ಗುತ್ತಲ: ಮಳೆಯ ಅಬ್ಬರ ನಿಂತಿದ್ದು, ತುಂಗಭದ್ರಾ ನದಿ ಇಳಿಕೆಯತ್ತ ಸಾಗಿದೆ. ಆದರೆ, ವರದೆಯ ಅಬ್ಬರಕ್ಕೆ ಶನಿವಾರ ರಾತ್ರಿಯಿಂದ ರವಿವಾರ ಸಂಜೆಯವರೆಗೂ ಅನೇಕ ಜಮೀನುಗಳು ಜಲಾವೃತವಾದ ಪರಿಣಾಮ ಬೆಳೆ ಸಂಪೂರ್ಣ ಹಾನಿಯಾಗಿದೆ.
ಶನಿವಾರ ರಾತ್ರಿಯಿಂದಲೇ ತುಂಗಭದ್ರಾ ನದಿ ನೀರಿನ ಮಟ್ಟ ನಿಧನಾನವಾಗಿ ಇಳಿಯುತ್ತಿದ್ದು, ಶನಿವಾರ 8 ಮೀಟರ್ ಇದ್ದ ನೀರಿನ ಮಟ್ಟ ರವಿವಾರ ಸಂಜೆ 7.39 ಮೀ.ಗೆ ತಲುಪಿದೆ. ಚೌಡಯ್ಯದಾನಪುರ- ಕಂಚಾರಗಟ್ಟಿ ರಸ್ತೆ ಸಂಚಾರ ಬಂದ್ ಆಗಿದ್ದರೂ ಸರಕು ಸಾಗಿಸುವ ಬೊಲೇರೋ ವಾಹನವೊಂದು ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೇ ರಸ್ತೆ ದಾಟಲು ಹೋಗಿ ನೀರಿನ ಮಧ್ಯೆ ಸಿಲುಕಿ ಚಾಲಕ ತೀವ್ರವಾಗಿ ಪರದಾಡಿದ ಘಟನೆ ರವಿವಾರ ಜರುಗಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ತುಂಗಭದ್ರಾ ನದಿಯ ಅಬ್ಬರ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಜಲಾವೃತಗೊಂಡಿದ್ದ ಕಂಚಾರಗಟ್ಟಿ, ನರಶೀಪುರ, ಹರಳಹಳ್ಳಿ, ಹಾವನೂರ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿನ ನೀರು ಕಡಿಮೆಯಾಗುತ್ತಿದ್ದು ಬೆಳೆಗಳಿಗೆ ರೋಗ ಭೀತಿ ಎದುರಾಗಿದ್ದು, ಭೂಮಿ ಒಣಗುವವರೆಗೂ ಜಮೀನಿಗೆ ಕಾಲಿಡದ ಸ್ಥಿತಿ ಇದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ.
ಇನ್ನೂ, ವರದಾ ನದಿಯ ಅಬ್ಬರ ರವಿವಾರವೂ ಮುಂದೆವರೆದಿತ್ತು. ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯೊಂದಿಗೆ ಸಂಗಮವಾದ ಸ್ಥಳದ ಹಿಂಭಾಗದಲ್ಲಿ ಬರುವ ಗಳಗನಾಥ, ಬೆಳವಿಗಿ, ನೀರಲಗಿ, ಮರೋಳ, ಹಾಲಗಿ, ಮರಡೂರ, ಅಕ್ಕೂರ, ಹೊಸರಿತ್ತಿ, ಕಿತ್ತೂರ, ಟಾಟಾ ಮಣ್ಣೂರ ಕೆಸರಳ್ಳಿ, ಕೋಣನತಂಬಿಗಿ, ಹಂದಿಗನೂರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶ ವರದಾ ನದಿಯ ಪಾಲಾಗಿವೆ.
ಉಭಯ ನದಿಗಳ ಪ್ರವಾಹಕ್ಕೆ ಈಗಾಗಲೇ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮೆಟೋ, ಮುಳುಗಾಯಿ, ಸೌವತಿ, ರೇಷ್ಮೆ, ಶೇಂಗಾ, ಅಡಿಕೆ, ಪೇರಲ, ಚಿಕ್ಕು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿದೆ. ಬಹುತೇಕ ಬೆಳೆಗಳು ರೈತರ ಕೈಗೆ ಬಾರದ ಸ್ಥಿತಿ ಇದ್ದು, ತೋಟಗಾರಿಕೆಯ ಬೆಳೆಗಳಾದ ಟೊಮೆಟೋ, ಮುಳಗಾಯಿ, ಬೆಂಡಿ, ಮೆಣಸಿನಕಾಯಿ, ಬೆಂಡೆ, ಸೌತೆ, ಹಗಲಕಾಯಿ ಸೇರಿದಂತೆ ತರಕಾರಿ ಸೊಪ್ಪುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ, ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರವಿವಾರದವರೆಗೆ ಸುಮಾರು 7ರಿಂದ 8ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.