ಇತ್ತೀಚೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲೊಂದು ವಿಶಿಷ್ಟ ರಂಗ ಪ್ರಯೋಗ ನೆರೆದ ಶ್ರೋತೃವರ್ಗಕ್ಕೆ ವಿಶೇಷಾನುಭವ ನೀಡಿತು. ಕಳೆದ ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲದಿಂದ ವಿಭಿನ್ನ ರಂಗ ಪ್ರಯೋಗಗಳ ಮೂಲಕ ಉಡುಪಿಯ ಸಾಂಸ್ಕೃತಿಕ ವಲಯಕ್ಕೆ ಅಪೂರ್ವ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಸಮೂಹವು ಉಡುಪಿ ಅಮ್ಮುಂಜೆಯ ಗುರು ವಿ| ಭವಾನಿ ಶಂಕರ್ ಅವರ ಶ್ರೀ ಭ್ರಾಮರಿ ನಾಟ್ಯಾಲಯದ ಸಹಯೋಗದೊಂದಿಗೆ ಮಯೂರ ಧ್ವಜ ನೃತ್ಯ ರೂಪಕವನ್ನು ಅನಾವರಣಗೊಳಿಸಿತ್ತು. ಜೈಮಿನಿ ಭಾರತವೆಂದೇ ಪ್ರಚಲಿತದಲ್ಲಿರುವ ಕವಿ ಲಕ್ಷ್ಮೀಶ ರಚಿಸಿದ ಮೂಲ ಮಹಾಭಾರತ ಷಟ³ದಿ ಕಾವ್ಯದಿಂದ ಕಥಾವಸ್ತುವನ್ನು ಆರಿಸಿಕೊಂಡ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯರು, ತನ್ನ ಪ್ರಯೋಗದ ಮೊದಲ ಪ್ರಯತ್ನದಲ್ಲೇ ಸಾರ್ಥಕ್ಯವನ್ನು ಕಂಡರು ಎಂದರೆ ಅತಿಶಯೋಕ್ತಿಯಾಗಲಾರದು.
ಯಕ್ಷಗಾನದಲ್ಲಿ ಮಯೂರ ಧ್ವಜ ಆಖ್ಯಾನವನ್ನು ಆಸ್ವಾದಿಸಿ, ಅದಕ್ಕೆ ಒಗ್ಗಿಕೊಂಡ ಪ್ರೇಕ್ಷಕವರ್ಗವನ್ನು ಅದರಿಂದಾಚೆಗೆ ಸೆಳೆದು ಶಾಸ್ತ್ರೀಯ ನೃತ್ಯ ಚೌಕಟ್ಟಿನ ಭಾವಪೂರ್ಣ ಅಭಿವ್ಯಕ್ತಿಯ ಕಥಾನಿರೂಪಣೆಯ ನೃತ್ಯರೂಪಕದತ್ತ ಕರೆತರುವುದು ಸಾಹಸವೇ ಸರಿ. ಅಂತಹ ಸಾಹಸದಲ್ಲಿ ರಂಗ ನಿರ್ದೇಶಕರು, ನೃತ್ಯ ನಿರ್ದೇಶಕರು, ಸಾಮೂಹಿಕವಾಗಿ ಎಲ್ಲ ಕಲಾವಿದರು ಮೊದಲ ಪ್ರಯತ್ನದಲ್ಲೇ ಗರಿಷ್ಠ ಸಾಧನೆ ಮಾಡಿದ್ದಾರೆ.
ಮೂಲತಃ ಮನಮುಟ್ಟುವಂತೆ ಸಾಗುವ ಕಥಾನಕವನ್ನು ರಂಗನಿರ್ದೇಶಕರು ಮೂಲ ಅಂತಃಸತ್ವಕ್ಕೆ ಧಕ್ಕೆಯಾಗದಂತೆ ರಂಗ ಪ್ರಯೋಗಕ್ಕಾಗಿಯೇ ಸಿದ್ಧಪಡಿಸಿದ ರಂಗ ಕೃತಿ ಮತ್ತು ರಂಗಪ್ರಸ್ತುತಿಯಿಂದ ಇನ್ನಷ್ಟು ಪರಿಣಾಮಕಾರಿಯಾಗಿಸಿದ್ದಾರೆ. ಕಥೆಯಲ್ಲಿ ಬರುವ ಪುರಾಣದ ರೂಪಕಗಳಾದ ಸೈನಿಕರು, ಕುದುರೆಗಳನ್ನು ನೃತ್ಯಕಲಾವಿದರು ಅರ್ಥಪೂರ್ಣವಾಗಿ ಅಭಿವ್ಯಕ್ತಪಡಿಸಿರುವುದು ರೂಪಕದ ಹೆಚ್ಚುಗಾರಿಕೆ. ಸೂತ್ರಧಾರನಾಗಿ ಕಥೆಯ ಹಂದರವನ್ನು ಹೆಣೆಯುತ್ತಾ, ಕಥಾನಾಯಕನಾಗಿಯೂ ಅಭಿನಯದಲ್ಲಿ ಸ್ವತಃ ಮಯೂರಧ್ವಜನೇ ತೋರಿಬರುವುದು ರೂಪಕದ ವಿಶೇಷತೆ.
ಬಂಧುಹತ್ಯಾ ದೋಷದ ಪ್ರಾಯಶ್ಚಿತ್ತಕ್ಕಾಗಿ ಪಾಂಡವರಿಂದ ಅಶ್ವಮೇಧ ಯಾಗದ ಸಂಕಲ್ಪ, ದಿಗ್ವಿಜಯಕ್ಕೆ ಹೊರಟ ಪಾಂಡವ ಸೈನ್ಯ, ಮಣಿಪುರದ ರಾಜಪುತ್ರ ತಾಮ್ರಧ್ವಜನ ನೇತೃತ್ವದಲ್ಲಿ ಹೊರಟ ಮಯೂರಧ್ವಜನ ಎಂಟನೆಯ ಅಶ್ವಮೇಧ ಯಾಗದ ಕುದುರೆ, ಅದಕ್ಕೆ ಎದುರಾಗಿ ಬಂದ ಪಾಂಡವರ ಅಶ್ವಮೇಧದ ಕುದುರೆ, ರಾಜಪುತ್ರನ ವೀರಾವೇಶದ ಪ್ರತಿಭಟನೆ, ಪಾಂಡವರ ಕುದುರೆಯನ್ನು ಹಿಡಿದು ತಂದು ತಂದೆ ಮಯೂರಧ್ವಜನ ಸಮ್ಮುಖದಲ್ಲಿ ನಿಲ್ಲಿಸಿದ ಪರಿ, ಬಂಧನಕ್ಕೊಳಗಾದ ಕೃಷ್ಣಾರ್ಜುನರು ತಪ್ಪಿಸಿಕೊಂಡು ಮಾಯಾವೇಷದಿಂದ ಬ್ರಾಹ್ಮಣರಾಗಿ ಭಕ್ತ ಮಯೂರಧ್ವಜನಲ್ಲಿ ತಮ್ಮ ಸಂಕಷ್ಟಗಳನ್ನು ನಿವೇದಿಸಿಕೊಳ್ಳುವುದು, ಸಿಂಹದ ಬಾಯಿಯಿಂದ ಮಗನ ರಕ್ಷಣೆಗೆ ದೊರೆಯಲ್ಲಿ ಮೊರೆ, ಮಗನ ವಿಮೋಚನೆಗೆ ಮಯೂರ ಧ್ವಜನ ಅರ್ಧ ದೇಹಕ್ಕಾಗಿ ಬೇಡಿಕೆ, ಮಾರುವೇಷದ ಭಗವಂತನಿಂದ ಮಯೂರಧ್ವಜನ ದೇಹ ಛೇದನದ ಪರೀಕ್ಷೆ, ಮಯೂರಧ್ವಜನ ಭಕ್ತಿಯ ಪರಾಕಾಷ್ಠೆಗೆ ಮಾರುಹೋದ ಶ್ರೀಕೃಷ್ಣ, ಶ್ರೀಕೃಷ್ಣಾನುಗ್ರಹ ಈ ಎಲ್ಲ ಭಾಗಗಳನ್ನು ನೃತ್ಯ ವಿಸ್ತಾರದಲ್ಲಿ ಮನೋಜ್ಞವಾಗಿ ಪ್ರಸ್ತುತಪಡಿಸಿದ ರೀತಿ ಶ್ರೋತೃವರ್ಗವನ್ನು ಮಂತ್ರಮುಗ್ಧ ಗೊಳಿಸಿತ್ತು. ಸವಿಗೆ ಸವಿ ಸೇರಿದಂತೆ, ಭಕ್ತಿಗೆ ಮಯೂರ ಧ್ವಜನ ಭಕ್ತಿಯೂ ಸೇರುವುದನ್ನು ಅಭಿವ್ಯಕ್ತಪಡಿಸಿದ ರೀತಿ ಸೊಗಸಾಗಿತ್ತು. ನೃತ್ಯದ ಚೌಕಟ್ಟಿನೊಳಗೆ ಸಾಗಿ ಬಂದ ರೂಪಕದಲ್ಲಿ ಕಥೆಯ ಅಂತರಾಳವನ್ನು ತಳಸ್ಪರ್ಶಿಯಾಗಿ ಚಿತ್ರಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಉದ್ಯಾವರ ಮಾಧವ ಆಚಾರ್ಯರು ಹೊರಹೊಮ್ಮಿಸಿದ ಭಾವಪೂರ್ಣ ಮಾತುಗಳು, ಭಾವುಕವಾದ ಉದ್ಘೋಷಗಳು ರೂಪಕವನ್ನು ಅರ್ಥೈಸಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದವು.
ಮಯೂರಧ್ವಜನಾಗಿ ಗುರು ವಿ| ಭವಾನಿ ಶಂಕರ ಅವರ ಪ್ರಬುದ್ಧ ರಸಾಭಿವ್ಯಕ್ತಿ ರೂಪಕದ ಘನತೆಯನ್ನು ಹೆಚ್ಚಿಸಿತ್ತು. ಅವರ ಭಾÅಮರಿ ನಾಟ್ಯಾಲಯ ವಿದ್ಯಾರ್ಥಿಗಳ ಸಮೂಹ ಒಡನಾಟದ ಪಾತ್ರ ನಿರ್ವಹಣೆ ಪೂರಕವಾಗಿತ್ತು. ನೃತ್ಯ ನಿರ್ದೇಶಕಿ, ಮಂಗಳೂರಿನ ಗುರು ನಾದನೃತ್ಯದ ವಿ| ಭ್ರಮರಿ ಶಿವಪ್ರಕಾಶ್ ಅವರ ಖಚಿತವಾದ ನಟುವಾಂಗ, ಸಮರ್ಥ ನೃತ್ಯ ನಿರ್ದೇಶನಕ್ಕೆ ರಂಗ ಚಲನೆಯ ಲವಲವಿಕೆಯು ಸಾಕ್ಷಿ ಯಾಗಿತ್ತು. ವಿ| ವಿನುತಾ ಆಚಾರ್ಯ ಹಾಡುಗಾರಿಕೆಯಿಂದ ವಿಶೇಷ ಕಳೆ ನೀಡಿದರು. ಮೃದಂಗ ವಾದನದಲ್ಲಿ ವಿ| ದೇವೇಶ ಭಟ್, ತಬಲಾ ಸಾಥ್‌ನಲ್ಲಿ ವಿ| ಮಾಧವ ಆಚಾರ್ಯ, ಪಿಟೀಲಿನಲ್ಲಿ ವಿ| ಶರ್ಮಿಳಾ ರಾವ್, ಕೊಳಲು ವಾದನದಲ್ಲಿ ಮಾ| ಚೇತನ್ ಮತ್ತು ವಸ್ತ್ರಾಲಂಕಾರದಲ್ಲಿ ಬಾಷಾ ಆರ್ಟ್ಸ್ ಅವರ ಪರಿಪೂರ್ಣ ಸಹಕಾರ ಒಟ್ಟಂದದಲ್ಲಿ ರೂಪಕದ ಪ್ರಸ್ತುತಿಯ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸಿತ್ತು.
ಸುಬ್ರಹ್ಮಣ್ಯ ಬಾಸ್ರಿ ಕೆ. ಎಸ್.