ನಂಜನಗೂಡು: ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ತ್ಯಾಜ್ಯದಿಂದ ಗ್ರಾಮದಲ್ಲಿ ಕಲುಷಿತ ವಾತಾವರಣೆ ನಿರ್ಮಾಣವಾಗಿದೆ ಎಂದು ಆಪಾದಿಸಿ ಮತದಾನವನ್ನು ಬಹಿಷ್ಕರಿಸಿದ್ದ ತಾಲೂಕಿನ ಅಳಗಂಚಿಪುರ ಗ್ರಾಮಸ್ಥರೊಂದಿಗೆ ತಹಶೀಲ್ದಾರ್ ಶಾಂತಿ ಸಭೆ ನಡೆಸಿದರು.
ಸಕ್ಕರೆ ಕಾರ್ಖಾನೆಯಿಂದ ಗ್ರಾಮದ ಕೊಳವೆ ಬಾವಿಗಳ ನೀರು ಕಲುಷಿತಗೊಂಡಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಲಿನವಾಗಿದೆ. ಹೀಗಾಗಿ ಈ ಕಾರ್ಖಾನೆಯನ್ನು ಗ್ರಾಮದಿಂದ ತೊಲಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು, ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮ ಕಾರ್ಯಾಲಯದಲ್ಲಿ ಶಾಂತಿ ಸಭೆ ನಡೆಸಿದ ತಹಶೀಲ್ದಾರ್ ಮಹೇಶ್ ಕುಮಾರ್, ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸುವುದು ಬೇಡ. ಮತದಾನ ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗೋಣ ಎಂದು ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ (ಎಥಿನಾಲ್) ಘಟಕದಿಂದ ಸುತ್ತಲಿನ ಕೊಳವೆ ಬಾವಿಗಳ ನೀರು ಕಲುಷಿತ, ಹಾರುವ ಬೂದಿ, ಧೂಳು, ಹೊಗೆ ಮತ್ತಿತರ ತ್ಯಾಜ್ಯದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ಪರಿಸರ, ಕೃಷಿ, ಆರೋಗ್ಯ ಇಲಾಖೆಗಳಿಂದ ವರದಿ ಕೇಳಲಾಗಿದ್ದು, ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು.
ಹೀಗಾಗಿ ನಿಮ್ಮ ತೀರ್ಮಾನವನ್ನು ಹಿಂಪಡೆದು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೇ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಅನಧಿಕೃತವಾಗಿದ್ದು, ಅದನ್ನು ಈ ಕ್ಷಣದಿಂದಲೇ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ಶ್ರೀಕಂಠರಾಜ ಅರಸು, ಮಲ್ಲುಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಣೇಶಮೂರ್ತಿ, ಆರ್‌ಐ ಮದೇವಪ್ರಸಾದ, ಗ್ರಾಪಂ ಸದಸ್ಯರಾದ ಗುರು, ಪರಶಿವ, ಮಂಜು ಶಿವಶಂಕರ, ಸಿದ್ದು, ಮರುಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.