Advertisement

ಹಬ್ಬಗಳು ಸಾಮರಸ್ಯ ಬೆಸೆಯುವ ಸಂಕೇತವಾಗಲಿ ಎಎಸ್‌ಪಿ ಶಿವಕುಮಾರ್

09:36 AM Jul 18, 2021 | Team Udayavani |

ಹುಣಸೂರು: ಹಬ್ಬಗಳು ಸಾಮರಸ್ಯ ಬೆಸೆಯುವ ಸಂಕೇತವಾಗಬೇಕು. ಹಬ್ಬದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ, ಅಕ್ರಮ ಚಟುವಟಿಕೆಗಳ ಬಗ್ಗೆ ನಿರ್ಭಿತಿಯಿಂದ ಮಾಹಿತಿ ನೀಡುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಶಿವಕುಮಾರ್ ಮನವಿ ಮಾಡಿದರು.

Advertisement

ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಜಾತಿ,ಧರ್ಮ ಮೀರಿ ಎಲ್ಲ ಸಮುದಾಯದವರನ್ನು ಒಂದು ಗೂಡಿಸುವುದೇ ಹಬ್ಬಗಳು, ಹಬ್ಬ,ಜಾತ್ರೆ ಹೆಸರಲ್ಲಿ ಅಶಾಂತಿ ಉಂಟು ಮಾಡುವವರು ನಮ್ಮ ನಡುವೆಯೇ ಇರುತ್ತಾರೆ ಅಂತವರ ಬಗ್ಗೆ ಮಾಹಿತಿ ನೀಡಿದಲ್ಲಿ ನಿಗಾ ಇಡಲಾಗುವುದು. ಪೊಲೀಸ್ ಎಂದರೆ ಬರೀ ಗಲಾಟೆ, ಜಗಳ ಬಿಡಿಸುವುದು ಮಾತ್ರ ಪೊಲೀಸರ ಕೆಲಸವಲ್ಲ, ಜನಸ್ನೇಹಿ ಪೊಲೀಸ್ ಕಾರ್ಯಕ್ರಮ ಜಾರಿಗೆ ತಂದಿದ್ದು, ಸಮಾಜದಲ್ಲಿ ಅಶಾಂತಿ ಉಂಟುಮಾಡುವವರಿಗೆ ತಿಳಿ ಹೇಳಿ ಅವರನ್ನು ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿಸುವ ಕಾರ್ಯವೂ ನಡೆಸುತ್ತೇವೆ. ಪೊಲೀಸರಿಗೂ ಕುಟುಂಬ, ವೈಯಕ್ತಿಕ ಜೀವನವಿದೆ ಎಂಬುದನ್ನ ಅರಿಯಿರಿ. ನಿಮ್ಮಂತೆ ನೆಮ್ಮದಿಯ ಜೀವನ ನಡೆಸಲು ಸಹಕಾರ ನೀಡಿ, ಹಬ್ಬಗಳಿಗೆ ಮುನ್ನ ಮಾತ್ರ ಸಭೆಗಳನ್ನು ಆಯೋಜಿಸದೆ ಅದರಾಚೆಗೆ ಚಿಂತಿಸಿ, ಸಮಾಜ ಸುಧಾರಣೆಗೆ ಬೇಕಾದ ಕಾರ್ಯಕ್ರಮಗಳನ್ನು ಆಯೋಜಿಸಲು ಮುಖಂಡರು ಹಾಗೂ ಅಧಿಕಾರಿಗಳು ಚಿಂತನೆ ನಡೆಸಿದಲ್ಲಿ ನಮ್ಮಿಂದ ಈ ಸಮಾಜಕ್ಕೆ ಕಿಂಚಿತ್ ನೆರವಾಗಬಹುದು. ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದ ಮೈಸೂರು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಎಲ್ಲರ ಬದುಕನ್ನು ದುರ್ಬಲಗೊಳಿಸಿದ್ದು, ಯಾವುದೇ ಹಬ್ಬಗಳ ವಿಜೃಂಭಣೆಗೆ ಅವಕಾಶ ವಿಲ್ಲದಂತಾಗಿದೆ. ಮುಂದೆ ಎಲ್ಲವೂ ಸುಧಾರಣೆಯಾಗಲಿದೆ ಅಲ್ಲಿಯವರೆಗೆ  ನಾಗರೀಕರು ತಾಲೂಕು-ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಅಗತ್ಯವಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿರೆಂದು ಸೂಚಿಸಿದರು.

ತಹಸೀಲ್ದಾರ್ ಬಸವರಾಜು ಮಾತನಾಡಿ ಕೊರೊನಾ ಕಡಿಕೆಯಾಗಿದ್ದರೂ ನಮ್ಮಿಂದ ದೂರವಾಗಿಲ್ಲವೆಂಬುದನ್ನು ಮರೆಯಬಾರದು, ಬಕ್ರೀದ್ ಸಂಭ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ, ಆದರೆ ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ. ಎಲ್ಲೂ ಕೂಡ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ, ಪೊಲೀಸರಿಂದ ಅನುಮತಿ ಪಡೆದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಸೀದಿಗಳಲ್ಲಿ ಒಂದು ಬಾರಿಗೆ ೫೦ ಜನರಿಗೆ ಮಾತ್ರ ಪ್ರಾರ್ಥನೆ ಮಾಡಲು ಅವಕಾಶವಿದೆ, ಇನ್ನು ಸಮಾಧಿಗೆ ಪೂಜೆ ಮಾಡಲು ಗುಂಪುಗುಂಪಾಗಿ ತೆರಳುವಂತಿಲ್ಲ, ಆಯಾ ಕುಟುಂಬಗಳು ಹೋಗಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮುಖಂಡರು ಯುವಕರಿಗೆ ತಿಳುವಳಿಕೆ ಹೇಳುವ ಮೂಲಕ ಸ್ವೇಚ್ಚಾಚಾರಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ತಾಲೂಕು ಆಡಳಿತದೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನಗರಠಾಣೆ ಇನ್ಸ್‌ಫೆಕ್ಟರ್ ರವಿ ಮಾತನಾಡಿ ಬಕ್ರೀದ್ ವೇಳೆ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಮಸೀದಿಗಳಲ್ಲಿ ಅನುಮತಿಮೇರೆಗೆ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗುವುದು. ತುರ್ತು ಸಹಾಯಕ್ಕಾಗಿ ಇತ್ತೀಚೆಗೆ ಸರಕಾರವು ರಾಜ್ಯಾದ್ಯಂತ 112 ಸಹಾಯವಾಣಿ ಜಾರಿಗೆ ತಂದಿದ್ದು, ಬೆಂಕಿ ಅವಘಡ, ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ 112 ಕ್ಕೆ ಕರೆಮಾಡಿ ಪೊಲೀಸರು ತಕ್ಷಣವೇ ಸ್ಪಂದಿಸಲಿದ್ದಾರೆಂದು ಮಾಹಿತಿ ನೀಡಿದರು.

ಡಿವೈಎಸ್‌ಪಿ ಯೋಗೇಂದ್ರನಾಥ್, ಗ್ರಾಮಾಂತರ ಠಾಣೆ ಇನ್ಸ್‌ಫೆಕ್ಟರ್ ಚಿಕ್ಕಸ್ವಾಮಿ, ನಗರಸಭೆ ಸದಸ್ಯ ಮಾಲಿಕ್ ಪಾಷಾ, ಮುಖಂಡ ಜಾಕೀರ್‌ಹುಸೇನ್ ಮಾತನಾಡಿದರು.

Advertisement

ಈ ವೇಳೆ ಎಸ್.ಐ.ಗಳಾದ ಜಮೀರ್ ಅಹಮದ್, ಪಂಚಾಕ್ಷರಿಸ್ವಾಮಿ, ಹುಡಾ ಅಧ್ಯಕ್ಷ ಗಣೇಶಕುಮಾರಸ್ವಾಮಿ, ನಗರಸಭೆ ಸದಸ್ಯರಾದ ಕೃಷ್ಣರಾಜಗುಪ್ತ, ಯೂನಸ್, ಶರವಣ, ಮಾಜಿ ಸದಸ್ಯ ಮಜಾಜ್ ಅಹಮದ್, ತಾ.ಪಂ.ಮಾಜಿ ಸದಸ್ಯ ಅಜ್ಗರ್‌ಪಾಷಾ ಸೇರಿದಂತೆ ಅನೂಕ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next