ಲಿಂಗಸುಗೂರು: ತಾಲೂಕಿನಲ್ಲಿ ಆರು ಮತಗಟ್ಟೆಗಳಲ್ಲಿ ಶುಕ್ರವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದೆ.
ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿ, ತಾಲೂಕಿನ ಗುರುಗುಂಟಾ, ಹಟ್ಟಿ, ಮುದಗಲ್, ಮಸ್ಕಿ, ನಾಗರಹಾಳನಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿದೆ. ಲಿಂಗಸುಗೂರು 839, ಗುರುಗುಂಟಾ 126, ಹಟ್ಟಿ ಕ್ಯಾಂಪ್ 394, ಮುದಗಲ್ 260, ಮಸ್ಕಿ 471, ನಾಗರಹಾಳ 85 ಸೇರಿ ಒಟ್ಟು 2175 ಮತದಾರರಿದ್ದಾರೆ. ಇದರಲ್ಲಿ 1654 ಪುರುಷರ, 521 ಮಹಿಳಾ ಮತದಾರರಿದ್ದಾರೆ.
ಬೆಳಗ್ಗೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಮಳೆ ಸುರಿಯುತ್ತಿದ್ದರಿಂದ ಮತದಾನ ಮಂದಗತಿಯಲ್ಲಿ ಸಾಗಿತ್ತು. ಮಳೆ ನಿಂತ ಮೇಲೆ ಸ್ವಲ್ಪ ಚುರುಕು ಕಂಡುಬಂದಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತಗಟ್ಟೆ ಸುತ್ತಮುತ್ತ ಅಲ್ಲಲ್ಲಿ ಜಮಾವಣೆಗೊಂಡಿದ್ದರು.
ಮಳೆ ಸುರಿಯುತ್ತಿದ್ದರಿಂದ ಬೆಳಗ್ಗೆ 11ಗಂಟೆಯಿಂದ ಮ. 1ಗಂಟೆವರೆಗೆ ಪಟ್ಟಣದಲ್ಲಿ ವಿದ್ಯುತ್ ಕಡಿತವಾಗಿತ್ತು. ಪಟ್ಟಣದ ಹಳಯ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿನ ಮತಗಟ್ಟೆ ಕೇಂದ್ರದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದೇ ಕತ್ತಲಲ್ಲಿ ಮತದಾನ ನಡೆಸಲಾಗಿದೆ. ಮತಗಟ್ಟೆ ಕೇಂದ್ರ ಅಧಿಕಾರಿಗಳು ತಮ್ಮ ಮೊಬೈಲ್‌ನಲ್ಲಿ ಟಾರ್ಚ್ ಹಾಕಿ ಮತದಾನ ಪ್ರಕ್ರಿಯೆ ನಡೆಸಿದರು. ಇದರಿಂದ ಮತದಾರರಲ್ಲಿ ಕೆಲಹೊತ್ತು ಗೊಂದಲ ಉಂಟಾಗಿತ್ತು.
ಪಟ್ಟಣದ ಮತಗಟ್ಟೆ ಕೇಂದ್ರದಲ್ಲಿ ಕನಿಷ್ಠ ಬೆಳಕಿನ ವ್ಯವಸ್ಥೆ ಮಾಡದೇ ಕತ್ತಲಲ್ಲಿ ಮತದಾನ ಮಾಡುವ ಸ್ಥಿತಿ ನಿರ್ಮಾಣ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಒತ್ತಾಯಿಸಿದ್ದಾರೆ.