Advertisement
ಬೆಸ್ಕಾಂ ಸೇರಿ ಎಲ್ಲ ಐದು ಎಸ್ಕಾಂಗಳು ಪ್ರತಿ ಯೂನಿಟ್ ದರ ಸರಾಸರಿ 1.20 ರೂ. (ಶೇ.17.37) ಹೆಚ್ಚಳಕ್ಕೆ ಸಲ್ಲಿಸಿದ್ದ ಪ್ರಸ್ತಾವಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸರಾಸರಿ 33 ಪೈಸೆ (ಶೇ. 4.8) ಏರಿಕೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಕಳೆದ ವರ್ಷ ಪ್ರತಿ ಯೂನಿಟ್ ದರ 34 ಪೈಸೆ ಹೆಚ್ಚಳವಾಗಿತ್ತು.
Related Articles
Advertisement
ಹಾಗೆಯೇ ಏಕಸ್ ವಿಶೇಷ ಆರ್ಥಿಕ ವಲಯಕ್ಕೆ 2020, 2021, 2022ಕ್ಕೆ ಕ್ರಮವಾಗಿ 19.25 ಕೋಟಿ ರೂ., 21.86 ಕೋಟಿ ರೂ. ಹಾಗೂ 23.89 ಕೋಟಿ ರೂ. ವಾರ್ಷಿಕ ಕಂದಾಯ ಬೇಡಿಕೆಯನ್ನೂ ಆಯೋಗ ತೀರ್ಮಾನಿಸಿದೆ. ಏಕಸ್ ವಿಶೇಷ ಆರ್ಥಿಕ ವಲಯದ ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 6.80 ರೂ.ನಂತೆ ಪರಿಷ್ಕೃತ ಚಿಲ್ಲರೆ ವಿದ್ಯುತ್ ದರ ನಿಗದಿಪಡಿಸಿದೆ ಎಂದು ಅವರು ತಿಳಿಸಿದರು.
ಒಂದು ಲಕ್ಷ ರೂ.ವರೆಗೆ ದಂಡ: ಗ್ರಾಹಕರ ಸಮಸ್ಯೆಯನ್ನು ಕಾಲಮಿತಿಯೊಳಗೆ ಪರಿಹರಿಸಬೇಕು ಎಂದು ಸೂಚನೆಯನ್ನು ಈ ಬಾರಿಯ ಆದೇಶದಲ್ಲೂ ಆಯೋಗ ಪುನರುಚ್ಚರಿಸಿದೆ. ಪ್ರತಿ ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕ ಸಂಪರ್ಕ ಸಭೆಗಳನ್ನು ಸಂಬಂಧಪಟ್ಟ ಅಧೀಕ್ಷಕ ಎಂಜಿನಿಯರ್ ಇಲ್ಲವೇ ಕಾರ್ಯಪಾಲಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು. ಇಲ್ಲದಿದ್ದರೆ ಪ್ರತಿ ಉಪವಿಭಾಗಕ್ಕೂ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಿ, ಸಂಬಂಧಪಟ್ಟ ಅಧಿಕಾರಿಯಿಂದ ದಂಡ ವಸೂಲಿ ಮಾಡಲಾಗುವುದು ಎಂದು ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ಮೀನಾ ಹೇಳಿದರು.
ಕೈಗಾರಿಕೆ ಬಳಕೆ ವಿದ್ಯುತ್ ದರ ಏರಿಕೆ: ರಾಜ್ಯದ ಎಲ್ಲ ಲೋ ಟೆನ್ಷನ್ (ಎಲ್.ಟಿ) ಕೈಗಾರಿಕಾ ಬಳಕೆದಾರರಿಗೆ ಅನ್ವಯವಾಗುವ ವಿದ್ಯುತ್ ದರವೂ ಪ್ರತಿ ಯೂನಿಟ್‌ಗೆ 15 ಪೈಸೆಯಿಂದ 20 ಪೈಸೆವರೆಗೆ ಏರಿಕೆಯಾಗಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಮತ್ತು ಇತರೆ ಪುರಸಭೆ ಪ್ರದೇಶ ಹಾಗೂ ಬೆಸ್ಕಾಂ ವ್ಯಾಪ್ತಿಯ ಇತರೆ ಪ್ರದೇಶಗಳಲ್ಲಿ ಎಲ್.ಟಿ. ಕೈಗಾರಿಕಾ ಬಳಕೆ ದರ ಸ್ಲಾಬ್ ಆಧಾರಿತವಾಗಿ 15 ಪೈಸೆ ಹಾಗೂ 20 ಪೈಸೆ ಹೆಚ್ಚಳವಾಗಿದೆ.
ಇತರೆ ಎಸ್ಕಾಂ ವ್ಯಾಪ್ತಿಯ ಪುರಸಭೆ ಪ್ರದೇಶಗಳು ಹಾಗೂ ಇತರೆ ಎಲ್ಲ ಪ್ರದೇಶಗಳಲ್ಲೂ ಸ್ಲಾಬ್ ಆಧಾರಿತವಾಗಿ 15 ಪೈಸೆ, 20 ಪೈಸೆ ಏರಿಕೆ ಮಾಡಲಾಗಿದೆ.ರಾಜ್ಯದ ಎಲ್ಲ ಎಚ್.ಟಿ. ಕೈಗಾರಿಕಾ ಬಳಕೆ ವಿದ್ಯುತ್ ದರ ಕೂಡ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 25 ಪೈಸೆ ಏರಿಕೆ ಮಾಡಲಾಗಿದೆ. ಎಲ್.ಟಿ. ವ್ಯಾಪ್ತಿಗೆ ಬರುವ ಖಾಸಗಿ ವಿದ್ಯಾಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಬಳಸುವ ವಿದ್ಯುತ್ ದರವೂ 20 ಪೈಸೆ ಹೆಚ್ಚಳವಾಗಿದೆ.
ನೀರು ಸರಬರಾಜು ವಿದ್ಯುತ್ ದರವೂ ಹೆಚ್ಚಳ: ಕುಡಿಯುವ ನೀರು ಸರಬರಾಜು ಮಾಡುವ ಎಲ್.ಟಿ. ಸ್ಥಾವರಗಳಲ್ಲಿ ಬಳಸಲಾಗುವ ಪ್ರತಿ ಯೂನಿಟ್ ದರ 4.40 ರೂ.ನಿಂದ 4.60ರೂ.ಗೆ ಏರಿಕೆಯಾಗಿದ್ದು, 20 ಪೈಸೆ ಹೆಚ್ಚಳವಾಗಿದೆ. ಕುಡಿಯುವ ನೀರು ಸರಬರಾಜು ಮಾಡುವ ಎಚ್.ಟಿ. ಸ್ಥಾವರ ವಿದ್ಯುತ್ ದರವೂ 5 ರೂ.ನಿಂದ 5.20 ರೂ.ಗೆ ಏರಿಕೆಯಾಗಿದ್ದ 20 ಪೈಸೆ ಹೆಚ್ಚಳವಾಗಿದೆ.
ಸರ್ಕಾರದಿಂದ ಸಬ್ಸಿಡಿ: ಕೃಷಿ ಚಟುವಟಿಕೆಗೆ 10 ಎಚ್.ಪಿ.ವರೆಗಿನ ಸಾಮರ್ಥಯದ 28.40 ಲಕ್ಷ ಪಂಪ್‌ಸೆಟ್ ಹಾಗೂ 28.19 ಲಕ್ಷ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ 2018-19ನೇ ಸಾಲಿನಲ್ಲಿ ಸರ್ಕಾರ ನೀಡಬೇಕಾದ ಸಹಾಯಧನ ಮೊತ್ತ 11,048 ಕೋಟಿ ರೂ.ಗೆ ಪ್ರತಿಯಾಗಿ 2019-2020ನೇ ಸಾಲಿನಲ್ಲಿ 11,892.45 ಕೋಟಿ ರೂ. ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ವಿದ್ಯುತ್ ದರ ಏರಿಕೆ ಲೆಕ್ಕ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ ವಿದ್ಯುತ್ ದರ ಸರಾಸರಿ 33 ಪೈಸೆ ಹೆಚ್ಚಳಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ವಿದ್ಯುತ್ ದರ ವ್ಯವಸ್ಥೆಯಲ್ಲಿ ಗ್ರಾಹಕರಿಂದ ಸಂಗ್ರಹಿಸುವ ನಿಗದಿತ ಶುಲ್ಕವು ಎಸ್ಕಾಂಗಳು ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸೊಸೈಟಿ (ಎಚ್‌ಆರ್‌ಇಸಿಎಸ್)ನ ವಾಸ್ತವ ನಿಗದಿತ ವೆಚ್ಚಕ್ಕೆ ಸಮನಾಗಿಲ್ಲ. ನಿಗದಿತ ಖರ್ಚಿನ ಒಂದು ಭಾಗವನ್ನಷ್ಟೇ ನಿಗದಿತ ಶುಲ್ಕವೆಂದು ಸಂಗ್ರಹಿಸಲಾಗುತ್ತಿದೆ. ನಿಗದಿತ ಖರ್ಚಿನಲ್ಲಿ ಶೇ. 24.70ರಷ್ಟು ಮಾತ್ರ ಸಂಗ್ರಹವಾಗುತ್ತಿದ್ದು, ಉಳಿದ ನಿಗದಿತ ವೆಚ್ಚವನ್ನು ವಿದ್ಯುತ್ ಶುಲ್ಕದ ಮೂಲಕ ಸಂಗ್ರಹಿಸಲಾಗುತ್ತಿದೆ.
ಎಲ್ಲ ಎಸ್ಕಾಂಗಳ ಒಟ್ಟು ಯೋಜಿತ ಹಾಲಿ ಆದಾಯಕ್ಕೆ ಹೋಲಿಸಿದರೆ 7217 ಕೋಟಿ ರೂ. ಕೊರತೆ ಇರುವುದು ಕಾಣುತ್ತಿದೆ. ಆದರೆ ನಿಯಮಾನುಸಾರ 1960 ಕೋಟಿ ರೂ.ನಷ್ಟು ಕೊರತೆ ತುಂಬಲಷ್ಟೇ ಅವಕಾಶವಿದೆ. ಆ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 33 ಪೈಸೆ ಹೆಚ್ಚಳ ಮಾಡಿದ್ದು, ಇದರಲ್ಲಿ 22 ಪೈಸೆ ವಿದ್ಯುತ್ ಶುಲ್ಕದಂತೆ ಸಂಗ್ರಹವಾದರೆ ಉಳಿದ 11 ಪೈಸೆ ನಿಗದಿತ ಶುಲ್ಕ ರೂಪದಲ್ಲಿ ಸಂಗ್ರಹವಾಗಲಿದೆ. ಹಾಗಾಗಿ ನೀರಾವರಿ ಪಂಪ್‌ಸೆಟ್ ಸಂಪರ್ಕ ಹೊರತುಪಡಿಸಿ ಉಳಿದ ಸಂಪರ್ಕಗಳಿಗೆ ನಿಗದಿತ ಶುಲ್ಕವನ್ನು ಪ್ರತಿ ಕೆ.ವಿ, ಎಚ್.ಪಿ., ಕೆ.ವಿ.ಎ.ಗೆ 5 ರೂ.ನಿಂದ 10 ರೂ.ವರೆಗೆ ಏರಿಕೆಯಾಗಲಿದೆ.