Advertisement

ಮಣಿಪುರದ ಹಿಂಸೆ ಖಂಡಿಸಿ ಕಾರವಾರದಲ್ಲಿ ಕ್ರೈಸ್ತರಿಂದ ಶಾಂತಿಯುತ ಮೆರವಣಿಗೆ

05:53 PM Jul 31, 2023 | Team Udayavani |

ಕಾರವಾರ: ಮಣಿಪುರದಲ್ಲಿ ಕಳೆದ ಮೇ ತಿಂಗಳಿಂದ ನಿರಂತರವಾಗಿ ಜನಾಂಗೀಯ ವೈಷಮ್ಯದ ಉರಿ ಖಂಡಿಸಿ ಕಾರವಾರ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದಿಂದ ಸೋಮವಾರ ಶಾಂತಿಯುತ ಪ್ರತಿಭಟನೆ ನಡೆಯಿತು.

Advertisement

ನಗರದ ಮಿತ್ರ ಸಮಾಜದಿಂದ ಹೊರಟ ಮೆರವಣಿಗೆ ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಇಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಫಾದರ್ ರೆಡಿಕ್ ಫರ್ನಾಂಡೀಸ್ ಮಾತನಾಡಿ ಮಣಿಪುರದಲ್ಲಿ ಅಮಾಯಕ ನಾಗಾ ಬುಡಕಟ್ಟು ಹಾಗೂ ಕುಕಿ ಸಮುದಾಯವನ್ನು ಗುರಿಯಾಗಿಸಿ ಕೊಂಡು ಹಿಂಸೆ‌ಮಾಡಲಾಗುತ್ತಿದೆ. ಗಲಭೆಯಿಂದ ಹಲವಾರು ಅಮಾಯಕರು ಕೊಲ್ಲಲ್ಪಟ್ಟಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.  ಕಾರವಾರ ಧರ್ಮಪ್ರಾಂತ್ಯ ದಿಂದ ಶಾಂತಿಯುತ ಮೆರಣಿಗೆ ಹಾಗೂ ರಾಷ್ಟ್ರಪತಿಗೆ ಮನವಿ ಅರ್ಪಿಸುವ ಉದ್ದೇಶ ಮಣಿಪುರದಲ್ಲಿ ಶಾಂತಿ ನೆಲಸಲಿ ಎಂಬುದೇ ಆಗಿದೆ ಎಂದರು.

ಸರ್ಕಾರಗಳು ಎಚ್ಚೆತ್ತು ಕೊಳ್ಳಬೇಕು. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ, ಸೂಕ್ತ ಮಾರ್ಗದರ್ಶನವನ್ನು ಸಂಬಂಧಿತರಿಗೆ ನೀಡಬೇಕು ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಸಾಲ್ವದೋರ್ ರೋಡ್ರಿಗೀಸ್ ಹೇಳಿದರು.

ಮಣಿಪುರದಲ್ಲಿ ದಂಗೆ ಆರಂಭವಾದ ದಿನದಿಂದ ಇಲ್ಲಿಯವರೆಗೆ ಸುಮಾರು 400ಕ್ಕೂ ಅಧಿಕ ಚರ್ಚ, ಪ್ರಾರ್ಥನಾ ಮಂದಿರಗಳನ್ನು ಕಿಡಿಗೇಡಿಗಳು, ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ನೂರಾರು ಸಹೋದರ, ಸಹೋದರಿಯರನ್ನು ಹತ್ಯೆ ಕೂಡ ಮಾಡಿದ್ದು, ಹೆಣ್ಣು ಮಕ್ಕಳು, ಸ್ತ್ರೀಯರ ಮೇಲೆ ಅತ್ಯಾಚಾರದ ಕೃತ್ಯ ನಿರಂತರವಾಗಿ ನಡೆಸುತ್ತಿದ್ದಾರೆ. ಓರ್ವ ಕಾರ್ಗಿಲ್ ಯೋಧನ ಪತ್ನಿ ಸೇರಿದಂತೆ ಇತರ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದಲ್ಲದೆ, ಅವರನ್ನು ಅಮಾನವಿಯವಾಗಿ ನಡೆಸಿಕೊಂಡ ಮೃಗೀಯ ವರ್ತನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕ್ರೈಸ್ತ ಮುಖಂಡರು ವಿಷಾದ ವ್ಯಕ್ತಪಡಿಸಿದರು.

ಈ ಹೇಯ ಕೃತ್ಯವನ್ನು ಖಂಡಿಸಿ, ಮಣಿಪುರದ ಅಮಾಯಕ ಸಹೋದರ ಸಹೋದರಿಯರಿಗೆ ಆದಂತಹ ಅನ್ಯಾಯ ಹಾಗೂ ಕಿರುಕುಳವನ್ನು ಖಂಡಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು. ಹೊನ್ನಾವರ ಸೇಂಟ್ ಇಗ್ನಿಷಿಯಸ್ ಆಸ್ಪತ್ರೆಯ ಕಾಲೇಜಿನಲ್ಲಿ ಕಲಿಯುವ ಮಣಿಪುರ ಮೂಲದ ವಿದ್ಯಾರ್ಥಿಗಳು ಸಹ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

ವಿದ್ವಾಂಸಕ ಕ್ರತ್ಯಗಳಲ್ಲಿ ಶಾಮಿಲಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ, ರಾಜ್ಯದ ಬಾಂಧವರಿಗೆ ಸುರಕ್ಷತೆ ನೀಡುವಂತೆ ಮಣಿಪುರದ ವಿದ್ಯಾರ್ಥಿನಿ ಕಿಮ್ ಮಾಧ್ಯಮಗಳ ಎದುರು ಆತಂಕ ವ್ಯಕ್ತಪಡಿಸಿದಳು‌.

ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮುಯವರಿಗೆ, ಉತ್ತರ ಕನ್ನಡದ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಕಾರವಾರ ಧರ್ಮಪ್ರಾಂತ್ಯದ ಕ್ಯಾಥೋಲಿಕರು  ಮನವಿ ಅರ್ಪಿಸಿದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮನವಿ ಸ್ವೀಕಾರ ಮಾಡಿದರು. ಹಾಗೂ ಮನವಿಯನ್ನು ರಾಷ್ಟ್ರಪತಿಗೆ ಕಳುಹಿಸುವುದಾಗಿ ಹೇಳಿದರು.

ಮೆರವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಧರ್ಮಧ್ಯಕ್ಷ ಸ್ವಾಮಿ ಡೆರಿಕ್ ಫರ್ನಾಂಡಿಸ್ ಸೇರಿದಂತೆ ಜಿಲ್ಲೆಯ ಕ್ರೈಸ್ತ ಸಂಘಟನೆಗಳ ಮುಖಂಡರು, ಸೇಂಟ್ ಮಿಲಾಗ್ರೀಸ್ ಸಹಕಾರಿ ಸಂಘದ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಲಿಯೋ ಲೂಯಿಸ್ ಹಾಗೂ ಸಮಾನ ಮನಸ್ಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಚರ್ಚಗಳ ಫಾದರ್ಸ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಗಳಿಂದ ಬಂದ  2000ಕ್ಕೂ ಅಧಿಕ ಕ್ರೈಸ್ತ ಬಾಂಧವರು ಕಾರವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು‌ .

Advertisement

Udayavani is now on Telegram. Click here to join our channel and stay updated with the latest news.

Next