ಒಂದು ಊರಿನಲ್ಲಿ ಸುರೇಶ- ಸುಧಾ ಎಂಬ ದಂಪತಿ ಇದ್ದರು. ಅವರಿಗೆ ಒಂದು ಸುಂದರವಾದ ತೋಟವಿತ್ತು. ಅಲ್ಲಿ ಅವರು ಮನೆ ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆ ಒಂದು ಮುದ್ದಾದ ಹೆಣ್ಣು ಮಗುವಿತ್ತು. ಅವಳ ಹೆಸರು ಸವಿತಾ. ಸುರೇಶ – ಸುಧಾ ದಂಪತಿ ತಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ, ಆಕಳು, ಎಮ್ಮೆ ಇನ್ನಿತರೆ ಸಾಕುಪ್ರಾಣಿಗಳನ್ನು ಸಾಕಿದ್ದರು. ಸವಿತಾಳಿಗೆ ಪ್ರಾಣಿ- ಪಕ್ಷಿಗಳನ್ನು ಕಂಡರೆ ತುಂಬಾ ಪ್ರೀತಿ. ಅವಳು ಅವುಗಳೊಂದಿಗೆ ಪ್ರೀತಿಯಿಂದ ಆಟವಾಡುತ್ತಿದ್ದಳು.
ಒಂದು ದಿನ ಸವಿತಾ ಪುಟ್ಟಿ ಶಾಲೆಯಿಂದ ಮರಳುವಾಗ ದಾರಿಯಲ್ಲಿ ನವಿಲೊಂದನ್ನು ಕಂಡಳು. ಅದು ಬೇಟೆಗಾರನಿಂದ ತಪ್ಪಿಸಿಕೊಂಡು ನಡುಗುತ್ತಾ ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಮೈಮೇಲೆ ಗಾಯಗಳಾಗಿದ್ದವು. ಸವಿತಾಳಿಗೆ ಅದರ ಮೇಲೆ ಕರುಣೆ ಬಂದು ಅದನ್ನು ಹಿಡಿದುಕೊಂಡು ಮನೆಗೆ ತಂದಳು. ಸವಿತಾಳ ಅಮ್ಮ ಸುಧಾ ಅದನ್ನು ನೋಡಿ ಒಳ್ಳೆಯ ಕೆಲಸ ಮಾಡಿದೆ ಎಂದು ಬೆನ್ನು ತಟ್ಟಿದಳು.
ಅಮ್ಮ ಔಷಧಿ ಸಸ್ಯವೊಂದನ್ನು ತಂದು, ಕುಟ್ಟಿ ಅದರ ರಸವನ್ನು ನವಿಲಿನ ಗಾಯಕ್ಕೆ ಸವರಿದರು. ಸವಿತಾ ಪುಟ್ಟಿ ಸಾಯಂಕಾಲ ಅದಕ್ಕೆ ತಿನ್ನಲು ತುಪ್ಪದ ಅನ್ನವನ್ನು ಕೊಟ್ಟಳು. ಅದನ್ನು ತಿಂದ ನವಿಲು ಆ ರಾತ್ರಿ ವಿಶ್ರಾಂತಿ ಪಡೆಯಿತು. ಒಂದೆರಡು ದಿನಗಳು ಕಾಲ ಅವರ ಮನೆಯಲ್ಲಿ ಇದ್ದು ಶುಶ್ರೂಷೆ ಪಡೆದ ನಂತರ ನವಿಲು ಚೇತರಿಸಿಕೊಂಡಿತು. ನಂತರ ಸವಿತಾ ಪುಟ್ಟಿ ಅದನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬಂದಳು. ನವಿಲು ಬಹಳ ಹೊತ್ತು ಪ್ರೀತಿಯಿಂದ ಪುಟ್ಟಿಯನ್ನೇ ನೋಡುತ್ತಿತ್ತು.
ಇದಾದ ಕೆಲ ದಿನಗಳ ನಂತರ ಎಂದಿನಂತೆ ಶಾಲೆಗೆ ಹೋಗುತ್ತಿರುವಾಗ ಸವಿತಾ ಪುಟ್ಟಿ ಹಾವೊಂದನ್ನು ತುಳಿದುಬಿಟ್ಟಳು. ಹಾವು ಪುಟ್ಟಿಯನ್ನು ಅಟ್ಟಿಸಿಕೊಂಡು ಬರುತ್ತಿದ್ದಂತೆ ಅವಳು ಓಡತೊಡಗಿದಳು. ಇನ್ನೇನು ಹಾವು ಪುಟ್ಟಿಯ ಬಳಿ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಅದೆಲ್ಲಿಂದಲೋ ನವಿಲು ಹಾರಿಬಂದಿತು. ಸವಿತಾ ಪುಟ್ಟಿಯನ್ನು ಕಚ್ಚಲು ಬರುತ್ತಿದ್ದ ಹಾವನ್ನು ನವಿಲು ಕುಕ್ಕಿ ಕುಕ್ಕಿ ಎತ್ತಿ ದೂರಕೆ ಬಿಸಾಕಿತು. ಸವಿತಾಳ ಉಪಕಾರವನ್ನು ನವಿಲು ತೀರಿಸಿತ್ತು. ಸವಿತಾ ನವಿಲನ್ನು ಅಪ್ಪಿಕೊಂಡು ಮುದ್ದಾಡಿದಳು.
– ವೆಂಕಿ