ನವದೆಹಲಿ: ಭಾರತ ಸರಕಾರ , ಅಸ್ಸಾಂ ಸರಕಾರ ಮತ್ತು ಅಸ್ಸಾಂನ ಎಂಟು ಬುಡಕಟ್ಟು ಬಂಡುಕೋರ ಗುಂಪುಗಳ ಪ್ರತಿನಿಧಿಗಳ ನಡುವಿನ ಐತಿಹಾಸಿಕ ತ್ರಿಪಕ್ಷೀಯ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದೆ.
ಅಸ್ಸಾಂನಲ್ಲಿ ಶಾಶ್ವತ ಶಾಂತಿಯನ್ನು ತರಲು ಎಂಟು ಬುಡಕಟ್ಟು ಬಂಡುಕೋರ ಸಂಘಟನೆಗಳೊಂದಿಗೆ ಒಪ್ಪಂದಕ್ಕೆ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಸಹಿ ಹಾಕಿದ್ದು, ಆದಿವಾಸಿ ರಾಷ್ಟ್ರೀಯ ವಿಮೋಚನಾ ಸೇನೆ, ಅಸ್ಸಾಂನ ಆದಿವಾಸಿ ಕೋಬ್ರಾ ಉಗ್ರಗಾಮಿ, ಬಿರ್ಸಾ ಕಮಾಂಡೋ ಫೋರ್ಸ್, ಸಂತಾಲ್ ಟೈಗರ್ ಫೋರ್ಸ್ ಮತ್ತು ಆದಿವಾಸಿ ಪೀಪಲ್ಸ್ ಆರ್ಮಿ ಸೇರಿದಂತೆ ಎಂಟು ಗುಂಪುಗಳ ನಡುವಿನ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಗುಂಪುಗಳು 2012 ರಿಂದ ಕದನ ವಿರಾಮದಲ್ಲಿದ್ದು, ಗೊತ್ತುಪಡಿಸಿದ ಶಿಬಿರಗಳಲ್ಲಿ ವಾಸಿಸುತ್ತಿವೆ.ಒಪ್ಪಂದಕ್ಕೆ ಸಹಿ ಹಾಕುವುದರಿಂದ ಅಸ್ಸಾಂನಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಹೊಸ ಯುಗಕ್ಕೆ ನಾಂದಿಯಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದು ಶರ್ಮಾ ಹೇಳಿದ್ದಾರೆ.
ಪರೇಶ್ ಬರುವಾ ನೇತೃತ್ವದ ನಿಷೇಧಿತ ಉಲ್ಫಾದ ಕಟ್ಟುನಿಟ್ಟಿನ ಬಣ ಮತ್ತು ಕಾಮತಾಪುರ ಲಿಬರೇಶನ್ ಆರ್ಗನೈಸೇಶನ್ ಹೊರತುಪಡಿಸಿ, ರಾಜ್ಯದಲ್ಲಿ ಸಕ್ರಿಯವಾಗಿರುವ ಇತರ ಎಲ್ಲಾ ಬಂಡಾಯ ಗುಂಪುಗಳು ಸರ್ಕಾರದೊಂದಿಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡಿವೆ.
ಜನವರಿಯಲ್ಲಿ, ತಿವಾ ಲಿಬರೇಶನ್ ಆರ್ಮಿ ಮತ್ತು ಯುನೈಟೆಡ್ ಗೂರ್ಖಾ ಪೀಪಲ್ಸ್ ಆರ್ಗನೈಸೇಶನ್‌ಗೆ ಸೇರಿದ ಎಲ್ಲಾ ಕಾರ್ಯಕರ್ತರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಶರಣಾದರು.ಆಗಸ್ಟ್‌ನಲ್ಲಿ, ಕುಕಿ ಬುಡಕಟ್ಟು ಒಕ್ಕೂಟದ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು.
ಡಿಸೆಂಬರ್ 2020 ರಲ್ಲಿ, ಬೋಡೋ ಉಗ್ರಗಾಮಿ ಗುಂಪು ಎನ್ ಡಿಎಫ್ ಬಿ ಯ ಎಲ್ಲಾ ಬಣಗಳಿಗೆ ಸೇರಿದ ಸುಮಾರು 4,100 ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಅಧಿಕಾರಿಗಳ ಮುಂದೆ ಶರಣಾಗಿದ್ದರು.