲೆಕಾಯಿ ಪರಿಷೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಈ ಬಾರಿ ಪ್ಲ ಸ್ಟಿಕ್‌ ನಿಷೇಧ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.  -ಕಟ್ಟೆ ಸತ್ಯನಾರಾಯಣ, ಪಾಲಿಕೆ ಸದಸ್ಯ

Advertisement

ಸೋಮವಾರ ಅಧಿಕೃತ ಚಾಲನೆ:  ನ. 25ರಂದು ಬೆಳಗ್ಗೆ 9.30ಕ್ಕೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಉಪಮುಖ್ಯಮಂತ್ರಿ ಡಾ.ಸಿ.ಎಸ್‌. ಅಶ್ವತ್ಥ ನಾರಾಯಣ್‌, ಸಚಿವ ಆರ್‌. ಅಶೋಕ, ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ. 25 ಮತ್ತು 26ರಂದು ಸಂಜೆ 6ರಿಂದ 10 ಗಂಟೆವರೆಗೆ ದೊಡ್ಡಗಣಪತಿ ದೇವಸ್ಥಾನದ ಬಳಿ ಇರುವ ಉದ್ಯಾನದಲ್ಲಿ ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿವೆ. ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ನೀಡಲಿದ್ದಾರೆ.

 

ಪೊಲೀಸ್‌ ಬಿಗಿ ಭದ್ರತೆ: ಪರಿಷೆಗೆ ಲಕ್ಷಾಂತರ ಜನರು ಭೇಟಿ ನೀಡಲಿದ್ದು, ಪೊಲೀಸ್‌ ಇಲಾಖೆ ಬಿಗಿ ಭದ್ರತೆ ನೀಡಿದೆ. ಇಬ್ಬರು ಎಸಿಪಿ, 8 ಮಂದಿ ಇನ್‌ಸ್ಪೆಕ್ಟರ್‌, 12 ಮಂದಿ ಪಿಎಸ್‌ಐ, ಒಂದು ಕೆಎಸ್‌ಆರ್‌ಪಿ ತುಕಡಿ, 250 ಮಂದಿ ಗೃಹರಕ್ಷಕರು ಸೇರಿದಂತೆ ಮೂರು ಪಾಳಿಯದಲ್ಲಿ 300 ಪೊಲೀಸರು ಭದ್ರತೆ ನೀಡಲಿದ್ದಾರೆ. ಪರಿಷೆ ಸುತ್ತಲು 12 ಸಿಸಿ ಟಿವಿ ಅಳವಡಿಸಿದ್ದು, ಒಂದು ಕಂಟ್ರೋಲ್‌ ರೂಮ್‌ ತೆರೆಯಲಾಗಿದೆ. ಭದ್ರತೆ ದೃಷ್ಟಿಯಿಂದ ಒಂದು ಕಡೆ ಚೆಕ್‌ ಪಾಯಿಂಟ್‌, ಧ್ವನಿವರ್ಧಕ ಅಳವಡಿಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next